ಏಷ್ಯಾ ಕಪ್ 2025 ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡವು ಅನಾಯಾಸ ಜಯ ದಾಖಲಿಸಿತು. 7 ವಿಕೆಟ್ ಅಂತರದಿಂದ ಪಾಕ್ ತಂಡವನ್ನು ಸೂರ್ಯ ಕುಮಾರ್ ಯಾದವ್ ಪಡೆ ಸೋಲಿಸಿತು.
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಪಾಕ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಭಾರತದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕ್ ಕೇವಲ 128 ರನ್ ಗುರಿ ನೀಡಿತ್ತು. ಈ ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ 15.5 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 131 ರನ್ ಪೇರಿಸಿ ಜಯಭೇರಿ ಬಾರಿಸಿತು.
ಕ್ರೀಡಾಂಗಣದ ಎಂದಿನಂತೆ ಉಭಯ ತಂಡಗಳ ಪಂದ್ಯಕ್ಕೆ ಸೇರುವಂತೆ ಗ್ಯಾಲರಿಗಳು ನಿರೀಕ್ಷೆಯಂತೆ ಪೂರ್ಣ ತುಂಬಿರಲಿಲ್ಲ. ಆದರೆ, ಇದರಿಂದ ಭಾರತದ ಆಟಗಾರರ ಆಲ್‌ರೌಂಡ್ ಆಟದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಆರಂಭಿಕರಾಗಿ ಆಗಮಿಸಿದ ಅಭಿಷೇಕ್ ಶರ್ಮಾ 13 ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿ ಮೂಲಕ 31 ರನ್ ಪೇರಿಸಿದರೆ, ಶುಭಮನ್ ಗಿಲ್ 10 ರನ್ ಗಳಿಸಿ ಔಟಾದರು. ಬಳಿಕ ನಾಯಕ ಸೂರ್ಯ ಕುಮಾರ್ ಯಾದವ್ ಔಟಾಗದೇ 47 ರನ್ ಗಳಿಸಿದರೆ, ತಿಲಕ್ ವರ್ಮಾ 31 ರನ್ ಪೇರಿಸಿ ವಿಕೆಟ್ ಒಪ್ಪಿಸಿದರು. ಶಿವಂ ದುಬೆ ಔಟಾಗದೇ 7 ರನ್ ಬಾರಿಸಿದರು.
ಕಳೆದ ಏಪ್ರಿಲ್‌ನಲ್ಲಿ ಪಹಲ್ಗಾಂನಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿಯನ್ನು ಖಂಡಿಸಿ ಭಾರತದ ಹಲವು ಕ್ರಿಕೆಟ್ ಅಭಿಮಾನಿಗಳು, ರಾಜಕೀಯ ಗಣ್ಯರು ಪಾಕ್ ಜತೆಗಿನ ಪಂದ್ಯವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದರು. ಆದರೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕಿದ್ದರಿಂದ ಪಾಕಿಸ್ತಾನ ವಿರುದ್ಧ ಭಾರತ ಕಣಕ್ಕೆ ಇಳಿದಿತ್ತು. ಪಹಲ್ಗಾಮ್ ದಾಳಿ ಬಳಿಕ ಮೊದಲ ಬಾರಿ ಉಭಯ ತಂಡಗಳು ಭಾನುವಾರ ಮುಖಾಮುಖಿಯಾದ ವೇಳೆ ಹಲವು ನಾಟಕೀಯ ಕ್ಷಣಗಳಿಗೂ ಪಂದ್ಯ ಸಾಕ್ಷಿಯಾಯಿತು.
ಟಾಸ್ ವೇಳೆ ಉಭಯ ತಂಡದ ನಾಯಕರು ಹಸ್ತಲಾಘವ ಮಾಡುವುದು ಸಂಪ್ರದಾಯ, ಆದರೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರೊಂದಿಗೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೈ ಕುಲುಕಲಿಲ್ಲ. ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಜಯದ ಸಿಕ್ಸರ್ ಬಾರಿಸುವ ಮೂಲಕ ಎದುರಾಳಿ ಆಟಗಾರರನ್ನು ತಲೆ ಎತ್ತಿಯೂ ನೋಡದೆ ಡಗೌಟ್‌ನತ್ತ ಸಾಗಿದರು. ಪಂದ್ಯದ ಬಳಿಕವೂ ಉಭಯ ತಂಡದ ಆಟಗಾರರು ಪರಸ್ಪರ ಹಸ್ತಲಾಘವ ಮಾಡಲಿಲ್ಲ.