ಮೈಸೂರು ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ರಸ್ತೆಗೆಂದು ಮೀಸಲಿಟ್ಟ ಜಾಗವನ್ನೂ ಸೇರಿಸಿ ಕ್ರಯಪತ್ರ ಮಾಡಿಸಿಕೊಂಡಿದ್ದಾರೆ ಎನ್ನುವ ಆರೋಪ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ ಎಂ ಪಾರ್ವತಿ ವಿರುದ್ಧ ಕೇಳಿಬಂದಿದೆ.
ಮೈಸೂರಿನಲ್ಲಿ ಈ ಕುರಿತ ದಾಖಲೆಗಳನ್ನು ಆರ್‌ಟಿಐ ಕಾರ್ಯಕರ್ತ ಗಂಗರಾಜು ಶನಿವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿ, “ಇದೀಗ ವಿವಾದಿತ ಜಾಗವನ್ನು ಮುಡಾಕ್ಕೆ ವಾಪಸ್ ನೀಡಿರುವ ಪಾರ್ವತಿ ಅವರು ಆಗಸ್ಟ್ 31ರಂದು ತಿದ್ದುಪಡಿ ಕ್ರಯಪತ್ರ ಮಾಡಿಸಿಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಹೆಬ್ಬಾಳ ಗ್ರಾಮದ ಸರ್ವೆ 445ರಲ್ಲಿ 20 ಗುಂಟೆ ಜಾಗವನ್ನು ಪಾರ್ವತಿ ಅವರು ಎ.ಎಸ್. ಗಣೇಶ ಎಂಬುವರಿಂದ 2023ರ ಸೆ. 29 ರಂದು 1.85 ಕೋಟಿಗೆ ಖರೀದಿಸಿದ್ದರು. ಒಟ್ಟು 20 ಸಾವಿರ ಚದರ ಅಡಿಯ ನಿವೇಶನ ಇದಾಗಿದೆ. ಇದರಲ್ಲಿ 8 ಸಾವಿರ ಚ.ಅಡಿ ಜಾಗವನ್ನು ಈಗಾಗಲೇ ಹಿಂದಿನ ಮಾಲೀಕರು ಪ್ರಾಧಿಕಾರಕ್ಕೆ ರಸ್ತೆ ಹಾಗೂ ನೀರಿನ ಪೈಪ್ ಲೇನ್ ಗಾಗಿ ಬಿಟ್ಟುಕೊಟ್ಟಿದ್ದರು. ಆದರೆ ಪಾರ್ವತಿ ಅವರು ಇದನ್ನೂ ಸೇರಿಸಿ ತಮ್ಮ ಹೆಸರಿಗೆ ಕ್ರಯ ಮಾಡಿಸಿಕೊಂಡಿದ್ದರು ಎಂದು ಗಂಗರಾಜು ದೂರಿದ್ದಾರೆ.
“ನಾನು ಈ ಬಗ್ಗೆ ಆರ್ ಟಿಐ ಅಡಿ ದಾಖಲೆ ಕೋರಿ ಮಾಹಿತಿ ಸಲ್ಲಿಸಿದ್ದೆ. ಇದರ ಮಾಹಿತಿ ತಿಳಿಯುತ್ತಲೇ ಪಾರ್ವತಿ ಅವರು ಇದೇ ವರ್ಷ ಆಗಸ್ಟ್ 30ರಂದು ಇದೇ ಆಸ್ತಿಗೆ ತಿದ್ದುಪಡಿ ಕ್ರಯ ಮಾಡಿಕೊಂಡಿದ್ದಾರೆ. 31ರಂದು ಮತ್ತೊಂದು ತಿದ್ದುಪಡಿ ಕ್ರಯ ಮಾಡಿಸಿಕೊಂಡು 8900 ಚ.ಡಿ. ಜಾಗವನ್ನು ಮುಡಾಕ್ಕೆ ಬಿಟ್ಟುಕೊಟ್ಟಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.