Homeರಾಜಕೀಯಅಭಿಮನ್ಯು ಅಗ್ರ ಲೇಖನ | ಮನುಕುಲದ ಮಾತುಗಾರ, ನ್ಯಾಯದ ಹರಿಕಾರ ಸಿದ್ದರಾಮಯ್ಯ!

ಅಭಿಮನ್ಯು ಅಗ್ರ ಲೇಖನ | ಮನುಕುಲದ ಮಾತುಗಾರ, ನ್ಯಾಯದ ಹರಿಕಾರ ಸಿದ್ದರಾಮಯ್ಯ!

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಹೊಸ ದೇಶಕ್ಕೆ ಮಾದರಿಯಾಗುವ ಹೊಸ ಶೈಲಿಯ ರಾಜಕಾರಣವನ್ನು ಸಿದ್ದರಾಮಯ್ಯ ಹುಟ್ಟು ಹಾಕಿದ್ದಾರೆ. ಮಾತು ಸೋತ ಭಾರತದಲ್ಲಿ ಮಾತೇ ಗೆಲ್ಲುವ ಹಾದಿಯನ್ನೂ ಹುಡುಕಿದ್ದಾರೆ. ಅದನ್ನು ಸರಳವಾಗಿ ನರೇಟಿವ್ ಎಂದು ಕರೆಯಬಹುದು. ಅದೆಂದರೆ ಒಬ್ಬರು ಒಂದು ವಿಷಯವನ್ನು ಮುನ್ನೆಲೆಗೆ ತಂದರೆ ಎಲ್ಲ ಚರ್ಚೆಗಳೂ ಅದೇ ದಾರಿಯಲ್ಲಿ ಸಾಗುತ್ತವೆ. ವಿಶ್ವಮಟ್ಟದಲ್ಲಿ ನೋಮ್ ಚಾಮ್ಸ್ಕಿ ಇದ್ದಂತೆ, ದೇಶದಲ್ಲಿ ಮನುಕುಲದ ಮಾತುಗಾರನಂತೆ ಕಾಣಿಸುತ್ತಿರುವುದು ಸಿದ್ದರಾಮಯ್ಯ ಒಬ್ಬರೇ!

ಮತದ್ವೇಷದ ಮಾರುಕಟ್ಟೆ ತೆರೆದು; ಕೋಮುಹಗೆ ಹರಡುತ್ತಾ,  ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಆಶಯಗಳನ್ನೇ ಅಪಹಾಸ್ಯ ಮಾಡುತ್ತಿರುವ ಹೊತ್ತಿನೊಳಗೆ ಇಡೀ ದೇಶದಲ್ಲಿ ಯಾರಾದರೂ ಒಬ್ಬರು ಬಡವರು, ದಲಿತರು, ಶೋಷಿತರು, ಹಿಂದುಳಿದವರು, ಮಹಿಳೆಯರ ಪರವಾಗ ಎದೆಯುಬ್ಬಿಸಿ ಮಾತನಾಡುತ್ತಿದ್ದಾರೆ ಎಂದರೆ ಅದು ಕರ್ನಾಟಕದ ಹೆಮ್ಮೆಯ ಕನ್ನಡಿಗ, ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಮಾತ್ರ.

‘ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯೋಣ’ ಎಂಬ ಹೃದ್ಯಂಗಮ ಮಾತುಗಳನ್ನು ಕೊಟ್ಟ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರು ಬಿತ್ತಿದ ಕನಸನ್ನು, ಹಂಚಿದ ಬೆಳಕನ್ನು ನನಸಾಗಿಸಿರುವವರು ಸಿದ್ದರಾಮಯ್ಯ. ‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ಶೀರ್ಷಿಕೆಯೊಳಗೆ ದಾರ್ಶನಿಕ ಕವಿ ಕುವೆಂಪುರವರು ಆಶಯವನ್ನು ಸಾಕಾರಗೊಳಿಸಲು ಭದ್ರ ತಳಹದಿಯನ್ನು, ತಕ್ಕ ವೇದಿಕೆಯನ್ನು ಸಿದ್ದರಾಮಯ್ಯನವರು ತಮ್ಮ ಮಾತು–ಕೃತಿಯೊಳಗೆ ಹುರಿಗೊಳಿಸುತ್ತಿದ್ದಾರೆ.

ರಾಜ್ಯದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿಯವರ ಹಬ್ಬಿಸಿದ ಕೋಮುದ್ವೇಷದ ವಿಷವನ್ನು ತೊಲಗಿಸುವ ಕೆಲಸಕ್ಕೂ ಕೈಹಾಕಿದ್ದಾರೆ. ನಾಲ್ಕು ವರ್ಷಗಳಲ್ಲಿ ಬಿಜೆಪಿ ಸುರಿದ ವಿಷವನ್ನು ಹೋಗಲಾಡಿಸುವುದು ಅಷ್ಟು ಸಲೀಸಲ್ಲ. ಬಿಜೆಪಿಯ ದುರಾಡಳಿತದಿಂದಾಗಿ  ಪಾತಾಳಕ್ಕೆ ಇಳಿದ ಹೋದ ಆರ್ಥಿಕತೆಯನ್ನು ಸರಿದಾರಿಗೆ ತರುವುದು, ಆಡಳಿತಯಂತ್ರವನ್ನು ನೇರ್ಪುಗೊಳಿಸುವುದು, ಜನಕಲ್ಯಾಣ ಕಾರ್ಯಕ್ರಮಗಳಿಗೆ ಮರುಚಾಲನೆ ನೀಡುವುದು… ಇದರ ಜತೆಗೆ ಕರ್ನಾಟಕದ ಮಾದರಿಯೊಂದನ್ನು ಕಟ್ಟಿಕೊಡುವ ಕಾಯಕದತ್ತ ಸಿದ್ದರಾಮಯ್ಯ ಹೆಜ್ಜೆ ಇಟ್ಟಿದ್ದಾರೆ.

ಒಕ್ಕಲಿಗರು ಮತ್ತು ಲಿಂಗಾಯತರು ರಾಜಕೀಯವಾಗಿ ಪ್ರಬಲವಾಗಿರುವಾಗ, ಸಚಿವರು ಹಾಗೂ ಕಾಂಗ್ರೆಸ್‌ನಲ್ಲಿ ಈ ಸಮುದಾಯಗಳ ಶಾಸಕರ ಸಂಖ್ಯೆ ಎಲ್ಲವನ್ನೂ ನಿಯಂತ್ರಿಸುವಷ್ಟು ಬಲಾಢ್ಯವಾಗಿರುವಾಗ ಹಿಂದುಳಿದವರು, ದಲಿತ ಸಮುದಾಯದವನ್ನೇ ಬೆನ್ನಿಗಿಟ್ಟುಕೊಂಡು, ಅವರ ಪರವಾಗಿ ಕೆಲಸ ಮಾಡುವುದು ಅಷ್ಟು ಸುಲಭವೇನಲ್ಲ. ಎದುರಾಳಿಗಳ ಬಲಕ್ಕೆ ತಕ್ಕಂತೆ ಸೆಣಸಾಡುವ ದೊಡ್ಡ ಬಲವೂ ಸಿದ್ದರಾಮಯ್ಯನವರಿಗೆ ಇಲ್ಲ. ಅವರ ಬೆನ್ನಿಗೆ ನಿಂತು, ಎಲ್ಲ ಕೆಲಸಕ್ಕೂ ಸಾಹಚರ್ಯ ನೀಡಬೇಕಾದ ದಲಿತರು ಮತ್ತು ಹಿಂದುಳಿದವರು ತಮ್ಮೆಲ್ಲ ಈರ್ಷ್ಯೆ, ಭಿನ್ನತೆ ಮರೆತು ಒಟ್ಟಾಗಿ ನಿಂತರಷ್ಟೇ ಸಿದ್ದರಾಮಯ್ಯ ಅಂದು ಕೊಂಡಿದ್ದನ್ನು ಸಾಧಿಸಬಹುದು; ಸಾಧಿಸಬಲ್ಲರು.

ದೇಶದ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಮೇಲ್ಜಾತಿ, ಮೇಲ್ವರ್ಗಗಳ ಬಿಗಿ ಮುಷ್ಟಿಯ ನಡುವೆಯೂ ಹಿಂದುಳಿದವರು, ದಲಿತರು, ಮುಸ್ಲಿಮರು, ಮಹಿಳೆಯರ ಹಿತವನ್ನು ಕಾಯ್ದವರು ಕೆಲವರಷ್ಟೆ.  12ನೇ ಶತಮಾನದಲ್ಲಿ ದೊರೆ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣನವರು, ಅಲಕ್ಷಿತರು, ಶೋಷಿತರ ಪರ ರಾಜಕೀಯಕ್ಕೆ ನಾಂದಿ ಹಾಡಿದವರು. ಬಿಜ್ಜಳ ಎಷ್ಟೇ ಆಮಿಷವೊಡ್ಡಿದರು ತನ್ನ ದಾರಿಯನ್ನು ಬಸವಣ್ಣನವರು ಬಿಡಲಿಲ್ಲ.  ‘ಊರ ಮುಂದೆ ಹಾಲ ಹಳ್ಳ ಹರಿಯುತಿರಲು ಒರೆಯಾವಿನ ಬೆನ್ನ ಹರಿಯಲಬೇಕಯ್ಯ ? ಲಜ್ಜೆಗೆಡೆಲೇಕೆ? ನಾಣುಗೆಡಲೇಕೆ ..  ’ ಎಂದ ಬಸವಣ್ಣನವರು ಅದನ್ನು ತಿರಸ್ಕರಿಸಿದರು. ಅಸಂಖ್ಯಾತರಾಗಿದ್ದ ಹಿಂದುಳಿದವರು, ದಲಿತರಿಗೆ ಧ್ವನಿಕೊಟ್ಟರು. ಅಂತರ್ಜಾತಿ ಮದುವೆ ಮಾಡಿಸಿದರು. ದೇವಸ್ಥಾನಗಳಿಗೆ ಪ್ರವೇಶ ಇಲ್ಲದ ಅವರಿಗೆ ದೇಹವೇ ದೇಗುಲದ ಕಲ್ಪನೆ ಕೊಟ್ಟರು. ಜ್ಞಾನ ದಾಸೋಹಕ್ಕಾಗಿ ಅನುಭವಮಂಟಪ ಕಟ್ಟಿದರು. ಹೀಗೆ,  ಬಸವಣ್ಣನವರು ಮಾಡುತ್ತಿದ್ದ ಕ್ರಾಂತಿಯು ಅಂದು ಪ್ರಭಾವಶಾಲಿಗಳಾಗಿದ್ದ ಬ್ರಾಹ್ಮಣರನ್ನು ಕಂಗೆಡಿಸಿತು.  ಅವರೆಲ್ಲರೂ ಬಿಜ್ಜಳನ ಕಿವಿ ಕಚ್ಚಿದರು. ಇದು ಸಂಘರ್ಷಕ್ಕೆ ಕಾರಣವಾಯಿತು. ಅರಮನೆ ತೊರೆದ ಬಸವಣ್ಣನವರು ಭಕ್ತಿ ಭಂಡಾರಿಯಾದರು. ಆ ಸಂಘರ್ಷದಲ್ಲಿ ತಮ್ಮ ಜೀವವನ್ನೆ ಕಳೆದುಕೊಂಡರು.

ನಂತರದ ದಿನಮಾನಗಳಲ್ಲಿ ಈ ಕ್ರಾಂತಿಗೆ ಕಾರಣವಾಗಿದ್ದು ಮಹಾರಾಷ್ಟ್ರದ ಸಾಹು ಮಹಾರಾಜರು. ಜ್ಯೋತಿಭಾಪುಲೆ ಮತ್ತು ಸಾವಿತ್ರಿ ಭಾಪುಲೆ. ತಮಿಳುನಾಡಿನ ಪೆರಿಯಾರ್, ಕೇರಳದ ನಾರಾಯಣಗುರು ಅವರೆಲ್ಲರೂ ಈ ಕ್ರಾಂತಿಯ ಹೆಜ್ಜೆಗಳನ್ನು ಹಿರಿದಾಗಿಸಿದರು. ಬಸವಣ್ಣನವರು ದಕ್ಷಿಣದ ರಾಜ್ಯದಲ್ಲಿ ಮಾಡಿ ಕ್ರಾಂತಿಗೆ ಇಡೀ ದೇಶದ ವ್ಯಾಪ್ತಿ ಹಿಗ್ಗಿಸಲು ಡಾ. ಬಿ ಆರ್ ಅಂಬೇಡ್ಕರ್ ಬರಬೇಕಾಯಿತು. ಅಲ್ಲಿಯವರೆಗೂ ಅಂತಹದೊಂದು ಸಾಧ್ಯವೇ ಆಗಲಿಲ್ಲ. ಅಂಬೇಡ್ಕರ್ ಕೊಟ್ಟ ಸಂವಿಧಾನವು ದೇಶದ ದಿಕ್ಕನ್ನೇ ಬದಲಾಯಿಸಿತು.

ಅದೇ ಆಸುಪಾಸಿನೊಳಗೆ ಬಂದ  ಬಾಬು ಜಗಜೀವನರಾಂ, ಹಿಂದುಳಿದವರ ಮಹಾಚೇತನ ಕರ್ಪೂರಿ ಠಾಕೂರ್, ಕಾಮರಾಜ ನಾಡಾರ್‌ ದೇಶದ ಹಲವು ರಾಜ್ಯಗಳ ಗತಿಯನ್ನೇ ಬದಲಾಯಿಸಿದರು. ಕರ್ನಾಟಕದಲ್ಲಿ ಇಂತಹದೊಂದು ಕ್ರಾಂತಿಕಾರಕ ಹೆಜ್ಜೆಗೆ ಕಾರಣವಾಗಿದ್ದು ದೇವರಾಜ ಅರಸು ಅವರು. ಅನೇಕ ಕಾಯ್ದೆಗಳನ್ನು, ಜನಪರ ಕಾರ್ಯಕ್ರಮಗಳನ್ನು, ಮೀಸಲಾತಿ ವಿಷಯದಲ್ಲಿ ಕಠಿಣ ನಿಲುವನ್ನು ತಾಳಿದವರು ಅರಸರು. ಅದೇ ಹಾದಿಯಲ್ಲಿ ಸಾಗಿದವರು ಹಿಂದುಳಿದ ಈಡಿಗ ಸಮುದಾಯಕ್ಕೆ ಸೇರಿದ ಎಸ್. ಬಂಗಾರಪ್ಪನವರು. ಆದರೆ, ಅವರಿಗೆ ಹೆಚ್ಚು ಅವಧಿಯ ಅಧಿಕಾರ ಸಿಗಲೇ ಇಲ್ಲ; ಪಿ.ವಿ. ನರಸಿಂಹರಾವ್ ಮತ್ತು ಸೀತಾರಾಂ ಕೇಸರಿಯಂತಹ ಬ್ರಾಹ್ಮಣರು ಬಿಡಲಿಲ್ಲ.

ಇಂತಹದೊಂದು ಮಹಾನ್ ಪರಂಪರೆಯನ್ನು ಏಕೆ ನೆನಪಿಸಿಕೊಳ್ಳಬೇಕಾಯಿತೆಂದರೆ ಅಂತಹ ಕಾಳಜಿಪರ ರಾಜಕಾರಣ ಮಾಡುತ್ತಿರುವ ಪುಣ್ಯಪುರುಷ ಸಿದ್ದರಾಮಯ್ಯನವರು ಈಗ ನಮ್ಮ ನಡುವಿನಲ್ಲಿದ್ದಾರೆ. ನಮ್ಮೆಲ್ಲರ ಆಶಾಕಿರಣವಾಗಿದ್ದಾರೆ. ದೇಶದಲ್ಲಿ ತಾಂಡವವಾಡುತ್ತಿರುವ ಮೇಲ್ಜಾತಿ ರಾಜಕಾರಣದ ವಿರುದ್ಧ, ಧರ್ಮದ ಅಮಲಿನ ರಾಜಕಾರಣದ ವಿರುದ್ಧ ಸೆಟೆದು ನಿಂತು, ಬಡವರು–ಶೋಷಿತರೇ ಆಗಿರುವ ಅಹಿಂದ ಸಮುದಾಯದ ಕಣ್ಣೀರು ಒರೆಸಲು ಆರಂಭಿಸಿದ್ದಾರೆ; ತಳ ಸಮುದಾಯದವರಿಗೆ ಬಲ ಕೊಡುವ,ಸ್ವಾಭಿಮಾನದ ಬದುಕು ಕಟ್ಟಿಕೊಡುವ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಜಾರಿಗೆ ತರುತ್ತಲೇ ಇದ್ದಾರೆ.

ದೇವರಾಜ ಅರಸುರವರ ನಂತರ ಸುದೀರ್ಘ ಅವಧಿ ಆಡಳಿತ ನಡೆಸುವ ಅವಕಾಶ ಅಹಿಂದ ಸಮುದಾಯಕ್ಕೆ ಸಿಕ್ಕಿದೆ ಎಂದರೆ ಅದು ಸಿದ್ದರಾಮಯ್ಯನವರಿಗೆ ಮಾತ್ರ. ಒಂದು ಅವಧಿಯಲ್ಲಿ ಐದು ವರ್ಷ ಅಧಿಕಾರ ನಡೆಸಿ, ಅನೇಕ ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದ ಸಿದ್ದರಾಮಯ್ಯ ತಮ್ಮ ವರ್ಚಸ್ಸಿನ ಬಲದಿಂದಲೇ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಮತ್ತೊಂದು ಅವಧಿ ಪೂರ್ಣ ಅವರಿಗೆ ಅವಕಾಶ ಸಿಗುವಂತೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ಅಹಿಂದ ಸಮುದಾಯದ ನಾಯಕರು, ಶಾಸಕರು ನೋಡಿಕೊಂಡರೆ ರಾಜ್ಯದ ಹಿಂದುಳಿದ–ದಲಿತ ಸಮುದಾಯದವರು ಎದೆಯುಬ್ಬಿಸಿ ನಡೆಯುವ ದಿನಗಳು ಖಂಡಿತಾ ಬರಲಿವೆ.

ಚೀನಾವು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುವ ಮೊದಲು ಅಮೇರಿಕವು ಇಡೀ ವಿಶ್ವದ ಮೇಲೆ ತನ್ನ ಹಿಡಿತವನ್ನು ಸಾಧಿಸಿತ್ತು. ತನ್ನ ಸಾಮ್ರಾಜ್ಯಶಾಹಿ ಧೋರಣೆಗೆ ಒಪ್ಪದ ರಾ‌ಷ್ಟ್ರಗಳ ಮೇಲೆ ಯುದ್ಧ ಸಾರುತ್ತಿತ್ತು. ಇಲ್ಲವೇ, ನೆರೆಯ ರಾಷ್ಟ್ರಗಳಿಗೆ ಅಥವಾ ಆ ದೇಶದಲ್ಲೇ ಇದ್ದ ಅಮೇರಿಕ ಪರವಾದ ಗುಂಪುಗಳಿಗೆ ಕುಮ್ಮಕ್ಕು ಕೊಟ್ಟು ಆ ದೇಶದ ವಿರುದ್ಧ ದಂಗೆ ಎಬ್ಬಿಸುತ್ತಿತ್ತು. ಆಗೆಲ್ಲ, ಅಮೇರಿಕವನ್ನು ಖಂಡಿಸುವವರು ಯಾರೂ ಇರಲಿಲ್ಲ. ಇದ್ದರೆ, ಅವರನ್ನು ಸದೆಬಡಿಯುವ ಕೆಲಸವನ್ನು ಅಮೇರಿಕ ಮಾಡುತ್ತಿತ್ತು. ಆ ಹೊತ್ತಿನೊಳಗೆ ಅಮೇರಿಕೆಯ ವಿರುದ್ಧ ಧ್ವನಿ ಎತ್ತಿದವರು ನೋಮ್‌ ಚಾಮ್‌ಸ್ಕಿ ಎಂಬ ಬರೆಹಗಾರ. ಚಾಮ್‌ಸ್ಕಿ ಮಾತೆತ್ತಿದರೆ, ಅವರು ಬರೆದರೆ ಅಮೇರಿಕ ತಲ್ಲಣಗೊಂಡು ತತ್ತರಿಸಿಹೋಗುತ್ತಿತ್ತು. ಹೀಗಾಗಿಯೇ, ಚಾಮ್‌ಸ್ಕಿ ಅವರನ್ನು ಮನುಕುಲದ ಮಾತುಗಾರ ಎಂದು ಕರೆಯುತ್ತಿದ್ದರು.

ಇವತ್ತು ಇಂಡಿಯಾ ದೇಶದ ಪರಿಸ್ಥಿತಿಯೂ ಹಾಗೆಯೇ ಇದೆ. ಪ್ರಧಾನಿ ನರೇಂದ್ರ ಮೋದಿ–ಗೃಹ ಸಚಿವ ಅಮಿತ್ ಶಾ ಎದುರು ಮಾತನಾಡಿದರೆ ಅವರನ್ನು ಬಡಿದು, ನಿವಾಳಿಸಿ ಎಸೆಯುವ ರಾಜಕಾರಣ ನಡೆಯುತ್ತಿದೆ. ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐ ಹೀಗೆ ಎಲ್ಲ ಅಸ್ತ್ರವನ್ನೂ ಬಳಸಿಕೊಂಡು ತಮ್ಮ ಎದುರಾಳಿಗಳನ್ನು ಹಣ್ಣುಗಾಯಿ ಮಾಡುವ ಕೆಲಸವನ್ನು ಮೋದಿ ಮಾಡುತ್ತಲೇ ಇದ್ದಾರೆ. ಒಂದೋ ತಾವು ಹೇಳಿದಂತೆ ಬಗ್ಗಿ ನಡೆಯಬೇಕು; ಇಲ್ಲವೇ ಬಿಜೆಪಿಯ ವಾಷಿಂಗ್ ಮೆಷಿನ್‌ಗೆ ಬಿದ್ಧು ಶುದ್ಧರಾಗಬೇಕು. ಈ ರೀತಿಯ ತಂತ್ರಗಾರಿಕೆಯನ್ನು ಮೋದಿ–ಶಾ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಏಕನಾಥ ಶಿಂಧೆ, ಬಿಹಾರದ ಹಿಂದುಳಿದ ಸಮುದಾಯದ ನಾಯಕ ನಿತೀಶ್ ಕುಮಾರ್‌ ಬಿಜೆಪಿ ಜತೆಗೆ ಕೈಜೋಡಿಸಿದ್ದು ಇದಕ್ಕೆ ನಿದರ್ಶನ. ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಹಾಗೂ ಅವರ ಸಚಿವ ಸಂಪುಟದ ಸದಸ್ಯರಿಗೆ ಯಾವ ರೀತಿಯ ಕಿರುಕುಳ ನೀಡಲಾಗುತ್ತಿದೆ ಎಂಬುದನ್ನು ವಿವರಿಸುವ ಅಗತ್ಯವೇನೂ ಇಲ್ಲ. ತಮಗೆ ಬೇಕಾದವರನ್ನು ಹೇಗೆ ಬಗ್ಗಿಸಿ ಬಡಿಯುತ್ತಾರೆ ಎಂಬುದಕ್ಕೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ ಚೌಹಾಣ್‌, ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ನಿದರ್ಶನವಾಗಿಟ್ಟುಕೊಳ್ಳಬಹುದು. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಹಾಗೂ ಹಿಮಾಚಲ ಪ್ರದೇಶದ ಸುಖ್ವಿಂದರ್ ಸಿಂಗ್ ಸುಖು ಅವರ ಇತ್ತೀಚಿನ ನಡೆವಳಿಕೆಗಳೂ ಕೂಡ ಮೋದಿ–ಶಾ ತಂತ್ರಗಾರಿಕೆಗೆ ಭೀತಿಬಿದ್ಧ ಹಾಗೆ ತೋರಿಸುತ್ತದೆ. ತಮಗೆ ಎದುರು ನಿಲ್ಲುವ, ತಮಗೆ ಪೈಪೋಟಿ ನೀಡುವಂತೆ ರಾಜಕಾರಣ ಮಾಡುವವರನ್ನು ಹೆಡೆಮುರಿ ಕಟ್ಟುವ ಕೆಲಸವನ್ನು ಈ ಜೋಡಿ ಮಾಡುತ್ತಲೇ ಇದೆ.

ಇಂತಹ ಅಸಹನೀಯ ಹಾಗೂ ದಮನಕಾರಿ ರಾಜಕಾರಣದ ಮಧ್ಯೆಯೂ ಕೇಂದ್ರದ ನಡೆಯುನ್ನು, ಮೋದಿ–ಅಮಿತ್ ಅವರ ಕೆಟ್ಟ ರಾಜಕೀಯವನ್ನು, ದೇಶಕ್ಕೆ ಅವರು ಎಸಗುತ್ತಿರುವ ದ್ರೋಹವನ್ನು ಏರುಧ್ವನಿಯಲ್ಲಿ ದೇಶಕ್ಕೆ ವಿವರಿಸುತ್ತಿರುವುದು ಸಿದ್ದರಾಮಯ್ಯ ಮಾತ್ರ. ಅದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಸಾಥ್ ನೀಡುತ್ತಿದ್ದಾರೆ. ವಿಶ್ವಮಟ್ಟದಲ್ಲಿ ನೋಮ್‌ ಚಾಮ್‌ಸ್ಕಿ ಇದ್ದಂತೆ, ದೇಶದಲ್ಲಿ ಮನುಕುಲದ ಮಾತುಗಾರನಂತೆ ಕಾಣಿಸುತ್ತಿರುವುದು ಸಿದ್ದರಾಮಯ್ಯ ಒಬ್ಬರೇ.

ನ್ಯಾಯದ ಹರಿಕಾರ

ಕೇಂದ್ರವಿರಲಿ, ರಾಜ್ಯವಿರಲಿ ಬಜೆಟ್‌ ಎಂಬುದು ಸರ್ಕಾರದ ಧ್ಯೇಯಧೋರಣೆಗಳನ್ನು, ನೀತಿ ನಿಲುವುಗಳನ್ನು ಬಿಂಬಿಸುವ, ಸರ್ಕಾರದ ನಡೆ ಯಾರ ಕಡೆಗೆ ಎಂಬುದನ್ನು ವಿವರಿಸುವ ಕೈಪಿಡಿ. ಬಜೆಟ್ ನೋಡಿದರೆ ಸಾಕು ಯಾವ ಸರ್ಕಾರ ಯಾರ ಪರವಾಗಿದೆ ಎಂಬುದನ್ನು ನಿಚ್ಚಳವಾಗಿ, ನಿರ್ಣಾಯಕವಾಗಿ ಹೇಳಿಬಿಡಬಹುದು.

ಬಜೆಟ್ ರೂಪಿಸುವುದು ಹಾಗೂ ಮಂಡಿಸುವುದು ಕೇವಲ ಮೇಲ್ಜಾತಿಗಳ ಸ್ವತ್ತು; ಅವರಿಗಷ್ಟೇ ಆರ್ಥಿಕತೆಯ, ಸಂಪನ್ಮೂಲ ಕ್ರೋಡೀಕರಣ, ಕೊರತೆ–ಮಿಗತೆಗಳ ಸೂತ್ರ ಅರ್ಥವಾಗುವುದು ಎಂದು ಭಾವಿಸಿದ್ದ ಒಂದು ಕಾಲವಿತ್ತು. ಅದೇ ಕಾರಣಕ್ಕೆ ಏನೋ ಕರ್ನಾಟಕದ ಮಟ್ಟಿಗೆ ಅತಿ ಹೆಚ್ಚು ಮಂಡಿಸಿದ ಕೀರ್ತಿ ರಾಮಕೃಷ್ಣ ಹೆಗಡೆ ಅವರ ಹೆಗಲಲ್ಲೇ ಇತ್ತು. ದೇಶ ಕಂಡ ಅತಿ ಉತ್ತಮ ಆರ್ಥಿಕ ತಜ್ಞ ಎಂದು ಸ್ವಯಂ ಬಿಂಬಿಸಿಕೊಂಡ ಹೆಗಡೆಯವರು 11 ಬಾರಿ ಬಜೆಟ್ ಮಂಡಿಸಿದ್ದರು. ಉಳಿದವರಿಗೆ ಬಜೆಟ್ ಏನು ಗೊತ್ತಾಗುತ್ತದೆ ಎಂಬ ಅಣಕವಾಡುವ, ಹೀಗಳೆಯುವ ಪರಿಸ್ಥಿತಿಯನ್ನು ಸೃಷ್ಟಿಸಲಾಗಿತ್ತು. ಅದನ್ನು ಒಡೆಯಲು ಕಡೆಗೂ ಸಿದ್ದರಾಮಯ್ಯನವರೇ ಬರಬೇಕಾಯಿತು.

1994ರಲ್ಲಿ ಎಚ್‌ ಡಿ ದೇವೇಗೌಡ ನೇತೃತ್ವದ ಜನತಾದಳ ಸರ್ಕಾರ ಬಂದಾಗ ಹಣಕಾಸು ಖಾತೆಯ ಹೊಣೆ ಸಿದ್ದರಾಮಯ್ಯನವರ ಪಾಲಿಗೆ ಬಂತು. ಅಷ್ಟೊತ್ತಿಗೆ ಕರ್ನಾಟಕದ ಆರ್ಥಿಕ ಸ್ಥಿತಿ ಕಳೆಗುಂದಿತ್ತು. ನೀರಾವರಿ, ಮೂಲಸೌಕರ್ಯ ಸೇರಿದಂತೆ ಅಭಿವೃದ್ಧಿ ಯೋಜನೆಗಳಿಗೆ ಹಣವೇ ಇರದ ಪರಿಸ್ಥಿತಿ ಇತ್ತು. ಅದನ್ನು ಸಂಭಾಳಿಸಿ, ಕರ್ನಾಟಕದ ಪರಿಸ್ಥಿತಿಯನ್ನು ಉತ್ತಮಗೊಳಿಸುವ ಜವಾಬ್ದಾರಿಯೂ ಇತ್ತು. ಸಿದ್ದರಾಮಯ್ಯ ಬಜೆಟ್ ತಯಾರಿ ನಡೆಸುತ್ತಿದ್ದಂತೆ ಮತ್ತೆ ಕುಹಕದ ಮಾತುಗಳು ಶುರುವಾದವು. ಕುರಿಕಾಯುವವನಿಗೆ ಏನು ಗೊತ್ತು ಹಣಕಾಸಿನ ವಿಷಯ ಎಂದು ಕೆಲವರು ಟೀಕಿಸಿದರು. ಆದರೆ, ಸಿದ್ದರಾಮಯ್ಯ ಅದಕ್ಕೆ ತಲೆಯನ್ನೇ ಕೆಡಿಸಿಕೊಳ್ಳಲಿಲ್ಲ. ಹೆಗಡೆಯವರ ಹೆಗಲಿನಲ್ಲಿದ್ದ ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆಯನ್ನು ಮುರಿಯುವ ಕನಸೂ ಅವರಿಗೆ ಇದ್ದಿರಲಿಕ್ಕಿಲ್ಲ. ಆದರೆ,ನೋಡ ನೋಡುತ್ತಿದ್ದಂತೆ ಸ್ವತಃ ಹೆಗಲ ಮೇಲೆ ಟವಲ್ ಹಾಕಿಕೊಳ್ಳುವುದನ್ನು ರೂಢಿ ಮಾಡಿಕೊಂಡಿದ್ದ ಸಿದ್ದರಾಮಯ್ಯನವರು ಹೆಗಡೆಯವರ ಹೆಗಲಿನ ಮೇಲಿದ್ದ ಟವಲ್ ಕಿತ್ತುಕೊಂಡರು. 15 ಬಾರಿ ಬಜೆಟ್ ಮಂಡಿಸಿದ ಕೀರ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು.

ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್–ಜೆಡಿಎಸ್ ಸರ್ಕಾರದಲ್ಲಿ ಹಣಕಾಸು ಸಚಿವರಾದ ಸಿದ್ದರಾಮಯ್ಯ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಅದರಲ್ಲಿ, ಪ್ರಮುಖವಾದುದು ಜಾತಿವಾರು ಜನಗಣತಿ ಅಂದರೆ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಸಮೀಕ್ಷೆಗೆ ಹಣವನ್ನು ಇಟ್ಟು,ಅದಕ್ಕೆ ಚಾಲನೆ ಕೊಡುವ ಕೆಲಸ ಮಾಡಿದರು. ಅದೀಗ ಸಾಕಾರಗೊಂಡಿದ್ದು, ಜಾತಿವಾರು ಜನಗಣತಿ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

2013ರಲ್ಲಿ ಮುಖ್ಯಮಂತ್ರಿಯಾದ ಮೇಲೆ ಆರ್ಥಿಕತೆಯ ಪೂರ್ಣ ಹಿಡಿತ ಅವರ ಕೈಗೆ ದಕ್ಕಿತು. ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡ ಸಿದ್ದರಾಮಯ್ಯ , ತಾವು ಹಿಂದೆಲ್ಲ ಮಂಡಿಸಿದ್ದ ಜನ ಕಲ್ಯಾಣದ ಬಜೆಟ್‌ನ ಎಳೆಗಳನ್ನು ಪ್ರಧಾನ ಧಾರೆಯಾಗಿ ಹರಿಸಿದರು. ಬಸವ ಜಯಂತಿಯ ದಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ, ಬಸವಣ್ಣನವರು ಕಾಯಕ–ದಾಸೋಹದ ಪರಿಕಲ್ಪನೆಯನ್ನು ತಮ್ಮ ಆಡಳಿತಾವಧಿಯಲ್ಲಿ ಅನುಷ್ಠಾನಕ್ಕೆ ತಂದರು. ಏಕಾಂಗಿಯಾಗಿ ಸಚಿವ ಸಂಪುಟ ಸಭೆ ನಡೆಸಿದ ಸಿದ್ದರಾಮಯ್ಯ, ಮೊದಲ ದಿನವೇ ಬಡವರಿಗೆ ಅನ್ನ ನೀಡುವ ಅನ್ನಭಾಗ್ಯ ಯೋಜನೆ ಘೋಷಿಸಿದರು. ಒಂದು ರೂಪಾಯಿಗೆ ಅಕ್ಕಿಗೆ ಕೊಡುವ ಮಹತ್ವದ ಯೋಜನೆ ಇದಾಗಿತ್ತು. ರಾಜ್ಯದಲ್ಲಿ ಹಸಿವಿನಿಂದ ಕಂಗೆಟ್ಟು, ನಿದ್ರೆ ಬರದೇ ಯಾರೊಬ್ಬರೂ ಒದ್ದಾಡಬಾರದು ಎಂಬ ಆಶಯದಡಿ ರೂಪುಗೊಂಡಿದ್ದೇ ಈ ಯೋಜನೆ. ಅದೇ ದಿನವೇ ಮತ್ತೊಂದು ಮಹತ್ವದ ತೀರ್ಮಾನವನ್ನು ಅವರು ಪ್ರಕಟಿಸಿದರು. ಹಿಂದುಳಿದವರು, ದಲಿತರ ಕಲ್ಯಾಣಕ್ಕಾಗಿ ರಚಿಸಲಾಗಿರುವ ನಿಗಮಗಳಲ್ಲಿ ದುಡಿದು ತಿನ್ನುವವರಿಗೆ ನೀಡಿದ್ದ ಸಾಲವನ್ನು ಮನ್ನಾ ಮಾಡಿದ್ದರು. ಈ ಮೂಲಕ ತಮ್ಮ ಕಾಳಜಿ ಏನಿರುತ್ತದೆ ಎಂಬುದನ್ನು ಅವರು ಸ್ಪಷ್ಟ ರೇಖೆಗಳಲ್ಲಿ ತೋರಿಸಿದರು.

ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಇಂದಿರಾ ಕ್ಯಾಂಟೀನ್ ಆರಂಭಿಸಿದರು. ಅನ್ನಭಾಗ್ಯದ ಅಡಿ ಅಕ್ಕಿಕೊಟ್ಟರೂ ನಗರ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಊಟ ಸಿಗದ ಪರಿಸ್ಥಿತಿ ಇತ್ತು. ಅದರಲ್ಲೂ ದೂರ ಊರುಗಳಿಂದ ನಗರಗಳ ಆಸ್ಪತ್ರೆಗಳನ್ನು ಅರಸಿ ಬಂದವರು, ದುಡಿಮೆಗಾಗಿ ನಗರ ಸೇರಿದವರು, ವಿವಿಧ ಕಡೆಗಳಲ್ಲಿ ಸೆಕ್ಯುರಿಟಿ ಕೆಲಸ ಮಾಡುವವರು, ಆಟೋ–ಕ್ಯಾಬ್ ಚಾಲಕರು, ಚಿಂದಿ ಆಯುವವರು, ಬೀದಿ ಬದಿ ವಿವಿಧ ವ್ಯಾಪಾರ ಮಾಡಿ ಜೀವನ ಸಾಗಿಸುವವರು,ಕೊಠಡಿಗಳಲ್ಲಿ, ಪಿ.ಜಿ.ಗಳಲ್ಲಿ ಇದ್ದುಕೊಂಡು ಓದುವ ವಿದ್ಯಾರ್ಥಿಗಳು ಇಂತಹವರಿಗೆ ಕಡಿಮೆ ದರದಲ್ಲಿ ಮೂರು ಹೊತ್ತು ತಿಂಡಿ, ಊಟ ಸಿಗುವಂತೆ ಇಂದಿರಾ ಕ್ಯಾಂಟೀನ್ ಕಾರ್ಯ ನಿರ್ವಹಿಸಿತು. ಬೆಳಿಗ್ಗೆ ತರಹೇವಾರಿ ತಿಂಡಿ, ಎರಡು ಹೊತ್ತು ಊಟ ಎಲ್ಲ ಕಡೆಗಳಲ್ಲಿ ಸಿಗಲಾರಂಭಿಸಿತು. ಹಸಿದವರು ಯಾರೇ ಇರಲಿ; ಅವರೆಲ್ಲರಿಗೂ ಊಟ ಸಿಗಬೇಕು ಎಂಬುದಷ್ಟೇ ಸಿದ್ದರಾಮಯ್ಯನವರ ಕಳಕಳಿಯಾಗಿತ್ತು. ಅದರ ಜತೆಗೆ ಮಕ್ಕಳಲ್ಲಿ ಅಪೌಷ್ಟಿಕತೆ ತಾಂಡವವಾಡುವ ಬಗ್ಗೆ ವರದಿಗಳು ಬರುತ್ತಲೇ ಇದ್ದವು. ಅದನ್ನು ನೀಗಿಸಲು ಶಾಲಾ ಮಕ್ಕಳಿಗೆ ದಿನವೂ ಹಾಲು ಪೂರೈಸುವ ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಿದರು.

ಎಷ್ಟೇ ಹಾಸ್ಟೆಲ್ ಸೌಲಭ್ಯ ಒದಗಿಸಿದರೂ ಅನೇಕರಿಗೆ ಹಾಸ್ಟೆಲ್‌ಗಳು ಸಿಗುತ್ತಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿದ್ದರಾಮಯ್ಯ ಇದಕ್ಕೊಂದು ಯೋಜನೆ ರೂಪಿಸಿದರು. ತಿಂಗಳಿಗೆ 1500 ರೂಗಳಂತೆ 10 ತಿಂಗಳು ವಿದ್ಯಾಭ್ಯಾಸಕ್ಕೆ ನೆರವಾಗುವ ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತಂದರು. ಸಾವಿರಾರು ವಿದ್ಯಾರ್ಥಿಗಳಿಗೆ ಇದರಿಂದ ಓದಲು ಅನುಕೂಲವಾಯಿತು. ಶಾಲಾ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಬೈಸಿಕಲ್, ಮಧ್ಯಾಹ್ನದ ಬಿಸಿಯೂಟ ಯೋಜನೆಗಳು ಇದ್ದವು. ಹಾಗಿದ್ದರೂ ಶಾಲೆಗಳಲ್ಲಿ ಸಣ್ಣದೊಂದು ಕೊರತೆ ಇತ್ತು. ಕೆಲವು ಮಕ್ಕಳು ಶೂ ಕೆಲವರು ಚಪ್ಪಲಿ ಹಾಕಿಕೊಂಡು ಬಂದರೆ, ಕೆಲವರು ಬರಿಗಾಲಲ್ಲೇ ಬರುತ್ತಿದ್ದರು. ಈ ತಾರತಮ್ಯ ನಿವಾರಣೆ ಮಾಡಲು ಶಾಲಾ ಮಕ್ಕಳಿಗೆ ಶೂ ಭಾಗ್ಯವವನ್ನು ಕೊಟ್ಟರು. ಬಜೆಟ್‌ನಲ್ಲೇ ಇದಕ್ಕೆಲ್ಲ ಅನುದಾನ ಕೊಟ್ಟರು. ಹೆಣ್ಣುಮಕ್ಕಳಿಗೆ ಋತುಸ್ರಾವ ಅಥವಾ ಮುಟ್ಟು ಎಂಬುದು ವೇದನೆಯ ಹಾಗೂ ಸಹಿಸಲು ಕಷ್ಟವಾದ ಪರಿಸ್ಥಿತಿ. ಋತುಚಕ್ರದ ವೇಳೆಯಲ್ಲಿ ಪ್ಯಾಡ್ ಖರೀದಿಸಲು ಬಡ ಮಕ್ಕಳ ಪೋಷಕರಿಗೆ ಆಗುತ್ತಿರಲಿಲ್ಲ. ಇದನ್ನು ತಪ್ಪಿಸಿ, ಶಾಲೆ–ಹಾಸ್ಟೆಲ್‌ಗಳಲ್ಲಿ  ಪ್ಯಾಡ್ ವಿತರಿಸುವ ಶುಚಿ ಯೋಜನೆಯನ್ನೂ ಅನುಷ್ಠಾನಕ್ಕೆ ತಂದರು.

ಹೀಗೆ ಬಜೆಟ್ ಮತ್ತು ಸರ್ಕಾರದ ಕಾರ್ಯಕ್ರಮಗಳನ್ನು ನೋಡಿದರೆ ತಳ ಸಮುದಾಯಗಳು, ಅಲಕ್ಷಿತರ ಪರ ಹತ್ತಾರು ಯೋಜನೆಗಳನ್ನು ರೂಪಿಸಿ, ಅದನ್ನು ಜಾರಿಗೊಳಿಸಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಜತೆಗೆ, ಸರ್ಕಾರವೆಂಬುದು ನಿಜವಾಗಿಯೂ ಯಾರ ಪರ ಇರಬೇಕು; ಯಾರ ಹಿತ ಕಾಯಬೇಕು ಎಂಬುದನ್ನು ಸಿದ್ದರಾಮಯ್ಯ ತೋರಿಸಿಕೊಟ್ಟಂತೆ ಕಾಣುತ್ತದೆ.

ಇಷ್ಟೆಲ್ಲ ಜನಪರ ಕಾರ್ಯಕ್ರಮಗಳನ್ನು ಕೊಟ್ಟರೆ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿ ಬಿಡುತ್ತದೆ ಎಂದು ಉಳ್ಳವರು ಆಪಾದಿಸುತ್ತಲೇ ಇದ್ದರು. ಸಿದ್ದರಾಮಯ್ಯ ಅಧಿಕಾರ ಹಿಡಿದಾಗ ಒಟ್ಟು ಬಜೆಟ್ ಮೊತ್ತದಲ್ಲಿ ಶೇ 98ರಷ್ಟು ಆಡಳಿತವೆಚ್ಚ ಅಂದರೆ ಸಂಬಳ, ಸಾರಿಗೆ, ಸಹಾಯಧನಕ್ಕೆ ಹೋಗುತ್ತಿತ್ತು. ಅದನ್ನು ಸರಿಮಾಡಲು ಸಿದ್ದರಾಮಯ್ಯ ಪಣತೊಟ್ಟರು. 2018ರಲ್ಲಿ ಅವರು ಅಧಿಕಾರದಿಂದ ಇಳಿಯುವ ಹೊತ್ತಿಗೆ ಆಡಳಿತ ವೆಚ್ಚ ಶೇ 83ಕ್ಕೆ ಇಳಿದಿತ್ತು. ಅಷ್ಟರಮಟ್ಟಿಗೆ ಆಡಳಿತದಲ್ಲಿ, ಆರ್ಥಿಕತೆಯಲ್ಲಿ ಸುಧಾರಣೆ ತಂದಿದ್ದರು.

ಈಗ ಎರಡನೇ ಬಾರಿ ಅಧಿಕಾರಕ್ಕೆ ಏರಿದ್ದಾರೆ. ಅಧಿಕಾರಕ್ಕೆ ಬರುವ ಮೊದಲೇ ಐದು ಗ್ಯಾರಂಟಿಗಳನ್ನು ಘೋಷಿಸಿದ್ದರು. ಅದು ಜಾರಿಯೇ ಆಗುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಕರ್ನಾಟಕದಲ್ಲಿ ಚುನಾವಣೆ ಪ್ರಚಾರ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಚುನಾವಣೆ ಫಲಿತಾಂಶದ ಬಳಿಕ ಗ್ಯಾರಂಟಿಗೆ ವಾರಂಟಿಯೇ ಇರುವುದಿಲ್ಲ ಎಂದು ಏರು ಧ್ವನಿಯಲ್ಲಿ ಹೇಳಿದ್ದರು. ಗ್ಯಾರಂಟಿ ಜಾರಿ ಮಾಡಿದರೆ ರಾಜ್ಯವೇ ದಿವಾಳಿಯಾಗುತ್ತದೆ ಎಂದು ಕುಟುಕಿದ್ದರು. 

ಅಧಿಕಾರಕ್ಕೆ ಬಂದ ವಾರದೊಪ್ಪತ್ತಿನಲ್ಲಿ ಅನ್ನಭಾಗ್ಯ ಜಾರಿ, 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ, ಮನೆಯೊಡತಿಗೆ ತಿಂಗಳಿಗೆ 2 ಸಾವಿರ ನೀಡುವ ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿಯೇ ಬಿಟ್ಟರು. ಮಹಿಳೆಯರು ಎಲ್ಲಿಗೆ ಬೇಕಾದರೂ ಉಚಿತವಾಗಿ ಓಡಾಡಲು ಶಕ್ತಿ ಯೋಜನೆ ಹಾಗೂ ನಿರುದ್ಯೋಗಿಗಳಿಗೆ 3 ಸಾವಿರದವರೆಗೆ ಮಾಸಾಶನ ನೀಡುವ ಯುವ ನಿಧಿ. ಈ ಪೈಕಿ ಎಲ್ಲವೂ ಜಾರಿಯಾಗಿವೆ. ಸುಮಾರು ನಾಲ್ಕೂವರೆ ಕೋಟಿ ಕುಟುಂಬಗಳಿಗೆ ಈಗ ಸೌಲಭ್ಯ ದೊರಕುತ್ತಿದೆ. ಸರಾಸರಿ ಒಂದು ಕುಟುಂಬಕ್ಕೆ 5 ಸಾವಿರದಿಂದ 8 ಸಾವಿರದವರೆಗೆ ಪ್ರತಿ ತಿಂಗಳು ಹಣ ಸಿಗುತ್ತಿದೆ. ಮಹಿಳೆಯರಂತೂ ಪಂಜರದಿಂದ ಹೊರಬಂದ ಹಕ್ಕಿಗಳಂತೆ ಓಡಾಡುತ್ತಿದ್ದಾರೆ.

ಸರ್ಕಾರದ ಹಣ ಜನರ ಕೈಗೆ ನೇರವಾಗಿ ಹೋಗುವ ಹೊಸ ಆರ್ಥಿಕ ವಿಧಾನವನ್ನು ಸಿದ್ದರಾಮಯ್ಯ ಜಾರಿಗೆ ತಂದಿದ್ದಾರೆ. ಇದರಿಂದಾಗಿ ಜನರ ಕೈಯಲ್ಲಿ ಹಣ ಓಡಾಡುತ್ತಿದೆ. ಅದು ಖರೀದಿಯನ್ನೂ ಹೆಚ್ಚಳ ಮಾಡಿದ್ದು, ಸರ್ಕಾರದ ಬೊಕ್ಕಸಕ್ಕೂ ಪಾಲು ಬರುತ್ತಿದೆ. ವ್ಯಾಪಾರ ಹೆಚ್ಚಳವಾಗಿರುವುದರಿಂದಾಗಿ ಅಂಗಡಿ, ಹೋಟೆಲು, ಲಾಡ್ಜ್ ನಡೆಸುವವರಿಗೂ ಲಾಭವಾಗಿದೆ. ಇದೊಂದು ಆರ್ಥಿಕ ಚಕ್ರ. ಬಹುಸಂಖ್ಯಾತರ ಕೈಗೆ ಅಲ್ಪಸ್ವಲ್ಪ ಹಣ ತಲುಪಿದರೆ ಅದು ಹರಿದಾಡುತ್ತಲೇ ಇರುತ್ತದೆ. ಅದೇ ಅಂಬಾನಿ, ಅದಾನಿಗಳಿಗೆ ಕೊಟ್ಟರೆ ಅವರ ಬಳಿ ಶೇಖರಣೆಯಾಗುತ್ತದೆ. ಅವರ ಆಸ್ತಿ ದುಪ್ಪಟ್ಟಾಗುತ್ತಲೇ ಹೋಗುತ್ತದೆ. ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವುದು ಒಂದು ಆರ್ಥಿಕತೆಯ ವಿಧಾನ. ಇಲ್ಲದವರ ಕೈಗೆ ಅಲ್ಪಸ್ವಲ್ಪ ಹಣ ತಲುಪಿಸಿ, ಅವರಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿಸಿ, ಇನ್ನಷ್ಟು ದುಡಿಯಬೇಕೆಂಬ ಹುಮ್ಮಸು ತುಂಬುವುದು, ಅವರ ಸ್ವಾವಲಂಬಿ ಬದುಕಿಗೆ ನೆರವಾಗುವುದು ಜನಪರ ಆರ್ಥಿಕತೆ ಮತ್ತೊಂದು ಮಾದರಿ. ಸಿದ್ದರಾಮಯ್ಯ ಎರಡನೇ ಮಾದರಿಯನ್ನು ಆರಿಸಿಕೊಂಡಿದ್ದಾರೆ, ಅದಕ್ಕಾಗಿಯೇ ‘ಕರ್ನಾಟಕ ಮಾದರಿ’ ಎಂಬ ಹೆಸರನ್ನೂ ಕೊಟ್ಟಿದ್ದಾರೆ.

ಯಾವ ಮೋದಿ ಮತ್ತು ಬಿಜೆಪಿಯವರು ಗ್ಯಾರಂಟಿಯನ್ನು ಟೀಕಿಸಿದ್ದರೋ ನಂತರ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಕರ್ನಾಟಕ ಮಾದರಿಯ ಗ್ಯಾರಂಟಿಗಳನ್ನು ಬಿಜೆಪಿಯೇ ಘೋಷಿಸಿತು. ಉಚಿತ ಕೊಟ್ಟರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಹಂಗಿಸಿದ್ದ ಬಿಜೆಪಿಯವರು ಅದೇ ಹಾದಿ ಹಿಡಿದರು. ಈಗ ಲೋಕಸಭೆ ಚುನಾವಣೆಯ ತಯಾರಿ ನಡೆದಿದೆ. ರಾಜ್ಯದ ಎಲ್ಲ ಪತ್ರಿಕೆ ಹಾಗೂ ಟಿ.ವಿಗಳಲ್ಲಿ ದಿನವೂ ‘ಮೋದಿ ಗ್ಯಾರಂಟಿ’ಯ ಭಜನೆ ಬರುತ್ತಿದೆ. ಮೋದಿಯವರಿಗೂ ಈಗ ಗ್ಯಾರಂಟಿಯೇ ಬೇಕಾಗಿದೆ. ವಿರೋಧಿಗಳನ್ನು ತಮ್ಮ ಹಾದಿ ಹಿಡಿಯುವಂತೆ ಮಾಡುವುದೇ ಸಿದ್ದರಾಮಯ್ಯನವರ ಶಕ್ತಿ.

ಹೊಸ ಶೈಲಿಯ ರಾಜಕಾರಣ

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಹೊಸ ದೇಶಕ್ಕೆ ಮಾದರಿಯಾಗುವ ಹೊಸ ಶೈಲಿಯ ರಾಜಕಾರಣವನ್ನು ಸಿದ್ದರಾಮಯ್ಯ ಹುಟ್ಟು ಹಾಕಿದ್ದಾರೆ. ಮಾತು ಸೋತ ಭಾರತದಲ್ಲಿ ಮಾತೇ ಗೆಲ್ಲುವ ಹಾದಿಯನ್ನೂ ಹುಡುಕಿದ್ದಾರೆ. ಅದನ್ನು ಸರಳವಾಗಿ ನರೇಟಿವ್‌ ಎಂದು ಕರೆಯಬಹುದು. ಅದೆಂದರೆ ಒಬ್ಬರು ಒಂದು ವಿಷಯವನ್ನು ಮುನ್ನೆಲೆಗೆ ತಂದರೆ ಎಲ್ಲ ಚರ್ಚೆಗಳೂ ಅದೇ ದಾರಿಯಲ್ಲಿ ಸಾಗುತ್ತವೆ.

ಸಂವಿಧಾನ ಬದಲಿಸುವುದೇ ಬಿಜೆಪಿಯ ಗುರಿ ಎಂದು ಅನಂತಕುಮಾರ್ ಹೆಗಡೆ ಹಾಗೂ ಕೆ.ಎಸ್. ಈಶ್ವರಪ್ಪನಂತವರು ಹೇಳಿಕೆ ಕೊಡುತ್ತಲೇ ಇದ್ದಾರೆ. ಮೋದಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಆಂತರ್ಯದಲ್ಲಿ ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇದಕ್ಕೆ ಪರ್ಯಾಯ ಹುಡುಕಿದ ಸಿದ್ದರಾಮಯ್ಯನವರು, ಸಂವಿಧಾನ ಪೀಠಿಕೆಗೆ ಆದ್ಯತೆ ನೀಡಿದರು. ಎಲ್ಲ ಶಾಲೆಗಳಲ್ಲೂ ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯಗೊಳಿಸಿದರು. ಜತೆಗೆ, ಸಂವಿಧಾನ ಪೀಠಿಕೆಯ ಫಲಕ ಹಾಕುವಂತೆ ನೋಡಿಕೊಂಡರು. ಸಂವಿಧಾನ ಜಾಗೃತಿ ಜಾಥಾ, ಸಮಾವೇಶಗಳು ನಾಡಿನಾದ್ಯಂತ ನಡೆದವು. ಸಂವಿಧಾನ ಉಳಿಸಿಕೊಳ್ಳುವ ಅನಿವಾರ್ಯತೆಯನ್ನು ತಿಳಿ ಹೇಳಿದರು. ಸಂವಿಧಾನ ಬದಲಿಸುವ ಮಾತುಗಳು ಕ್ಷೀಣವಾಗ ತೊಡಗಿ, ಸಂವಿಧಾನದ ಆಶಯಗಳು ವಿಜೃಂಭಿಸತೊಡಗಿದವು. ಮಾತು–ಕೃತಿಯಲ್ಲಿ ಅದು ಜಾರಿಯಾಗತೊಡಗಿತು.

ಮತ್ತೊಂದು ಹೆಜ್ಜೆ ಮುಂದೆ ಹೋದ ಸಿದ್ದರಾಮಯ್ಯನವರು ಸಂವಿಧಾನ ಹಾಗೂ ಪ್ರಜಾತಂತ್ರದ ಆಶಯಗಳಿಗೆ ತಳ ಹದಿ ಹಾಕಿಕೊಟ್ಟ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರು. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಬಸವಣ್ಣನವವರ ಫೋಟೋಗಳನ್ನು ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಹಾಕುವುದನ್ನು ಕಡ್ಡಾಯಗೊಳಿಸಿದ್ದ ಸಿದ್ದರಾಮಯ್ಯ, ಈಗ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಬಸವಣ್ಣನವರ ಆಶಯಗಳನ್ನು ಸಾಕಾರಗೊಳಿಸುವ ಕೆಲಸಕ್ಕೆ ಕೈಹಾಕಿದ್ದಾರೆ.

ಈ ಹೊತ್ತು ದೇಶದಲ್ಲಿ ಹೀಗೆ ನರೇಟಿವ್‌ಗಳನ್ನು ಹುಟ್ಟುಹಾಕುತ್ತಿರುವವರಲ್ಲಿ ತಮಿಳುನಾಡಿನ ಸ್ಟಾಲಿನ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಹಾಗೂ ದೆಹಲಿಯ ಅರವಿಂದ ಕೇಜ್ರಿವಾಲ್ ಅವರಿದ್ದಾರೆ. ಇವರಿಗಿಂತ ಮತ್ತೊಂದು ಹೆಜ್ಜೆ ಮುಂದಿರುವವರು ಸಿದ್ದರಾಮಯ್ಯ. ಕೇಂದ್ರ ಸರ್ಕಾರ ತೆರಿಗೆ ಪಾಲಿನ ಹಂಚಿಕೆ, ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಅಂಕಿ ಅಂಶ ಸಮೇತ ಮಂಡಿಸಲು ಆರಂಭಿಸಿದರು. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದಾಗಲೆಲ್ಲ, ಪ್ರಶ್ನೆಗಳ ಸುರಿಮಳೆಯನ್ನೇ ಅವರ ಮುಂದೆ ಸುರಿಸಿ, ಉತ್ತರ ಕೊಡಿ ಮೋದಿಯವರೇ ಎಂದು ಅಭಿಯಾನವನ್ನೇ ಮಾಡಿದರು.

ಈ ಅಭಿಯಾನ ಆಂದೋಲನ ರೂಪಕ್ಕೆ ತಿರುಗಿತು. ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಅಲ್ಲೊಬ್ಬರು ಇಲ್ಲೊಬ್ಬರು ಟೀಕಿಸುತ್ತಿದ್ದರು. ಅಷ್ಟಕ್ಕೆ ಈ ಅಭಿಯಾನ ನಿಲ್ಲಿಸದ ಸಿದ್ದರಾಮಯ್ಯ ತಮ್ಮ ಸಚಿವರು ಶಾಸಕರ ದಂಡು ಕಟ್ಟಿಕೊಂಡು ದೆಹಲಿಗೆ ದಾಳಿ ಇಟ್ಟರು. ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಸಿದ್ದರಾಮಯ್ಯ ದೇಶವ್ಯಾಪಿ ಈ ಆಂದೋಲನ ಹಬ್ಬುವಂತೆ ಮಾಡಿದರು. ಮುಖ್ಯಮಂತ್ರಿಯೊಬ್ಬರು ಅನುದಾನಕ್ಕಾಗಿ ದೆಹಲಿಯಲ್ಲಿ ಚಳವಳಿ ನಡೆಸಿದ್ದು ಇದೇ ಮೊದಲು. ಈ ಹಾದಿಯನ್ನು ಮಮತಾ ಬ್ಯಾನರ್ಜಿ ಹಾಗೂ ಸ್ಟಾಲಿನ್‌ ಕೂಡ ಹಿಡಿದರು. ಸಿದ್ದರಾಮಯ್ಯ ಶುರು ಮಾಡಿದ ನರೇಟಿವ್ ದೇಶದಲ್ಲೇ ಚಳವಳಿಗೆ ಕಾರಣವಾಯಿತು. ಅದೂ ಸಾಲದೆಂಬಂತೆ, ವಿಧಾನಮಂಡಲ ಅಧಿವೇಶನದಲ್ಲೂ ಈ ರೀತಿಯ ನಿರ್ಣಯ ಕೈಗೊಂಡು, ದೇಶಕ್ಕೆ ಸಂದೇಶ ರವಾನಿಸಿದರು.

ಜನಪರ ಕಾಳಜಿಯ ಆಡಳಿತ, ಹೊಸ ನರೇಟಿವ್ ಕಟ್ಟಿಕೊಡುವಲ್ಲಿನ ನಾಯಕತ್ವ, ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆಯು ಸಿದ್ದರಾಮಯ್ಯನವರ ವೈಶಿಷ್ಟ್ಯ. ದೇವರಾಜ ಅರಸು ಅವರು ಅಹಿಂದ ಪರ ಧ್ವನಿ ಎತ್ತಿ, ಸಾಮಾಜಿಕ ನ್ಯಾಯವನ್ನು ಕಲ್ಪಿಸುವಲ್ಲಿ ಮೊದಲ ಹೆಜ್ಜೆ ಇಟ್ಟಿದ್ದರು. ಅದನ್ನೂ ಉಳಿಸಿಕೊಂಡು, ದೇಶಕ್ಕೆ ನಾಯಕತ್ವ ನೀಡುವ ನಿಟ್ಟಿನಲ್ಲಿ ನರೇಟಿವ್‌ಗಳನ್ನು ಸೃಷ್ಟಿಸುತ್ತಿರುವ ಸಿದ್ದರಾಮಯ್ಯ ಉಜ್ವಲ ಹಾದಿಯಲ್ಲಿ ಸಾಗುತ್ತಿದ್ದಾರೆ. ಸಿದ್ದರಾಮಯ್ಯನವರು ಕರ್ನಾಟಕ ಕಂಡ ಧೀರೋದಾತ್ತ, ಹೆಮ್ಮೆಯ ನಾಯಕ, ಕನ್ನಡ ಕಟ್ಟಾಳು ಎನ್ನಲು ಇನ್ನೇನು ಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments