ಸುಳ್ಳು ಹೇಳಬೇಡಿ ಮುಖ್ಯಮಂತ್ರಿಗಳೇ, “ಕೋತಿ ತಾನು ತಿಂದು, ಮೇಕೆಯ ಬಾಯಿಗೆ ಒರೆಸಿದಂತೆ” ನಿಮ್ಮ ಎಲ್ಲಾ ವೈಫಲ್ಯಗಳನ್ನೂ ಬಿಜೆಪಿಯ ಮೇಲೆ ಹೊರೆಸಿ ಪಲಾಯನವಾದಿಯಾಗಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನೇಮಕಾತಿ ವಿಳಂಬ ವಿಚಾರವಾಗಿ ವಿದ್ಯಾರ್ಥಿಗಳು ಧಾರವಾಡದಲ್ಲಿ ನಡೆಸಿದ ಬೃಹತ್ ಪ್ರತಿಭಟನೆ ನಂತರ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆಗೆ ವಿಜಯೇಂದ್ರ ತಿರುಗೇಟು ನೀಡಿ, “ನಿಮ್ಮ ಸರ್ಕಾರ ಭಂಡತನ ಭ್ರಷ್ಟತನ ಲೂಟಿಕೋರತನಕ್ಕೆ ಹೆಸರಾಗಿತ್ತು. ಈಗ ಸುಳ್ಳು ಹೇಳುವುದರಲ್ಲೂ ನಿಸ್ಸೀಮತನ ಪ್ರದರ್ಶಿಸಲು ಹೋಗುತ್ತಿದ್ದೀರಿ ಇದನ್ನು ನಮ್ಮ ವಿದ್ಯಾರ್ಥಿಗಳು ಮತ್ತು ಯುವಜನರು ತಿಳಿದುಕೊಳ್ಳದೇ ಇರುವಷ್ಟು ಮುಗ್ಧರಲ್ಲ ಎಂಬ ವಿವೇಕ ನಿಮಗಿರಲಿ” ಎಂದಿದ್ದಾರೆ.
“ಈ ಸರ್ಕಾರದಲ್ಲಿ ಇರುವ ನೌಕರರಿಗೇ ಸಂಬಳ ನೀಡಲು ಹಣವಿಲ್ಲ ಇನ್ನು ಹೊಸ ನೇಮಕಾತಿ ಪ್ರಕ್ರಿಯೆ ಆರಂಭಿಸುವುದನ್ನು ನಿರೀಕ್ಷಿಸಲು ಹೇಗೆ ಸಾಧ್ಯ?” ಹಿಂದಿನ ನಮ್ಮ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿರುವ ನೀವು ಅಧಿಕಾರಕ್ಕೆ ಬಂದ ನಂತರ 2,85,000 ಹುದ್ದೆಗಳನ್ನು ಏಕೆ ಖಾಲಿ ಉಳಿಸಿಕೊಂಡಿರಿ? ನ್ಯಾಯಾಲಯ ಹೆಚ್ಚುವರಿ ಮೀಸಲಾತಿ ಸಂಬಂಧದ ಆಕ್ಷೇಪಣೆಯ ಹೊರತಾಗಿಯೂ ಚಾಲ್ತಿಯಲ್ಲಿರುವ ಮೀಸಲಾತಿಯ ಅನ್ವಯ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ಮಧ್ಯ ಪ್ರವೇಶಿಸುವುದಿಲ್ಲ ಎಂದು ಕರ್ನಾಟಕ ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ವಿಭಾಗೀಯ ಪೀಠ ಈಗಾಗಲೇ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದೆ. ಆದಾಗ್ಯೂ ನಿಮ್ಮ ಸರ್ಕಾರ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಏಕೆ ಹಿಂದೇಟು ಹಾಕುತ್ತಿದೆ” ಎಂದು ಪ್ರಶ್ನಿಸಿದ್ದಾರೆ.
“ಏಕೆಂದರೆ ಸರ್ಕಾರದ ಖಜಾನೆ ಖಾಲಿಯಾಗಿದೆ. ನೇಮಕಾತಿ ಮಾಡಲು ನ್ಯಾಯಾಲಯದತ್ತ ಬೊಟ್ಟು ಮಾಡುತ್ತಿರುವುದು, ನಿಮ್ಮ ನುಣುಚಿಕೊಳ್ಳುವ ತಂತ್ರವಾಗಿದೆ. ನಿಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಅತೃಪ್ತ ಶಾಸಕರಗಳಿಗೆ ನಿಗಮಗಳಲ್ಲಿ ಹುದ್ದೆ ಕಲ್ಪಿಸಿ ಸಚಿವ ಸ್ಥಾನದ ವೇತನ, ಸೌಲಭ್ಯ ಕಲ್ಪಿಸಲು ತೋರಿದ ಆಸಕ್ತಿ ನಿರುದ್ಯೋಗಿಗಳ ಮೇಲೆಕಿಲ್ಲ? ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದಕ್ಕಿಂತಲೂ ಬೇರೆ ಆದ್ಯತೆ ನಿಮ್ಮ ಸರ್ಕಾರಕ್ಕೆ ಏನಿದೆ? ಈ ಕೂಡಲೇ ನೇಮಕಾತಿಯನ್ನು ಆರಂಭಿಸದಿದ್ದರೆ ವಿದ್ಯಾರ್ಥಿಗಳ, ನಿರುದ್ಯೋಗಿ ಯುವಜನರ ಆಕ್ರೋಶ ಮುಗಿಲು ಮುಟ್ಟಲಿದೆ. ಮುಂದೆ ಉದ್ಭವಿಸುವ ಪರಿಸ್ಥಿತಿಗೆ ನಿಮ್ಮ ಸರ್ಕಾರವೇ ಹೊಣೆಯಾಗಲಿದೆ” ಎಂದು ಎಚ್ಚರಿಸಿದ್ದಾರೆ.
“ಈ ಹಿಂದೆ ಬಿಜೆಪಿ ಸರ್ಕಾರ ಕಲ್ಪಿಸಿದ್ದ ಶೇ. 56 ರ ಹೆಚ್ಚುವರಿ ಮೀಸಲಾತಿಯ ಅನ್ವಯವೂ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲು ಸರ್ಕಾರ ಇಚ್ಚಾಶಕ್ತಿಯಿಂದ ನ್ಯಾಯಾಲಯದಲ್ಲಿ ಹೋರಾಡಲಿ. ಇಲ್ಲದಿದ್ದರೆ ಈ ಸರ್ಕಾರ ನಿರುದ್ಯೋಗಿ ಯುವಜನರ, ಹಿಂದುಳಿದವರ, ಪರಿಶಿಷ್ಟರ ಭವಿಷ್ಯಕ್ಕೆ ಕಲ್ಲು ಹಾಕಲೆಂದೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎಂಬ ಕುಖ್ಯಾತಿ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಪರಿಶಿಷ್ಟ ಜಾತಿ, ಪಂಗಡಗಳಿಗೆ ಶೇ 6 ರಷ್ಟು ಮೀಸಲಾತಿ ಕೊಟ್ಟಿದ್ದು ಬಿಜೆಪಿ ಸರ್ಕಾರ ಅದನ್ನು ಜಾರಿಗೊಳಿಸದೇ ನಿರ್ಲಕ್ಷ್ಯತನ ತೋರುತ್ತಿರುವವರು ನೀವಲ್ಲದೇ ಮತ್ತಿನ್ಯಾರು” ಎಂದು ಕೇಳಿದ್ದಾರೆ.
“ಒಳಮೀಸಲಾತಿಯಲ್ಲಿ ಗೊಂದಲ ಮೂಡಿಸಿ, ಪರಿಶಿಷ್ಟರ ಯಾವ ಸಮುದಾಯಗಳಿಗೂ ನ್ಯಾಯ ಒದಗಿಸದೇ ಶೇ 1 ರಷ್ಟು ಮೀಸಲಾತಿಯನ್ನು ತಬ್ಬಲಿತನ ಅನುಭವಿಸುವ ಅಲೆಮಾರಿಗಳಿಗೆ ನೀಡದೇ ಅನ್ಯಾಯವೆಸಗಿದವರು ನೀವಲ್ಲದೇ ಮತ್ತಿನ್ಯಾರು? ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಿಸುವ ಹಾಗೂ ಸೇವಾ ಭದ್ರತೆ ಒದಗಿಸುವ ಆಶ್ವಾಸನೆ ನೀಡಿ ಮಾತಿಗೆ ತಪ್ಪಿದವರು ನೀವಲ್ಲದೇ ಮತ್ತಿನ್ಯಾರು? ಹಿಂದುಳಿದ ಸಮುದಾಯಗಳ ನಿಗಮಗಳಿಗೆ ಅನುದಾನ ನೀಡದೇ ಅವರ ಕಲ್ಯಾಣ ಕಾರ್ಯಗಳಿಗೆ ಕಲ್ಲು ಹಾಕಿದವರು ನೀವಲ್ಲದೇ ಮತ್ತಿನ್ಯಾರು? ಹೇಳುತ್ತಾ ಹೋದರೆ ನಿಮ್ಮ ಸರ್ಕಾರದ ವೈಫಲ್ಯದ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ, ಸುಳ್ಳು ಹೇಳುವುದನ್ನು ಇನ್ನಾದರೂ ಬಿಡಿ. ರಾಜ್ಯದಲ್ಲಿ ಯುವಜನರ ಆಕ್ರೋಶ ಮುಗಿಲು ಮುಟ್ಟಿದೆ. ಅದು ನಿಮ್ಮ ಸರ್ಕಾರವನ್ನು ಸುಡುವ ಮುನ್ನ ಪ್ರಾಮಾಣಿಕತೆಯಿಂದ ನಡೆದುಕೊಳ್ಳುವ ಇಚ್ಚಾಶಕ್ತಿ ಪ್ರದರ್ಶಿಸಿ, ಇಲ್ಲದಿದ್ದರೆ ಅಧಿಕಾರ ತ್ಯಜಿಸಿ ರಾಜ್ಯದ ಜನತೆಯ ಕ್ಷಮೆಯಾಚಿಸಿ” ಎಂದು ಆಗ್ರಹಿಸಿದ್ದಾರೆ.


