Homeಕರ್ನಾಟಕನಟ ದರ್ಶನ್‌ ಪತ್ನಿ ನನ್ನ ಭೇಟಿಯಾಗಿದ್ದು ದರ್ಶನ್‌ ಕೇಸ್‌ ವಿಚಾರಕ್ಕಲ್ಲ: ಡಿ ಕೆ ಶಿವಕುಮಾರ್

ನಟ ದರ್ಶನ್‌ ಪತ್ನಿ ನನ್ನ ಭೇಟಿಯಾಗಿದ್ದು ದರ್ಶನ್‌ ಕೇಸ್‌ ವಿಚಾರಕ್ಕಲ್ಲ: ಡಿ ಕೆ ಶಿವಕುಮಾರ್

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ನಮ್ಮ ಶಾಲೆಯಲ್ಲಿ ಮಗನಿಗೆ ಸೀಟು ಸಂಬಂಧ ನನ್ನನ್ನು ಭೇಟಿ ಮಾಡಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ಸದಾಶಿವನಗರದ ತಮ್ಮ ನಿವಾಸಕ್ಕೆ ವಿಜಯಲಕ್ಷ್ಮಿ ಅವರು ಬಂದ ಕಾರಣ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಉತ್ತರಿಸಿ, “ನಟ ದರ್ಶನ್, ವಿಜಯಲಕ್ಷ್ಮೀ ಪುತ್ರ ಈ ಮೊದಲು ನಮ್ಮ ಶಾಲೆಯಲ್ಲಿ ಓದುತ್ತಿದ್ದರು. ಕಾರಣಾಂತರಗಳಿಂದ ನಮ್ಮ ಶಾಲೆ ತೊರೆದು ಬೇರೆ ಶಾಲೆ ಸೇರಿದ್ದರು. ಈಗ ಮತ್ತೆ ಮರಳಿ ನಮ್ಮ ಶಾಲೆಗೆ ಸೇರಿಸಿಕೊಳ್ಳುವಂತೆ ಮನವಿ ಮಾಡಲು ಬಂದಿದ್ದರು. ನಮ್ಮ ಶಾಲೆಯ ಪ್ರಾಂಶುಪಾಲರು ಪ್ರವೇಶ ಅವಕಾಶ ನಿರಾಕರಿಸಿದ್ದರಿಂದ ನನ್ನ ಬಳಿ ಸೀಟು ಕೇಳಲು ಬಂದಿದ್ದರು” ಎಂದರು.

ವಿಜಯಲಕ್ಷ್ಮಿ ಅವರು ನೆರವು ಕೇಳಿದರೆ ಸಹಾಯ ಮಾಡುವಿರಾ ಎಂದಾಗ “ನಾವು ಸಾರ್ವಜನಿಕ ಜೀವನದಲ್ಲಿದ್ದೇವೆ. ನನ್ನ ಭೇಟಿ ಮಾಡಲು ಬಂದವರನ್ನು ಬೇಡ ಎಂದು ಹೇಗೆ ನಿರಾಕರಣೆ ಮಾಡಲಿ? ಅಲ್ಲದೇ ನಮ್ಮ ಶಾಲೆಯ ಪಕ್ಕದಲ್ಲೇ ಅವರ ಮನೆಯಿದೆ. ನಮ್ಮ ಲೋಕಸಭಾ ಕ್ಷೇತ್ರದಲ್ಲೇ ಅವರ ಮನೆಯಿದೆ. ನನ್ನನ್ನು ಭೇಟಿ ಮಾಡಲು ನೂರಾರು ಜನ ಬಂದಿದ್ದಾರೆ. ನೀವು (ಮಾಧ್ಯಮದವರು) ಕೂಡ ಬಂದಿದ್ದೀರಿ. ನಿಮ್ಮ ಭೇಟಿಗೆ ನಿರಾಕರಿಸಿದರೆ ಡಿ.ಕೆ. ಶಿವಕುಮಾರ್ ದುರಹಂಕಾರಿ, ಭೇಟಿ ಮಾಡದೆ ತೆರಳಿದರು ಎನ್ನುತ್ತೀರಿ. ಸಾರ್ವಜನಿಕ ಜೀವನದಲ್ಲಿ ಇದ್ದಾಗ ಸಹಾಯ ಕೇಳಿಕೊಂಡು ನನ್ನನ್ನು ಭೇಟಿ ಮಾಡಲು ಬಂದರೆ ಅವರನ್ನು ಭೇಟಿ ಮಾಡಬೇಕಾಗುತ್ತದೆ. ಅದು ನನ್ನ ಕರ್ತವ್ಯ ಕೂಡ” ಎಂದು ಹೇಳಿದರು.

ಕಾನೂನಿನ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ

ನಟ ದರ್ಶನ್‌ಗೆ ಅನ್ಯಾಯ ಆಗಿದ್ದರೆ ನ್ಯಾಯ ಕೊಡಿಸಲಾಗುವುದು ಎಂದು ರಾಮನಗರದಲ್ಲಿ ನೀಡಿದ ಹೇಳಿಕೆಯ ಬಗ್ಗೆ ಮಾಧ್ಯಮದವರು ಕೇಳಿದಾಗ, “ನಿನ್ನೆ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ, ವಿಜಯಲಕ್ಷ್ಮಿ ಅವರು ನನ್ನನ್ನು ಭೇಟಿ ಮಾಡಲು ಬಂದಿದ್ದರು. ಎಲ್ಲೆಂದರಲ್ಲಿ ಭೇಟಿ ಮಾಡಲು ಸಾಧ್ಯವಿಲ್ಲ. ಮನೆಗೆ ಬಂದು ಭೇಟಿ ಮಾಡಿ ಎಂದು ಇಂದು ಬೆಳಗ್ಗೆ ಸಮಯಾವಕಾಶ ನೀಡಿದ್ದೆ. ಅವರು ನಿನ್ನೆ ಭೇಟಿಗೆ ಯತ್ನಿಸಿದಾಗ ಬಹುಶಹ ದರ್ಶನ್ ಪ್ರಕರಣದ ವಿಚಾರವಾಗಿ ಮಾತನಾಡಲು ಬರುತ್ತಾರೆ ಎಂದು ಭಾವಿಸಿದ್ದೆ. ಅವರು ಆ ವಿಚಾರ ನನ್ನ ಜೊತೆ ಮಾತನಾಡಿಲ್ಲ” ಎಂದರು.

“ಮಂಗಳವಾರ ರಾತ್ರಿ ರಾಮನಗರದಲ್ಲಿ ನಡೆದ ಚಾಮುಂಡೇಶ್ವರಿ ಕರಗ ಸಮಾರಂಭದಲ್ಲಿ ನೆರೆದಿದ್ದ ಯುವಕರು ದರ್ಶನ್ ಮೇಲಿನ ಅಭಿಮಾನದಿಂದ ನ್ಯಾಯ ಕೊಡಿಸಿ ಎಂದು ಗಲಾಟೆ ಮಾಡುತ್ತಿದ್ದರು. ಭಾಷಣ ಮಾಡಲು ಅವಕಾಶವೇ ನೀಡುತ್ತಿರಲಿಲ್ಲ. ನಮ್ಮ ಕ್ಷೇತ್ರದ ಹುಡುಗರು, ದರ್ಶನ್ ಅಭಿಮಾನಿಗಳು ಎಂದು ಕಾಣುತ್ತದೆ. ಬಾಸ್, ಬಾಸ್ ಎಂದು ಕೂಗುತ್ತಿದ್ದರು. ನಾನು ಯಾರಪ್ಪ ಬಾಸ್ ಎಂದು ನೋಡಿದಾಗ ದರ್ಶನ್ ಫೋಟೋ ಹಿಡಿದುಕೊಂಡಿದ್ದರು. ಆಗ ಅವರ ಸಮಾಧಾನಕ್ಕೆ ನ್ಯಾಯ ಕೊಡಿಸೋಣ ಎಂದು ಹೇಳಿದೆ” ಎಂದು ತಿಳಿಸಿದರು.

“ನಟ ದರ್ಶನ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೊಲೀಸ್ ತನಿಖೆ ನಡೆಯುತ್ತಿದೆ. ನಾವು ಯಾವುದೇ ಕಾರಣಕ್ಕೂ ಪೊಲೀಸ್ ವಿಚಾರಣೆ, ನ್ಯಾಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಮಾಡಲೂಬಾರದು. ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಕಾನೂನಿದೆ. ಕಾನೂನಿನ ಚೌಕಟ್ಟಿನಲ್ಲಿ ಎಲ್ಲರೂ ಒಂದೇ. ಏನೂ ಬೇಕಾದರೂ ಆಗಬಹುದು” ಎಂದರು.

ಕಾಂಗ್ರೆಸ್ ಯಾರನ್ನೂ ಬಳಸಿಕೊಳ್ಳುವುದಿಲ್ಲ

ಇ.ಡಿ ವಿರುದ್ಧ ದೂರು ನೀಡಿರುವ ಅಧಿಕಾರಿ ಕಲ್ಲೇಶ್ ಅವರು ಅಮಾನತ್ತು ಆಗಿದ್ದ ಅಧಿಕಾರಿ. ಅವರನ್ನು ಬಳಸಿಕೊಂಡು ಕಾಂಗ್ರೆಸ್ ದೂರು ನೀಡಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ “ಕಾಂಗ್ರೆಸ್ ಪಕ್ಷ ಯಾರನ್ನೂ ಬಳಸಿಕೊಳ್ಳುವ ಅವಶ್ಯಕತೆಯಿಲ್ಲ. ಆತ ದೂರು ಕೊಟ್ಟಿದ್ದಾನೆ. ಎಫ್ ಐಆರ್ ದಾಖಲಾಗಿದೆ, ಅದಕ್ಕೆ ನ್ಯಾಯಲಯ ತಡೆ ನೀಡಿದೆ ಎಂದು ಮಾಧ್ಯಮಗಳ ಮೂಲಕ ತಿಳಿದುಕೊಂಡೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments