ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಚಿನ್ ಪಾಂಚಾಳ ಅವರಿಗೆ ಐವರು ಸೋದರಿಯರಿದ್ದು, ಒಬ್ಬರಿಗಾದರೂ ಸರ್ಕಾರಿ ನೌಕರಿ ನೀಡುವಂತೆ ತಾವು ಮನವಿ ಮಾಡುವುದಾಗಿದೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿಂದು ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, “ಸಚಿನ್ ಪಾಂಚಾಳ ಸಾವು ಅತ್ಯಂತ ದುಃಖದಾಯಕ. ಅವರು ನನ್ನ ಮತಕ್ಷೇತ್ರದವರಾಗಿದ್ದು, ಈ ದುರ್ಘಟನೆಯ ಬಳಿಕ ತಾವು ಹೋಗಿ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಸ್ವತಂತ್ರ ತನಿಖೆಯ ಭರವಸೆ ನೀಡಿದ್ದೆ. ಈಗ ಪ್ರಕರಣವನ್ನು ಸರ್ಕಾರ ಸಿಓಡಿಗೆ ವಹಿಸಿದ್ದು, ನಿಷ್ಪಕ್ಷಪಾತ ತನಿಖೆ ನಡೆಯುತ್ತಿದೆ” ಎಂದು ಹೇಳಿದರು.
“ಬಿಜೆಪಿಯವರಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ವಿಚಾರ ಇಲ್ಲ. ಹೀಗಾಗಿ ಅಪಪ್ರಚಾರದಲ್ಲಿ ನಿರತವಾಗಿದೆ. ಪ್ರಿಯಾಂಕ್ ಖರ್ಗೆ ವಿರುದ್ಧವೂ ವಿನಾಕಾರಣ ಆರೋಪ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
“ಬಿಜೆಪಿ ನಾಯಕರ ಮೇಲೆ ಹಲವು ಭ್ರಷ್ಟಾಚಾರ ಆರೋಪ, ಅಕ್ರಮದ ಆರೋಪ ಇದೆ, ಆ ಬಗ್ಗೆ ಯಾರೂ ಮಾತನಾಡಲ್ಲ. ಆದರೆ ಪ್ರಿಯಾಂಕ್ ಖರ್ಗೆ ವಿರುದ್ಧ ಡೆತ್ ನೋಟ್‌ನಲ್ಲಿ ಯಾವುದೇ ಆರೋಪ ಇಲ್ಲದಿದ್ದರೂ ರಾಜೀನಾಮೆ ಕೇಳುವುದು ಅಸಮಂಜಸ, ಇದು ರಾಜಕೀಯ ಪ್ರೇರಿತ” ಎಂದರು.