Homeಕರ್ನಾಟಕಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ; ಅಧಿಕಾರಿಗಳ ಜೊತೆ ಸಚಿವ ಎಂ ಬಿ ಪಾಟೀಲ್‌ ಸಭೆ

ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ; ಅಧಿಕಾರಿಗಳ ಜೊತೆ ಸಚಿವ ಎಂ ಬಿ ಪಾಟೀಲ್‌ ಸಭೆ

ವೇಗವಾಗಿ ಬೆಳೆಯುತ್ತಿರುವ ಮತ್ತು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಬೆಂಗಳೂರು ಮಹಾನಗರದ ಮುಂಬರುವ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸುವ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ‌ ಬಿ ಪಾಟೀಲ್ ಅವರು ಅಧಿಕಾರಿಗಳೊಂದಿಗೆ ಪ್ರಾಥಮಿಕ ಹಂತದ ಚರ್ಚಿಸಿದರು.

ವಿಧಾನಸೌಧ ಸಮಿತಿ ಕೊಠಡಿಯಲ್ಲಿ ನಡೆದ ದೂರಗಾಮಿ ದೃಷ್ಟಿಯುಳ್ಳ ಈ ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಎನ್. ಮಂಜುಳಾ, ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಸಿ.ಸತೀಶ, ಕಾರ್ಯನಿರ್ವಾಹಕ ನಿರ್ದೇಶಕ ಡಿ.ಪಿ.ಪ್ರಕಾಶ ಮತ್ತಿತರರು ಭಾಗವಹಿಸಿದ್ದರು. ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಸಾಧ್ಯಾಸಾಧ್ಯತೆ ವರದಿ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಸಚಿವರು, ದೆಹಲಿ ಮತ್ತು ಮುಂಬೈ ನಂತರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮೂರನೇ ಅತಿ ದಟ್ಟಣೆಯ ಏರ್ಪೋರ್ಟ್ ಆಗಿದೆ. ಕಳೆದ ಸಾಲಿನಲ್ಲಿ ಇಲ್ಲಿ 37.5 ಮಿಲಿಯನ್ ಪ್ರಯಾಣಿಕರ ಮತ್ತು 4 ಲಕ್ಷ ಟನ್ ಗೂ ಹೆಚ್ಚಿನ ಸರಕು ಸಾಗಣೆ ನಿರ್ವಹಣೆ ಆಗಿದೆ. ಈ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದಲ್ಲಿ ಎರಡನೇ ವಿಮಾನ ನಿಲ್ದಾಣದ ಅಗತ್ಯ ಇದೆ ಎಂದಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ‌ ವಿಮಾನ ನಿಲ್ದಾಣ ನಿರ್ಮಿಸುವಾಗ ಬಿಐಎಎಲ್ ಸಂಸ್ಥೆ, ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡು 25 ವರ್ಷಗಳವರೆಗೆ (ಅಂದರೆ 2033)150 ಕಿ.ಮೀ. ವ್ಯಾಪ್ತಿಯಲ್ಲಿ ಇನ್ನೊಂದು ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದು ಹೇಳಿತ್ತು. ಈ ಷರತ್ತು ಇನ್ನು ಒಂಬತ್ತು ವರ್ಷಗಳಲ್ಲಿ ಮುಗಿಯಲಿದೆ. ಆದ್ದರಿಂದ ಈಗಿನಿಂದಲೇ ನಾವು ಎರಡನೇ ವಿಮಾನ ನಿಲ್ದಾಣದ ಬಗ್ಗೆ ಮುಂದಡಿ ಇಡಬೇಕಾಗಿದೆ ಎಂದು ಅವರು ವಿವರಿಸಿದ್ದಾರೆ.

ಬೆಂಗಳೂರಿನ ಜನಸಂಖ್ಯೆ ಈಗಾಗಲೇ ಒಂದು ಕೋಟಿ ದಾಟಿದೆ. ಇಲ್ಲಿ ಜಾಗತಿಕ ಮಟ್ಟದ ಕಂಪನಿಗಳಿವೆ. ಸುತ್ತಮುತ್ತಲಿನ ಜಿಲ್ಲೆಗಳ ಜತೆಗೆ ಆಂಧ್ರಪ್ರದೇಶದ ಕೆಲವು ಜಿಲ್ಲೆಗಳ ಜನರೂ ಈಗಿರುವ ವಿಮಾನ ನಿಲ್ದಾಣದ ಮೇಲೆ ಅವಲಂಬಿತರಾಗಿದ್ದಾರೆ. 2033ರ ಹೊತ್ತಿಗೆ ಈಗಿನ ವಿಮಾನ ನಿಲ್ದಾಣವು ಪ್ರಯಾಣಿಕರ ನಿರ್ವಹಣೆಯ ತುತ್ತತುದಿ ಮುಟ್ಟಲಿದೆ. ಸರಕು ಸಾಗಣೆ ಪ್ರಮಾಣ ಕೂಡ 2040ರ ಹೊತ್ತಿಗೆ ಈ ಮಟ್ಟ ಮುಟ್ಟಲಿದೆ ಎಂದು ಅವರು ಹೇಳಿದ್ದಾರೆ.

ಭೂ ಸ್ವಾಧೀನ, ಪರಿಹಾರ ಹಂಚಿಕೆ ಇತ್ಯಾದಿಗಳಿಗೆ ದೀರ್ಘ ಸಮಯ ಹಿಡಿಯುತ್ತದೆ. ಆದ್ದರಿಂದ ನಾವು ಈಗಿನಿಂದಲೇ ಕಾರ್ಯಪ್ರವೃತ್ತರಾಗುತ್ತಿದ್ದೇವೆ. ಎರಡನೆಯ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸುವುದರಿಂದ ರಾಜಧಾನಿಯ ಆಚೆಗೂ ಕೈಗಾರಿಕಾ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments