ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ಅಮೃತಧಾರೆ’ ಧಾರಾವಾಹಿ ನಟಿ ಶ್ರುತಿ ಅವರು ಚಾಕು ಇರಿತಕ್ಕೆ ಒಳಗಾಗಿದ್ದಾರೆ. ನಟಿ ಶ್ರುತಿ ಅವರ ಪತಿಯೇ ಅವರಿಗೆ ಚಾಕು ಇರಿದಿದ್ದಾರೆ ಎನ್ನಲಾಗುತ್ತಿದೆ.
ಮೊದಲು ಶ್ರುತಿ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹೊಡೆದ ಅಮರೇಶ್ ಆ ನಂತರ ಚಾಕುವಿನಿಂದ ಶ್ರುತಿಯ ಹೊಟ್ಟೆ, ಪಕ್ಕೆಲುಬು, ತೊಡೆ ಹಾಗೂ ಕುತ್ತಿಗೆಗೆ ಚಾಕು ಹಾಕಿದ್ದಾನೆ. ಶ್ರುತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪತ್ನಿಯ ಶೀಲ ಶಂಕಿಸಿ ಪತಿ ಅಮರೇಶ್ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶ್ರುತಿ ಅವರ ಪತಿ ಅಮರೇಶ್ ಅವರನ್ನು ಬಂಧಿಸಿದ್ದಾರೆ.
ಇದೇ ಏಪ್ರಿಲ್ ತಿಂಗಳಲ್ಲಿ ಶ್ರುತಿ, ಅಮರೇಶ್ ಇಂದ ದೂರಾಗಿ ತಮ್ಮ ಅಣ್ಣನ ಮನೆಗೆ ಬಂದಿದ್ದರು. ಅಲ್ಲಿಯೇ ವಾಸವಿದ್ದರು. ಆದರೆ ಅದಾದ ಬಳಿಕವೂ ಸಹ ಮನೆಯ ಲೀಸ್ ಹಣದ ಕುರಿತಾಗಿ ಜಗಳ ನಡೆದಿತ್ತು. ಇದರ ಕುರಿತಾಗಿ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಶ್ರುತಿ ದೂರು ನೀಡಿದ್ದರು. ಬಳಿಕ ರಾಜಿ-ಸಂಧಾನ ನಡೆದು ನಿನ್ನೆಯಷ್ಟೆ (ಗುರುವಾರ) ಇಬ್ಬರೂ ಮತ್ತೆ ಒಟ್ಟಿಗೆ ನೆಲೆಸಲು ಒಪ್ಪಿದ್ದರು. ಮುನೇಶ್ವರ ಲೇಔಟ್ನ ಮನೆಯಲ್ಲಿ ಇಬ್ಬರೂ ವಾಸವಿದ್ದರು. ಆದರೆ ರಾಜಿ-ಸಂಧಾನ ನಡೆದ ಮಾರನೇಯ ದಿನವೇ ಅಂದರೆ ಶುಕ್ರವಾರ ಅಮರೇಶ್, ಶ್ರುತಿಗೆ ಚಾಕು ಇರಿದಿದ್ದಾನೆ.