ಮಾಂಸಾಹಾರಿ ಆಹಾರ ಸೇವಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಪ್ರಿಯಕರ ಕಿರುಕುಳ ನೀಡಿದ ಪರಿಣಾಮ ಏರ್ ಇಂಡಿಯಾದ ಮಹಿಳಾ ಪೈಲಟ್ ನೇಣಿಗೆ ಶರಣಾಗಿದ್ದಾರೆ.
25 ವರ್ಷದ ಸೃಷ್ಟಿ ತುಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈ ಘಟನೆ ಮುಂಬೈನ ಅಂಧೇರಿಯ ಮರೋಲ್ ಪ್ರದೇಶದಲ್ಲಿ ನಡೆದಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸೃಷ್ಟಿ ಬಾಯ್ಫ್ರೆಂಡ್ 27 ವರ್ಷದ ಆದಿತ್ಯ ಪಂಡಿತ್‌ನನ್ನು ಪೊವೈ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಬೆಳಗ್ಗೆ ಅಂಧೇರಿ(ಪೂರ್ವ)ಯಲ್ಲಿರುವ ಮರೋಲ್ ಪೊಲೀಸ್ ಕ್ಯಾಂಪ್‌ನ ಹಿಂಭಾಗದ ಬಾಡಿಗೆ ನಿವಾಸದಲ್ಲಿ ತುಲಿ ಶವವಾಗಿ ಪತ್ತೆಯಾಗಿದ್ದಾಳೆ. ತನ್ನ ಬಾಯ್ ಫ್ರೆಂಡ್ ಜೊತೆಗಿನ ಜಗಳದ ನಂತರ ಆಕೆ ಡೇಟಾ ಕೇಬಲ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೃಷ್ಟಿ ತುಲಿ ಉತ್ತರ ಪ್ರದೇಶ ಮೂಲದವರಾಗಿದ್ದು, ಕಳೆದ ವರ್ಷ ಜೂನ್‌ನಿಂದ ಮುಂಬೈನಲ್ಲಿ ನೆಲೆಸಿದ್ದರು. ಅವಳು ಮತ್ತು ಆದಿತ್ಯ ಪಂಡಿತ್ ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ವಾಣಿಜ್ಯ ಪೈಲಟ್ ಕೋರ್ಸ್ ಓದುತ್ತಿದ್ದಾಗ ಪರಸ್ಪರ ಇಬ್ಬರಲ್ಲಿ ಪ್ರೇಮಾಂಕುರವಾಗಿತ್ತು.
“ಆದಿತ್ಯ ಪಂಡಿತ್ ಮಾಂಸಾಹಾರ ಸೇವಿಸದಂತೆ ಸೃಷ್ಟಿಯನ್ನು ಸಾರ್ವಜನಿಕವಾಗಿ ನಿಂದಿಸಿದ್ದಾರೆ. ಈ ವಿಷಯವಾಗಿ ಇಬ್ಬರ ನಡುವೆ ಸಾಕಷ್ಟು ಚರ್ಚೆಯಾಗಿ ಆಕೆಯ ಅರ್ಧದಾರಿಯಲ್ಲೇ ಬಿಟ್ಟು ಆದಿತ್ಯ ಮನೆ ಕಡೆಗೆ ತೆರಳಿದ್ದಾನೆ. ಬಳಿಕ ಸೃಷ್ಟಿ ರವಿವಾರ ಸಂಜೆ ಕೆಲಸದ ಅವಧಿ ಮುಗಿಸಿ ವಾಪಸ್ ಬಂದ ಮೇಲೂ ಆಕೆಯ ಮನೆಯಲ್ಲಿ ಜಗಳವಾಡಿದ್ದಾರೆ. ಬಳಿಕ ಆದಿತ್ಯ ಸೋಮವಾರ ಬೆಳಗ್ಗೆ 1 ಗಂಟೆಗೆ ದಿಲ್ಲಿಗೆ ಮರಳಲು ಆಕೆಯ ಬಿಟ್ಟು ತೆರಳಿದ್ದಾನೆ. ಬಳಿಕ ಸೃಷ್ಟಿ ಆದಿತ್ಯನಿಗೆ ದೂರವಾಣಿ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ” ಎಂದು ಪೊಲೀಸರು ತಿಳಿಸಿದ್ದಾರೆ.
ಆದಿತ್ಯ ಕೂಡಲೇ ಹೊರಟು ಆಕೆಯ ಮನೆಗೆ ಧಾವಿಸಿದ್ದಾಗ ಆಕೆಯ ಮನೆ ಬಾಗಿಲು ಬೀಗ ಹಾಕಿತ್ತು. ನಕಲಿ ಕೀ ಬಳಸಿ ಒಳ ಹೋಗಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಆಕೆ ಜೀವಂತವಾಗಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಆಕೆಯ ಕುಟುಂಬಸ್ಥರು ಮುಂಬೈ ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಆದಿತ್ಯ ಪಂಡಿತ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೂವೈ ಪೊಲೀಸ್ ಠಾಣೆಯ ಪೊಲೀಸರು ಆದಿತ್ಯನ ನವೆಂಬರ್ 29 ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.