ಆನೇಕಲ್ ತಾಲೂಕಿಗೆ ಕುಡಿಯಲು ಕಾವೇರಿ ನೀರು ಪೂರೈಸಲು ಟೆಂಡರ್ ಕರೆಯಲಾಗಿದ್ದು ಹಾಗೂ ಮೆಟ್ರೋ ವಿಸ್ತರಣೆಗೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಆನೇಕಲ್ ತಾಲ್ಲೂಕು ಹೆನ್ನಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
“ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ಶಿವಣ್ಣ, ಮಾಜಿ ಸಂಸದ ಸುರೇಶ್, ರಮೇಶ್ ಅವರು ನಿಮ್ಮನ್ನು ಬೆಂಗಳೂರು ನಗರ ವ್ಯಾಪ್ತಿಗೆ ಸೇರಿಸಬೇಕು ಎಂದು ನನ್ನ ಮೇಲೆ ಒತ್ತಾಯ ಹಾಕುತ್ತಿದ್ದಾರೆ. ಈ ಬಗ್ಗೆ ಮುಂದೆ ಚರ್ಚೆ ಮಾಡುತ್ತೇನೆ. ನಿಮ್ಮನ್ನು ಗ್ರೇಟರ್ ಬೆಂಗಳೂರಿನಲ್ಲಿ ಸೇರಿಸಲು ಚರ್ಚೆಯಾಗುತ್ತಿದೆ. ಎಲ್ಲಾ ಶಾಸಕರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಇನ್ನು ಈ ಭಾಗಕ್ಕೆ ಕಾವೇರಿ ನೀರನ್ನು ಪೂರೈಸಬೇಕು ಎಂದು ಸುರೇಶ್ ಹಾಗೂ ರಾಮಲಿಂಗಾ ರೆಡ್ಡಿ ಅವರು ಒತ್ತಡ ಹಾಕುತ್ತಿದ್ದಾರೆ. ಆನೇಕಲ್ ತಾಲೂಕಿಗೆ 30 ಎಂಎಲ್ ಡಿ ನೀರನ್ನು ನೀಡಲು ಟೆಂಡರ್ ಕರೆಯಲಾಗಿದೆ. ಈ ಬಗ್ಗೆ ನಾಳೆ ಶಾಸಕ ಶಿವಣ್ಣ ಅವರ ಜತೆ ಚರ್ಚೆ ಮಾಡಲಿದ್ದೇನೆ. ಜಿಗಣಿ, ಆನೇಕಲ್, ಸರ್ಜಾಪುರ, ಬನ್ನೇರುಘಟ್ಟಕ್ಕೆ ಮೆಟ್ರೋ ರೈಲು ಮಾರ್ಗ ವಿಸ್ತರಿಸಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ” ಎಂದು ಹೇಳಿದರು.
“ನಮಗೆ ಆನೇಕಲ್ ಬೇರೆಯಲ್ಲ ಕನಕಪುರ ಬೇರೆಯಲ್ಲ. ಈ ಕ್ಷೇತ್ರದ ಅಭಿವೃದ್ಧಿಗೆ ನಾವು ಬದ್ಧವಾಗಿದ್ದೇವೆ. ಈ ಕ್ಷೇತ್ರದಲ್ಲಿ ವಿದ್ಯಾವಂತರು, ಪ್ರಜ್ಞಾವಂತರಿದ್ದೀರಿ. ಒಂದೇ ಗ್ರಾಮ ಪಂಚಾಯ್ತಿಯಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮ ಮಾಡುತ್ತಿದ್ದು, ನಿಮ್ಮ ಜತೆ ನಮ್ಮ ಸರ್ಕಾರ ಇದೆ ಎಂದು ಹೇಳಲು ನಾನು ಹಾಗೂ ರಾಮಲಿಂಗಾ ರೆಡ್ಡಿ ಅವರು ಬಂದಿದ್ದೇವೆ. ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ಎಂದು ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ 4 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದು, ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಕಲಬುರ್ಗಿಯಲ್ಲಿ 1100 ಕೋಟಿ ಮೊತ್ತದ ಯೋಜನೆಗೆ ಭೂಮಿ ಪೂಜೆ ಮಾಡಲಾಗಿದೆ” ಎಂದರು.
“ಬಿಜೆಪಿಯವರು ಭಾವನೆ ಮೇಲೆ ರಾಜಕೀಯ ಮಾಡಿದರೆ, ಕಾಂಗ್ರೆಸ್ ಬದುಕಿನ ಮೇಲೆ ರಾಜಕಾರಣ ಮಾಡುತ್ತಿದೆ. ಈ ತಾಲೂಕಿಗೆ 16 ಕೋಟಿ ನೀಡಲಾಗಿದೆ. 1.22 ಕೋಟಿ ಮಹಿಳೆಯರಿಗ ಗೃಹಲಕ್ಷ್ಮಿ ಹಣ, 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, 10 ಕೆ.ಜಿ ಅಕ್ಕಿ, ನಿರುದ್ಯೋಗಿಗಳಿಗೆ ಭತ್ಯೆ ನೀಡಲಾಗುತ್ತಿದೆ. ಬಿಜೆಪಿಯವರು ಇಂತಹ ಯಾವುದಾದರೂ ಒಂದು ಯೋಜನೆ ನೀಡಿದ್ದಾರಾ?” ಎಂದು ಪ್ರಶ್ನಿಸಿದರು.
“ಪಶುಸಂಗೋಪನೆ ಮಾಡುತ್ತಿರುವ ರೈತರಿಗೆ ಇಂಡಿ, ಬೂಸ ಬೆಲೆ ಏರಿಕೆ ಹೊರೆಯಾಗುತ್ತಿದೆ. ಹೀಗಾಗಿ ರೈತರಿಗೆ ಅನುಕೂಲ ಮಾಡಿಕೊಡಲು ನಮ್ಮ ಸರ್ಕಾರ ಹಾಲಿನ ದರವನ್ನು 4 ರೂ.ನಷ್ಟು ಏರಿಕೆ ಮಾಡಲಾಗಿದೆ. ಅದಕ್ಕೆ ಬಿಜೆಪಿಯವರು ಜನಾಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಪಂಚಾಯ್ತಿಯಿಂದ ರೈತರಿಗೆ ಸರ್ಕಾರಕ್ಕೆ ಸರಿಸಮನಾಗಿ ಪ್ರತಿ ಲೀಟರ್ ಗೆ 5 ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ” ಎಂದು ಪ್ರಶಂಸಿಸಿದರು.
“ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಸಹಜವಾಗಿ ಏರಿಕೆಯಾಗುತ್ತದೆ. ಹೀಗಾಗಿ ಬೆಲೆ ಏರಿಕೆಗೆ ಕೇಂದ್ರ ಬಿಜೆಪಿ ಸರ್ಕಾರವೇ ಕಾರಣ. ನಾವು ಬಡವರಿಗಾಗಿ ಮನೆ ನಿರ್ಮಾಣ ಮಾಡಿದರೆ ಕೇಂದ್ರ ಸರ್ಕಾರಕ್ಕೆ 18% ಜಿಎಸ್ ಟಿ ಕಟ್ಟಬೇಕಿದೆ. ಜಿಎಸ್ ಟಿ ಹಾಗೂ ಬೆಲೆ ಏರಿಕೆಯಿಂದ ಕೇಂದ್ರ ಬಿಜೆಪಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ. ಈಗ ಚಿನ್ನದ ಬೆಲೆ 1 ಲಕ್ಷ ದಾಟಿದ್ದು, ಬಡವರು ಮಾಂಗಲ್ಯ ಕೊಳ್ಳುವುದು ಅಸಾಧ್ಯವಾಗಿದೆ. ಕೇಂದ್ರ ಸರ್ಕಾರದ ಈ ಬೆಲೆ ಏರಿಕೆ ವಿರುದ್ಧ ಜನರು ಧ್ವನಿ ಎತ್ತಬೇಕು” ಎಂದರು.