ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, “ನಾವು ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಸಂಗ್ರಹಣೆ ಮಾಡಲು ಮುಂದಾಗಿದ್ದೇವೆ. ನಿರಂತರವಾಗಿ ಎರಡು ಮೂರು ದಿನ ಚರ್ಚೆ ನಡೆಸಿ ಪಕ್ಷವು ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ” ಎಂದರು.
ಅಭ್ಯರ್ಥಿ ಯಾರಾಗುತ್ತಾರೆ ಎಂದು ಕೇಳಿದಾಗ, “ನಾಮಪತ್ರ ಸಲ್ಲಿಕೆಗೆ ಇನ್ನು 25ನೇ ತಾರೀಕಿನವರೆಗೂ ಸಮಯವಿದೆ. ಗೊತ್ತಾಗುತ್ತದೆ ಸ್ವಲ್ಪ ಕಾಯಿರಿ. ನನಗೆ ಜನ ವಿಶ್ರಾಂತಿ ನೀಡಿದ್ದು, ನಾನು ವಿಶ್ರಾಂತಿಯಲ್ಲಿದ್ದೇನೆ” ಎಂದು ತಿಳಿಸಿದರು.
ಪಕ್ಷ ಒತ್ತಾಯ ಮಾಡಿದರೆ ಏನು ಮಾಡುತ್ತೀರಿ ಎಂದು ಕೇಳಿದಾಗ, “ನನ್ನ ಆಚಾರ, ವಿಚಾರ, ಅಭಿಪ್ರಾಯವನ್ನು ನಾನು ಪಕ್ಷಕ್ಕೆ ತಿಳಿಸಿದ್ದೇನೆ” ಎಂದರು.
ಅಚ್ಚರಿ ಅಭ್ಯರ್ಥಿ ಮೈತ್ರಿಕೂಟದಿಂದ ಬಂದ ಬಂಡಾಯ ಅಭ್ಯರ್ಥಿಯಾಗಿರಬಹುದೇ ಎಂದು ಪರೋಕ್ಷವಾಗಿ ಸಿ ಪಿ ಯೋಗೇಶ್ವರ್ ಬಗ್ಗೆ ಕೇಳಿದಾಗ, “ಅವರಿಗೂ ನಮಗೂ ಸಂಬಂಧವಿಲ್ಲ. ಮೈತ್ರಿಕೂಟದಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ, ಯಾರು ಸಿಡಿದೇಳುತ್ತಾರೆ, ಅವರ ವಿಚಾರಗಳ ಬಗ್ಗೆ ನಾವು ಚರ್ಚೆ ಮಾಡುವುದಿಲ್ಲ. ನಾವು ನಮ್ಮ ಪಕ್ಷದ ಸಂಘಟನೆ, ನಮ್ಮ ಪಕ್ಷದ ಕಾರ್ಯಕ್ರಮ, ನಮ್ಮ ಕಾರ್ಯಕರ್ತರ ವಿಚಾರದ ಬಗ್ಗೆ ಮಾತ್ರ ಚರ್ಚೆ ಮಾಡುತ್ತೇವೆ. ಕಳೆದ ಮೂರು ತಿಂಗಳಿಂದ ಉಪಮುಖ್ಯಮಂತ್ರಿಗಳು, ನಮ್ಮ ಕಾರ್ಯಕರ್ತರು ಹಗಲು ರಾತ್ರಿ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಿ ಚನ್ನಪಟ್ಟಣಕ್ಕೆ ಹೊಸ ದಿಕ್ಕು ನೀಡಿದ್ದಾರೆ. ಅದಕ್ಕೆ ಪೂರಕವಾಗಿ ನಾವು ಚುನಾವಣೆ ಮಾಡುತ್ತೇವೆ” ಎಂದು ತಿಳಿಸಿದರು.
“ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಸಂಸ್ಥೆ 15ದಿನಗಳ ಹಿಂದೆಯೇ ಪ್ರಕರಣ ದಾಖಲಿಸಿಕೊಂಡಿದೆ. ಅವರು ಕಾನೂನು ಪ್ರಕಾರ ತಮ್ಮ ಕೆಲಸದ ಭಾಗವಾಗಿ ಮುಡಾ ಕಚೇರಿ ಹಾಗೂ ಸಂಬಂಧಪಟ್ಟವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಇದು ಪಾರದರ್ಶಕವಾದ ವಿಚಾರಣೆ. ಇ.ಡಿ ತನಿಖೆ ಮಾಡಬೇಕಾದರೆ ಕೆಲವು ಪ್ರಕ್ರಿಯೆ ಪಾಲಿಸಬೇಕು. ಇದು ಅವರ ಕಾರ್ಯವೈಖರಿ. ಇ.ಡಿ ಸಂಸ್ಥೆ ಏನೇ ಮಾಡಿದರೂ ಮುಡಾ ಪ್ರಕರಣದಲ್ಲಿ ಯಾವುದೇ ರೀತಿಯ ಹಣಕಾಸಿನ ವಹಿವಾಟು ನಡೆದಿಲ್ಲ. ನ್ಯಾಯಾಲಯದ ವಿಚಾರಣೆಯಲ್ಲೂ ಯಾವುದೇ ಹಂತದಲ್ಲಿ ಹಣಕಾಸಿನ ವಿಚಾರ ಚರ್ಚೆಯಾಗಿಲ್ಲ. ಇ.ಡಿ ಅವರು ವಿಚಾರಣೆ ಮಾಡುವಾಗ ಹಣಕಾಸಿನ ಬಗ್ಗೆ ತನಿಖೆ ಮಾಡಬೇಕಾಗುತ್ತದೆ. ಆಗ ಅವರಿಗೆ ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ಮನದಟ್ಟಾಗುತ್ತದೆ” ಎಂದರು.
ಹಣಕಾಸು ವ್ಯವಹಾರವಾಗಿಲ್ಲವಾದರೆ ಇ.ಡಿ ಪ್ರವೇಶ ಮಾಡಿದ್ದು ಹೇಗೆ ಎಂದು ಕೇಳಿದಾಗ, “ಲೋಕಾಯುಕ್ತ ತನಿಖೆಯಲ್ಲಿ ಸಂಶಯಾಸ್ಪದವಾಗಿ 120 ಬಿ ಸೆಕ್ಷನ್ ಹಾಕಲಾಗಿದೆ. ಇದರಿಂದ ಲೋಕಾಯುಕ್ತ ಪ್ರವೇಶವಾಗಿದೆ. ಈ ತನಿಖೆ ನಡೆದಾಗ ಸತ್ಯಾಂಶ ಹೊರಗೆ ಬರುತ್ತದೆ. ಇ.ಡಿ ಅವರು ವಿಚಾರಣೆ ಮಾಡಲು ಹಣಕಾಸಿನ ವ್ಯವಹಾರವಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಸರ್ಕಾರ ಆರೋಪಮುಕ್ತವಾಗಲಿದೆ” ಎಂದು ಹೇಳಿದರು.
ವಾಲ್ಮೀಕಿ ಹಗರಣ ಪ್ರಕರಣದಲ್ಲಿ ಸಿಎಂ, ಡಿಸಿಎಂ ಹೆಸರು ಹೇಳಲು ಇ.ಡಿ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ ಎಂಬ ನಾಗೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಇ.ಡಿ, ಆದಾಯ ತೆರಿಗೆ, ಸಿಬಿಐ ಕೇಂದ್ರ ಸರ್ಕಾರದ ಅಸ್ತ್ರವಾಗಿವೆ. ಇವುಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಲಾಗುತ್ತಿದೆ. ವಿರೋಧ ಪಕ್ಷಗಳ ಮೇಲೆ ಈ ಸಂಸ್ಥೆಗಳನ್ನು ಪ್ರಯೋಗಿಸುವುದು ಹೊಸತೇನಲ್ಲ. ಕಳೆದ 10 ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಈ ಅವಧಿಯಲ್ಲೂ ಮುಂದುವರಿಯುತ್ತಿದೆ. ಸರ್ಕಾರವನ್ನು ಅಸ್ಥಿರಗೊಳಿಸಲು, ನಾಯಕತ್ವಕ್ಕೆ ಧಕ್ಕೆ ತರಲು ಈ ಪ್ರಯತ್ನ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಬೆಂಗಳೂರನ್ನು ಮುಳುಗಿಸಿದೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಅವರು ಮಂತ್ರಿಯಾದ ಬಳಿಕ ಆ ರೀತಿ ಆಗಿದೆ” ಎಂದು ತಿರುಗೇಟು ಕೊಟ್ಟರು.
ಪ್ರಲ್ಹಾದ್ ಜೋಶಿ ಅವರು ಮುಕ್ತವಾಗಿ ಸತ್ಯಾಂಶ ತಿಳಿಸಲಿ
ಪ್ರಲ್ಹಾದ್ ಜೋಶಿ ಅವರ ಸೋದರ ಮತ್ತು ಸೋದರಿ ಜೆಡಿಎಸ್ ಅಭ್ಯರ್ಥಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿರುವ ಬಗ್ಗೆ ಕೇಳಿದಾಗ, “ಅದು ಅವರವರ ಪಕ್ಷದ ವಿಚಾರ. ಇಲ್ಲಿ ಜೋಶಿ ಅವರು ಉತ್ತರ ನೀಡಬೇಕು. ನಾನು ಹೇಗೆ ಉತ್ತರ ನೀಡಲು ಸಾಧ್ಯ? ಈ ಪ್ರಕರಣದಲ್ಲಿ ನಾವೇನಾದರೂ ಮಾತನಾಡಿದರೆ ನಾವೇ ಈ ಪ್ರಕರಣ ಮಾಡಿಸಿದ್ದೇವೆ ಎಂದು ನಮ್ಮ ಮೇಲೆ ಆರೋಪ ಮಾಡುತ್ತಾರೆ. ಅವರಿಗೆ ಸಂಬಂಧಿಸಿದ ವಿಚಾರವನ್ನು ಅವರ ಬಳಿಯೇ ಕೇಳಿ. ಅವರು ಎಲ್ಲಾ ವಿಚಾರದಲ್ಲೂ ಮಾತನಾಡುತ್ತಾರೆ. ಅದೇ ರೀತಿ ಈ ವಿಚಾರದಲ್ಲೂ ಮುಕ್ತವಾಗಿ ಮಾತನಾಡಿ ಜನರಿಗೆ ಸತ್ಯಾಂಶವನ್ನು ತಿಳಿಸಲಿ” ಎಂದು ಹೇಳಿದರು.