ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ನಟ ದರ್ಶನ, ಪವಿತ್ರಾ ಗೌಡ ಸೇರಿ 11 ಮಂದಿಯ ಜಾಮೀನು ಅರ್ಜಿಗಳ ವಿಚಾರಣೆಯನ್ನು ಬೆಂಗಳೂರಿನ ಸತ್ರ ನ್ಯಾಯಾಲಯ ಬುಧವಾರಕ್ಕೆ ಮುಂದೂಡಿತು.
ನ್ಯಾಯಾಧೀಶರಾದ ಜೈಶಂಕರ್ ವಿಚಾರಣೆ ನಡೆಸಿದ್ದು, ದರ್ಶನ್ ಹೊರತುಪಡಿಸಿ ಉಳಿದ ಆರೋಪಿಗಳ ಪರ ವಕೀಲರು ವಾದ ಮಂಡಿಸಿದರು. ಆ ಬಳಿಕ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ. ಪ್ರಸನ್ನಕುಮಾರ್ ವಾದ ಮಂಡಿಸಿದರು. ಆ ಬಳಿಕ ಕೋರ್ಟ್ ತೀರ್ಪನ್ನು ಕಾಯ್ದಿರಿಸಿ ವಿಚಾರಣೆಯನ್ನು ಬುಧವಾರಕ್ಕೆ (ಅಕ್ಟೋಬರ್ 9) ಮುಂದೂಡಿದರು.
ಇಂದು ವಾದ ಮಂಡಿಸಿದ ಎಸ್ಪಿಪಿ ಪ್ರಸನ್ನ ಕುಮಾರ್, ಆರೋಪಿಗಳ ಪರ ವಕೀಲರು ಎತ್ತಿರುವ ಪ್ರತಿ ಪ್ರಶ್ನೆಗೂ ಸಹ ಉತ್ತರ ಇದೆ ಎಂದು ಹೇಳಿಯೇ ವಾದ ಆರಂಭಿಸಿದರು. ಸಿವಿ ನಾಗೇಶ್ ಅವರು ಪ್ರಶ್ನೆ ಮಾಡಿದ್ದ, ಎತ್ತಿ ತೋರಿಸಿದ್ದ ಲೋಪದೋಷಗಳಿಗೆ ಬಹುತೇಕ ಉತ್ತರಗಳನ್ನು ಸ್ಪಷ್ಟತೆಯನ್ನು ಎಸ್ಪಿಪಿ ನೀಡಿದರು. ಮಾತ್ರವಲ್ಲದೆ, ದರ್ಶನ್ ಹಾಗೂ ಅವರ ತಂಡ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದ ರೀತಿ, ಆ ನಂತರ ನಡೆದ ಘಟನೆಗಳು, ಪ್ರತ್ಯಕ್ಷದರ್ಶಿಗಳು ನೀಡಿರುವ ಹೇಳಿಕೆ ಎಲ್ಲವನ್ನೂ ಉಲ್ಲೇಖಿಸಿ, ‘ಇದು ದರ್ಶನ್ ರಕ್ತಚರಿತ್ರೆ’ ಎಂದು ಟೀಕೆ ಮಾಡಿದರು.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಹಾಗೂ ಇತರ ಆರೋಪಿಗಳ ಬಂಧನವಾಗಿ ನಾಲ್ಕು ತಿಂಗಳಾಗಿದೆ. ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ನಾಲ್ಕು ಮಂದಿಗೆ ಈಗಾಗಲೇ ಜಾಮೀನು ದೊರೆತಿದೆ. ದರ್ಶನ್ರ ಜಾಮೀನಿಗಾಗಿ ವಕೀಲ ಸಿ ವಿ ನಾಗೇಶ್ ವಾದ ಮಂಡಿಸುತ್ತಿದ್ದಾರೆ.