ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆರು ವಾರಗಳ ಜಾಮೀನು ಪಡೆದುಕೊಂಡಿರುವ ನಟ ದರ್ಶನ್ಗೆ ಮತ್ತೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ನಟ ದರ್ಶನ್ ಅವರಿಗೆ ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನು ಆದೇಶ ರದ್ದು ಕೋರಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆ ಅನುಮತಿ ನೀಡಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖಾಧಿಕಾರಿಗಳು ಜಾಮೀನು ರದ್ದತಿಗೆ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡುವಂತೆ ಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದರು. ಗೃಹ ಇಲಾಖೆ ಇದೀಗ ಸಮ್ಮತಿ ನೀಡಿದೆ.
ಗೃಹ ಇಲಾಖೆ ಅನುಮತಿ ನೀಡಿರುವ ವಿಚಾರವನ್ನು ನಗರದ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಖಚಿತ ಪಡಿಸಿದರು. ಶೀಘ್ರದಲ್ಲೇ ಮೇಲ್ಮನವಿ ಸಲ್ಲಿಸಲಾಗುವುದು. ಸಿದ್ದತೆ ನಡೆದಿದೆ ಎಂದು ದಯಾನಂದ ತಿಳಿಸಿದರು.
“ನ.13ರಂದು ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ್ದ ಗೃಹಸಚಿವ ಪರಮೇಶ್ವರ್, ಮಧ್ಯಂತರ ಜಾಮೀನು ತಡೆ ಕೋರಿ ಮೇಲ್ಮನವಿ ಸಲ್ಲಿಕೆಯಲ್ಲಿ ಯಾವುದೇ ವಿಳಂಬ ಆಗಿಲ್ಲ. ಮೇಲ್ಮನವಿ ಯಾವಾಗ ಸಲ್ಲಿಸಬೇಕು ಎಂಬುದನ್ನು ಗೃಹ ಇಲಾಖೆ ಕಾರ್ಯದರ್ಶಿ ತೀರ್ಮಾನಿಸುತ್ತಾರೆ. ಮೇಲ್ಮನವಿ ಸಲ್ಲಿಸುವುದಾದರೆ ಸಲ್ಲಿಸಿ ಎಂದು ನಾನೂ ಸೂಚಿಸಿದ್ದೇನೆ. ಇಂತಹ ಪ್ರಕರಣಗಳಲ್ಲಿ ಪ್ರಕ್ರಿಯೆಗಳನ್ನು ಅನುಸರಿಸಿ ಮುಂದುವರಿಯಬೇಕಾಗುತ್ತದೆ” ಎಂದಿದ್ದರು.
ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇದ್ದರು. ಆಗ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆಗೆ ಜಾಮೀನು ನೀಡುವಂತೆ ಹೈಕೋರ್ಟ್ನಲ್ಲಿ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ್ದ ಹೈಕೋರ್ಟ್ ಷರತ್ತುಬದ್ಧವಾಗಿ ಆರು ವಾರಗಳ ಜಾಮೀನು ಮಂಜೂರು ಮಾಡಿತ್ತು. ನಂತರ ದರ್ಶನ್ ಅವರು ಜೈಲಿನಿಂದ ಬಿಡುಗಡೆ ಆಗಿ, ಸದ್ಯ ಮೈಸೂರಿನ ಬಿಜಿಎಸ್ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.