ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯಾದ ಅನ್ನಭಾಗ್ಯದಡಿ ಫಲಾನುಭವಿಗಳಿಗೆ ನೀಡುತ್ತಿದ್ದ ಹಣದ ಬದಲಿಗೆ ಅಕ್ಕಿಯನ್ನೇ ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ವಿಧಾನಸೌಧದಲ್ಲಿ ಮಾತನಾಡಿದ ಆಹಾರ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪ, “ಕೇಂದ್ರ ಸರ್ಕಾರದಿಂದ ಅಕ್ಕಿ ಲಭ್ಯವಿರುವ ಹಿನ್ನೆಲೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ಒಎಂಎಸ್‌ಎಸ್ ಯೋಜನೆ ಅಡಿಯಲ್ಲಿ ಖರೀದಿಸಿ ಈ ತಿಂಗಳಿನಿಂದಲೇ ಅಕ್ಕಿ ವಿತರಿಸಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆ ಅಡಿ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಘೋಷಣೆ ಮಾಡಿತ್ತು. ನಂತರದ ದಿನಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಅಕ್ಕಿ ಲಭ್ಯವಾಗದ ಕಾರಣ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಕೊಟ್ಟು, ಉಳಿದ 5 ಕೆಜಿ ಅಕ್ಕಿ ಬದಲಿಗೆ 170 ರೂ. ನೀಡಲಾಗುತ್ತಿತ್ತು.
‘ಅನ್ನಭಾಗ್ಯ’ ಯೋಜನೆಯಡಿ ಕೆಲ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್‌ದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಹಣ ಬ್ಯಾಂಕ್ ಖಾತೆಗೆ ಕಳೆದ ಮೂರು ತಿಂಗಳಿನಿಂದ ಜಮೆಯಾಗಿಲ್ಲ. ಇದು ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೆಲ ಫಲಾನುಭವಿಗಳಿಗೆ ಡಿಸೆಂಬರ್ ತಿಂಗಳ ಹಣ ಜನವರಿ ತಿಂಗಳಲ್ಲಿ ಖಾತೆಗಳಿಗೆ ಸಂದಾಯವಾಗಿದೆ. ಆದರೆ, ಹಲವರಿಗೆ ಮೂರು ತಿಂಗಳಿನಿಂದ ಡಿಬಿಟಿ ಮೂಲಕ ಹಣ ಬಂದಿಲ್ಲ. ಅನ್ನಭಾಗ್ಯದ ಹಣಕ್ಕಾಗಿ ಕಾದು ಕಾದು ಬೇಸರಗೊಂಡಿರುವ ಹಲವು ಫಲಾನುಭವಿ ಮಹಿಳೆಯರು ಆಹಾರ ಇಲಾಖೆಯ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದರು.