ಇಂಡಿಯಾ ಒಕ್ಕೂಟವನ್ನು ಒಡೆಯಲು ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನ ಪಟ್ಟಿದ್ದು, ಇ.ಡಿ, ಸಿಬಿಐ ಹಾಗೂ ಐಟಿ ಮೂಲಕ ಬೆದರಿಸಿದೆ. ಆದರೂ ನಾವೆಲ್ಲ ಒಗ್ಗಟ್ಟಾಗಿದ್ದೇವೆ. ನರೇಂದ್ರ ಮೋದಿಯನ್ನು ಕಿತ್ತೊಗೆಯುವುದೇ ನಮ್ಮೆಲ್ಲರ ಗುರಿ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದರು.
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಚುನಾವಣೆ ಬಾಂಡ್ ಮೂಲಕ ಏಳು ಸಾವಿರ ಕೋಟಿ ಭ್ರಷ್ಟಾಚಾರವನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದೆ. ಜನ ಇದನ್ನೆಲ್ಲ ನೋಡಿದ್ದಾರೆ. ಮೋದಿ ಅವರಿಗೆ ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ” ಎಂದರು.
ಇಂಡಿಯಾ ಒಕ್ಕೂಟದಲ್ಲಿ ಇರುವವರು ಬಿಜೆಪಿಯನ್ನು ಮನೆಗೆ ಕಳುಹಿಸಬೇಕು ಎಂದು ಒಗ್ಗಟ್ಟಾಗಿದ್ದಾರೆ. ಚುನಾವಣಾ ಫಲಿತಾಂಶ ಎಲ್ಲದಕ್ಕೂ ಉತ್ತರ ಕೊಡಲಿದೆ. ಈ ಬಾರಿ 200 ಕೆಳಗಡೆ ಬಿಜೆಪಿ ಬಂದೇ ಬರುತ್ತದೆ. ಬಿಜೆಪಿಯನ್ನು ನಾವೆಲ್ಲ ಒಗ್ಗಟ್ಟಾಗಿ ಸೋಲಿಸುತ್ತೇವೆ. ಇದು ನಮ್ಮ ಗ್ಯಾರಂಟಿ” ಎಂದು ಹೇಳಿದರು.
“ಮುಸ್ಲಿಂ ಲೀಗ್ ಮೇಲೆ ಬಿಜೆಪಿಯವರಿಗೆ ಬಹಳ ಪ್ರೀತಿ. ಸಂವಿಧಾನ ವಿರುದ್ಧ ಬಿಜೆಪಿಯವರು ಏಕೆ ಮಾತನಾಡುತ್ತಾರೆ? ಅವರಿಗೆ ಸಮನಾತೆ ಬೇಕಾಗಿಲ್ಲ. ಉದ್ದೇಶಪೂರ್ವಕವಾಗಿ ಮುಸ್ಲಿಂರನ್ನು ಮುಂದಿಟ್ಟು ಸಮಾನತೆ ಆಶಯವನ್ನು ಹಾಳು ಮಾಡುತ್ತಿದ್ದಾರೆ. ಯತ್ನಾಳ್ ಅಂತವರು ಸಮಾಜ ದ್ರೋಹಿಗಳು” ಎಂದು ಕಿಡಿಕಾರಿದರು.
“ಜನಸಾಮಾನ್ಯರಿಗೆ ಮೋದಿ ಮೋಸ ಅರ್ಥವಾಗಿದೆ. ಬಿಜೆಪಿ ಭ್ರಷ್ಟಾಚಾರದಲ್ಲಿ ಸಂಪೂರ್ಣವಾಗಿ ಮುಳುಗಿದೆ. ಬಿಜೆಪಿಯವರು ಯಾವಾಗಲು ತಿರುಕನ ಕನಸು ಕಾಣುತ್ತಾರೆ. ದೇಶದ ಜನತೆ ಮೋದಿ ಆಡಳಿತದಿಂದ ರೋಷಿಹೋಗಿದ್ದಾರೆ. ಫಲಿತಾಂಶ ನೀವೇ ನೋಡಿ” ಎಂದು ಹೇಳಿದರು.
“ಇದು ದೇಶದ ರಾಜಕರಾಣ. ನಮ್ಮಲ್ಲಿನ ಭಿನ್ನಾಭಿಪ್ರಾಯ ಮರೆತು ನಾವು ಹೋರಾಡುತ್ತಿದ್ದೇವೆ. ರಾಜ್ಯ ರಾಜಕಾರಣ ಬಗ್ಗೆ ಮಾತನಾಡುವುದಿಲ್ಲ. ಲೋಕಸಭೆ ಚುನಾವಣೆ ಮುಗಿದ ಮೇಲೆ ಮಾತನಾಡುವೆ” ಎಂದರು.