ಹತ್ತು ವರ್ಷದ ಬಳಿಕ ಕಲಬುರಗಿಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದ್ದು, ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಿಂದ ಆ ಭಾಗದ ಅಭಿವೃದ್ಧಿಯ ವೇಗ ಹೆಚ್ಚಲಿದೆ. ಜೊತೆಗೆ ಮುಖ್ಯವಾಗಿ ಬೀದರ್-ರಾಯಚೂರು ಪಟ್ಟಣಗಳನ್ನು ನಗರಪಾಲಿಕೆಗಳನ್ನಾಗಿ ಮಾಡುವ ನಿರ್ಣಯ ಕೂಡ ತೆಗೆದುಕೊಳ್ಳಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಸಂಪುಟ ಸಭೆಯಲ್ಲಿ ಒಟ್ಟು 56 ವಿಷಯಗಳು ಚರ್ಚೆಯಾಗಿ ಒಪ್ಪಿಗೆ ಪಡೆಯಲಾಗಿದೆ.
ಇದರಲ್ಲಿ 46 ವಿಷಯಗಳು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಪಟ್ಟ ಸಂಗತಿಗಳನ್ನು ಒಪ್ಪಿಗೆ ಪಡೆಯಲಾಗಿದೆ. ಒಟ್ಟು 56 ವಿಷಯಗಳಿಂದ 12692 ಕೋಟಿ ರೂಪಾಯಿ ವೆಚ್ಚವಾಗುತ್ತಿದ್ದು, ಇದರಲ್ಲಿ 46 ವಿಷಯಗಳ ಒಟ್ಟು ಮೊತ್ತ 11,770 ಕೋಟಿ ರೂ.ಆಗಿದೆ.
ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿ, “ಮಿನಿ ವಿಧಾನಸೌಧಗಳಿಗೆ ಪ್ರಜಾಸೌಧ ಎಂದು ನಾಮಕರಣ ಮಾಡಲು ತೀರ್ಮಾನ ಮಾಡಲಾಗಿದೆ. 17439 ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ತೀರ್ಮಾನ ಮಾಡಲಾಗಿದೆ. 11770 ಕೋಟಿ ರೂಪಾಯಿಯಲ್ಲಿ , ಕೃಷಿ ಇಲಾಖೆಗೆ 100 ಕೋಟಿ, ಕೈಗಾರಿಕಾ ಇಲಾಖೆಗೆ 1550 ಕೋಟಿ , ಅರಣ್ಯ 32, ಆರೋಗ್ಯ 910 ಕೋಟಿ ಸೇರಿ ನಾನಾ ಇಲಾಖೆಗಳಿಗೆ ಹಣ ಹಂಚಿಕೆ ಮಾಡಲಾಗಿದೆ” ಎಂದು ಹೇಳಿದರು.
“ಕಲ್ಯಾಣ ಕರ್ನಾಟಕದಲ್ಲಿ ಹೊಸದಾಗಿ 45 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಲು ನಿರ್ಣಯ, 31 ಸಮುದಾಯ ಆರೋಗ್ಯ ಕೇಂದ್ರಗಳನ್ನು ಮಾಡಲು ತೀರ್ಮಾನ ಮಾಡಿದ್ದೇವೆ. 9 ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಇದರಲ್ಲಿ ಎರಡನ್ನು ಜಿಲ್ಲಾ ಆಸ್ಪತ್ರೆಗಳನ್ನಗಿ ಮೇಲ್ದರ್ಜೆಗೆ ಏರಿಸಲಾಗುವುದು. ಇದಕ್ಕೆ 892 ಕೋಟಿ ವೆಚ್ಚ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
“ಬೀದರ ಜಿಲ್ಲೆಯ ಹೊನ್ನಿಕೇರಿ ಮೀಸಲು ಅರಣ್ಯ ಮತ್ತು ಇತರೆ ಜೀವವೈವಿಧ್ಯ ಪ್ರದೇಶಗಳಲ್ಲಿ ಪರಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾತ್ಮಕ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಿರುವ ಒಟ್ಟು ಮೊತ್ತ 1500 ಲಕ್ಷ ರೂ.ಗಳನ್ನು ಕಲ್ಯಾಣ ಕರ್ನಾಟಕ ಪ್ರದೇಸ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯ ಅನುದಾನದಿಂದ ಹಂಚಿಕೆ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲು ಸಂಪುಟ ಒಪ್ಪಿದೆ” ಎಂದು ಸಿದ್ದರಾಮಯ್ಯ ವಿವರಿಸಿದರು.
ಸಭೆಯ ಇತರ ತೀರ್ಮಾನಗಳು
ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಅಧಿಕಾರಿ/ಸಿಬ್ಬಂದಿಗಳಿಗೆ 998 ಕೋಟಿ ರೂ. ವೆಚ್ಚದಲ್ಲಿ ವಸತಿ ಸಮುಚ್ಚಯ ನಿರ್ಮಾಣ ಮಾಡಲು ಉದ್ದೇಶಿಸಿರುವ ಸಮಗ್ರ ಟೌನ್‌ಶಿಪ್ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಅನುಮೋದಿಸಿದೆ.
ಆರ್ಥಿಕ ಇಲಾಖೆಯು ವಿಧಿಸಿರುವ ಷರತ್ತಿಗೊಳಪಟ್ಟು ಯಾದಗಿರಿ ಜಿಲ್ಲೆಯ ಶಹಾಪೂರ ನಗರಕ್ಕೆ, ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಯ ರೂ.29298.00 ಲಕ್ಷಗಳ (05 ವರ್ಷಗಳ ನಿರ್ವಹಣೆ ಮತ್ತು ದುರಸ್ಥಿ ಸೇರಿ) ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿದೆ.
ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 12 ಪರಿಶಿಷ್ಟ ಜಾತಿ ಮತ್ತು ಒಂದು ಪರಿಶಿಷ್ಟ ವರ್ಗಗಳ ಒಟ್ಟು 13 ವಸತಿ ಶಾಲೆಗಳಿಗೆ ಅಂದಾಜು ವೆಚ್ಚ 286.00 ಕೋಟಿ ರೂ.ಗಳಲ್ಲಿ (ಪ.ಜಾತಿ – ರು.264.00 ಕೋಟಿ ಪ.ವರ್ಗ-22.00 ಕೋಟಿ) ಸ್ವಂತ ಕಟ್ಟಡ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಒಪ್ಪಿಗೆ.
ಪಿಎಂ-ಮಿತ್ರ ಮೆಗಾ ಜವಳಿ ಪಾರ್ಕ್ಗೆ ವಸತಿ ಮತ್ತು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮದ್ರಿ ಗ್ರಾಮದ ಬಳಿ ಭೀಮಾ ನದಿಗೆ ಅಡ್ಡಲಾಗಿ ಅಣೆಗಕಟ್ಟನ್ನು ನಿಮಿಇಸಿ 3.63 ಎಂಎಲ್‌ಡಿ ಪ್ರಮಾಣದ ನೀರನ್ನು ಒದಗಿಸಲು ರೂ.35.00 ಕೋಟಿಗಳನ್ನು ರಾಜ್ಯ ಸರ್ಕಾರದ ವತಿಯಿಂದ ನೀಡಲು ಒಪ್ಪಿಗೆ.
ಬೀದರ ಜಿಲ್ಲೆಯ ಹೊನ್ನಿಕೇರಿ ಮೀಸಲು ಅರಣ್ಯ ಮತ್ತು ಇತರೆ ಜೀವವೈವಿಧ್ಯ ಪ್ರದೇಶಗಳಲ್ಲಿ ಪರಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾತ್ಮಕ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಿರುವ ಒಟ್ಟು ಮೊತ್ತ 1500.00 ಲಕ್ಷಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಿಂದ ಹಂಚಿಕೆ ಮಾಡಿ ವೆಚ್ಚ ಭರಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿದೆ.