ಧಣಿಸಂದ್ರದ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಯಲ್ಲಿ ನಡೆಯುತ್ತಿದೆ ಎನ್ನಲಾದ ದೇಶ ದ್ರೋಹ ಚಟುವಟಿಕೆ ಆರೋಪ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ [ಪ್ರೌಢ ಶಿಕ್ಷಣ] ನಿರ್ದೇಶಕರು ಆದೇಶಿಸಿದ್ದಾರೆ.
ಎಚ್.ಬಿ.ಆರ್ ಬಡಾವಣೆಯ ಅಬ್ದುಲ್ ರೆಹಮಾನ್ ಬಿನ್ ಅಬ್ದುಲ್ ಸಲಾಂ ಎಂಬುವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಸಲ್ಲಿಕೆಯಾಗಿರುವ ದೂರಿನ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.
ದೂರುದಾರರ ಪುತ್ರ ಇದೇ ಶಾಲೆಯಲ್ಲಿ 2025-26ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದು, ಸದರಿ ಶಾಲೆಯು ಕಾನೂನಿಗೆ ವಿರುದ್ಧವಾಗಿ ನಡೆಯುತ್ತಿದೆ. ಇಲ್ಲಿನ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಆಡಳಿತ ಮಂಡಳಿಯನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಅವರು ಕೋರಿದ್ದರು.
ಕಳೆದ 2019 ರ ನವೆಂಬರ್ 24 ರಂದು ಯೂ ಟ್ಯೂಬ್ ಚಾಲನ್ನ ವರದಿಯ ಪ್ರಕಾರ ಸದರಿ ಶಾಲೆಯಲ್ಲಿ ದೇಶ ವಿರೋಧಿ ಚಟುಟಿಕೆ ನಡೆಯುತ್ತಿದೆ. ಮುಸ್ಲಿಂ ಜನಾಂಗದವರ ಚರಿತ್ರೆಯನ್ನು ವಿವರಿಸುವ ಸಂದರ್ಭದಲ್ಲಿ ರಾಷ್ಟ್ರವನ್ನು ಮುಸ್ಮಾಂನರ ಆಡಳಿತಕ್ಕೆ ಒಳಪಡಿಸಬೇಕಾದ ಅಗತ್ಯಗಳ ಬಗ್ಗೆ ಪ್ರಸ್ತಾವನೆ ಮತ್ತು ಚರ್ಚೆಯನ್ನು ಜಾಮಿಯ ಮೊಹಮ್ಮದೀಯ ಮನ್ನೂರ ಎಜುಕೇಷನ್ ಸೊಸೈಟಿಯವರು ಮಾಡಿರುತ್ತಾರೆ ಎಂದು ಆಪಾದಿಸಿದ್ದಾರೆ.
ಸದರಿ ಇಸ್ಲಾಂ ಟ್ರಸ್ಟ್ ನವರು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾವಲ್ಲಿರುವ ಜಾಮಿಯ ಮೊಹಮ್ಮದೀಯ ಮನ್ಸೂರ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ ನಾಜಿಯ ಅನ್ಸಾರಿ ಬೆಂಗಳೂರಿನಲ್ಲಿ ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಗೆ ಸಮಾವೇಶಕ್ಕಾಗಿ ಬಂದಿದ್ದರು. ಅವರು ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗಿರುವ ಕಾರಣಕ್ಕಾಗಿ ಆಕೆಯ ಪತಿಯನ್ನು ಈ ಸಮಾವೇಶದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲಾಗಿತ್ತು. ಇದಕ್ಕೆ ನೊಂದು ಸಂಸ್ಥೆ ವಿರುದ್ಧ ಮಹಾರಾಷ್ಟ್ರ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ ಕಾರಣ ಆಕೆಯನ್ನು ಕೆಲಸದಿಂದ ತೆಗೆದು ಹಾಕಿತ್ತು.
ಇದು ರಾಷ್ಟ್ರದ ಏಕತೆಗೆ ಭಂಗ ಬರುವಂತಹ ವಿಷಯವಾಗಿದೆ. ಇದಕ್ಕೆ ಪೂರಕವಾಗಿ ಕಾಶ್ಮೀರ ರಾಜ್ಯದಿಂದ ಬಂದ್ದ ವಿದ್ಯಾರ್ಥಿಯೊಬ್ಬ ಈ ಶಾಲೆಯಲ್ಲಿನ ಕಾನೂನು ಬಾಹಿರ ಚಟುವಟಿಕೆಗಳ ಕುರಿತು 2024ರ ಏಪ್ರಿಲ್ ನಲ್ಲಿ 25 ರಂದು ಕೊತ್ತನೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಈ ಎಲ್ಲಾ ದೂರುಗಳನ್ನು ಪರಿಗಣಿಸಿ ಸದರಿ ದೂರನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ನಿರ್ದೇಶಕರು ನಿರ್ದೇಶನ ನೀಡಿದ್ದಾರೆ.


