Homeಕರ್ನಾಟಕ1600 ಅಗ್ನಿಶಾಮಕ ಹುದ್ದೆಗಳ ಭರ್ತಿಗೆ ಕ್ರಮ: ಗೃಹ ಸಚಿವ ಪರಮೇಶ್ವರ್ 

1600 ಅಗ್ನಿಶಾಮಕ ಹುದ್ದೆಗಳ ಭರ್ತಿಗೆ ಕ್ರಮ: ಗೃಹ ಸಚಿವ ಪರಮೇಶ್ವರ್ 

  • ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಸಿಬ್ಬಂದಿಗಳಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ
  • ಪೊಲೀಸ್ ಗೃಹ ಮಾದರಿಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಿಗೂ ವಸತಿ ಗೃಹ: ಸಚಿವ ಪರಮೇಶ್ವರ್

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯು ಉತ್ತಮ ಕೆಲಸದ ಮೂಲಕ ರಾಷ್ಟ್ರ ಮಟ್ಟದಲ್ಲಿ ಜನಮನ್ನಣೆ ಪಡೆದಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದರು.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಆರ್.ಎ.ಮುಂಡ್ಕುರ್ ಅಗ್ನಿಶಾಮಕ ತರಬೇತಿ ಅಕಾಡೆಮಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆ, ಗೃಹರಕ್ಷಕ ದಳ, ಪೌರರಕ್ಷಣೆ ಮತ್ತು ಎಸ್‌ಡಿಆರ್‌ಎಫ್‌ ಅಧಿಕಾರಿ, ಸಿಬ್ಬಂದಿಗಳಿಗೆ ‘ಮುಖ್ಯಮಂತ್ರಿಗಳ ಪದಕ’ ಪ್ರದಾನ ಹಾಗೂ 40 ಹೊಸ ಅಗ್ನಿಶಾಮಕ ಜಲ ವಾಹನಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.

ಇಲಾಖೆಯು ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿ, ರಾಜ್ಯಕ್ಕೆ ಗೌರವ ಸಂಪಾದನೆ ಮಾಡಿರುದನ್ನು ರಾಜ್ಯ ಸರ್ಕಾರ ಮತ್ತು ಜನಸಮುದಾಯ ಗಮನಿಸಿದೆ ಎಂದು ಹೇಳಿದರು.

ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಶಿಸ್ತಿನ ಸಿಪಾಯಿಗಳು. ಪೊಲೀಸ್ ಇಲಾಖೆಯ ಜೊತೆಜೊತೆಯಾಗಿ ಅಷ್ಟೇ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದೀರಿ. ವಿಪತ್ತಿನ ಸಂದರ್ಭದಲ್ಲಿ ಸ್ವಯಂಸ್ಪೂರ್ತಿಯಿಂದ ಕೆಲಸ ಮಾಡಲು ಶ್ರಮಿಸಲಾಗಿದೆ. ಇದನ್ನು ಸಮಾಜ ಗುರುತಿಸಿದೆ. ಇಡೀ ದೇಶದಲ್ಲಿ ಕರ್ನಾಟಕ ಅಗ್ನಿಶಾಮಕ ಮತ್ತು ಇತರೆ ಇಲಾಖೆಗಳು ಮಾದರಿಯಾಗಿದೆ ಎಂದರು.

ಪ್ರತಿದಿನ ಹಲವು ದುರಂತಗಳನ್ನು ನೋಡುತ್ತೇವೆ. ನಗರ ಪ್ರದೇಶಗಳಲ್ಲಿ ಹೆಚ್ಚಿನ ಅವಘಡಗಳು ಸಂಭವಿಸುತ್ತವೆ. ತುರ್ತು ಸಂದರ್ಭದಲ್ಲಿ ಪ್ರಾಣವನ್ನು ಒತ್ತೆ ಇಟ್ಟು, ಸಾರ್ವಜನಿಕರ ಆಸ್ತಿ ಮತ್ತು ನಾಗರಿಕರ ಪ್ರಾಣ ರಕ್ಷಣೆ ಮಾಡುವ ಕೆಲಸ ಮಾಡಿದ್ದೀರಿ. ಪ್ರವಾಹಗಳು ಉಂಟಾದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಜನರನ್ನು ಕಾಪಾಡಿರುವುದನ್ನು ನೆನೆಯುತ್ತೇನೆ ಎಂದು ಹೇಳಿದರು.

ಮಡಿಕೇರಿಯಲ್ಲಿ ಸಂಭವಿಸಿದ ಪ್ರವಾಹದ ವೇಳೆ ಒಂಟಿಯಾಗಿದ್ದ ಮನೆಗಳಲ್ಲಿದ್ದ ಜನರನ್ನು ರಕ್ಷಣೆ ಮಾಡಲು ತೆಗೆದುಕೊಂಡು ನಿರ್ಧಾರ ಮತ್ತು ಪ್ರಯತ್ನಗಳು ಅತ್ಯಂತ ಶ್ಲಾಘನೀಯ. ನಿಮ್ಮ ಕೆಲಸ ಸುಲಭ ಎಂದು ಹೇಳಲಾಗುವುದಿಲ್ಲ. ದೇಶದ ದಕ್ಷಿಣ ಭಾಗದ ರಾಜ್ಯಗಳಲ್ಲಿ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

15 ಹೊಸ ತಾಲ್ಲೂಕುಗಳಲ್ಲಿ ಅಗ್ನಶಾಮಕ ಠಾಣೆಗಳನ್ನು ಸ್ಥಾಪಿಸಲು ಮುಖ್ಯಮಂತ್ರಿಯವರನ್ನು ಕೋರಿದ್ದೇನೆ. ಪೊಲೀಸ್ ಗೃಹ ಯೋಜನೆಯಡಿ 40 ಸಾವಿರ ಮನೆ ಕಟ್ಟಿದ್ದೇವೆ. ಅದೇ ಮಾದರಿಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಿಗೆ ವಸತಿ ಗೃಹ ಕಲ್ಪಿಸುವ ತೀರ್ಮಾನ ಮಾಡಲಾಗಿದೆ. ಇದಕ್ಕೆ ಹಣ ಒದಗಿಸಲಾಗುವುದು ಎಂದರು.

ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳು ಹೆಚ್ಚಾಗುತ್ತಿವೆ. ಅಗ್ನಿ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ನಿಯಂತ್ರಿಸಲು ಆಧುನಿಕ ಮತ್ತು ಸುಸಜ್ಜಿತ ಸಲಕರಣೆ, ವಾಹನಗಳನ್ನು ಒದಗಿಸಲಾಗಿದೆ. ಪ್ರಥಮ ಬಾರಿಗೆ 90 ಮೀಟರ್ ಎತ್ತರ ತಲುಪಬಲ್ಲ ಏರಿಯಲ್ ಲ್ಯಾಡರ್ ಫ್ಲಾಟ್‌ಫಾರ್ಮ್ ವಾಹನ ಮಾದರಿ ಅಗ್ನಿಶಾಮಕ ವಾಹನವಾಗಿದೆ ಎಂದರು.

15ನೆ ಹಣಕಾಸಿನ ಯೋಜನೆಯಡಿ 329 ಕೋಟಿ ರೂ. ಒದಗಿಸಲಾಗಿತ್ತು. 21 ಅಗ್ನಿಶಾಮಕ ಠಾಣೆ ನಿರ್ಮಿಸಲು 98 ಕೋಟಿ ರೂ. ಖರ್ಚು ಮಾಡಲಾಗಿದೆ. ಆಧುನಿಕ ಉಪಕರಣಗಳ ಖರೀದಿ, ತರಬೇತಿ ಕೇಂದ್ರದ ಉನ್ನತಿಕರಣಕ್ಕೆ ಕ್ರಮ ವಹಿಸಲಾಗಿದೆ. ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯಲ್ಲಿ 1600ಕ್ಕೂ ಹೆಚ್ಚು ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 1600 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments