ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ರಾಮತೀರ್ಥ ಬೆಟ್ಟದಲ್ಲಿರುವ ಗುಹೆಯಿಂದ 40 ವರ್ಷದ ರಷ್ಯಾದ ಮಹಿಳೆ ಮತ್ತು ಆಕೆಯ ಇಬ್ಬರು ಚಿಕ್ಕ ಮಕ್ಕಳನ್ನು ರಕ್ಷಿಸಲಾಗಿದೆ. ಅಲ್ಲಿ ಅವರು ಸುಮಾರು ಎರಡು ವಾರಗಳಿಂದ ಏಕಾಂತದಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಮೋಹಿ ಎಂದು ಗುರುತಿಸಲ್ಪಟ್ಟ ಈ ಮಹಿಳೆ ತನ್ನ ಹೆಣ್ಣುಮಕ್ಕಳಾದ 6 ವರ್ಷದ ಪ್ರೇಯಾ ಮತ್ತು 4 ವರ್ಷದ ಅಮಾ ಜೊತೆ ದಟ್ಟವಾದ ಕಾಡುಗಳು ಮತ್ತು ಕಡಿದಾದ ಇಳಿಜಾರುಗಳಿಂದ ಆವೃತವಾದ ನೈಸರ್ಗಿಕ ಗುಹೆಯೊಳಗೆ ವಾಸವಾಗಿದ್ದರು. ರುದ್ರ ವಿಗ್ರಹದ ಬಳಿ ಕುಟುಂಬವು ತಾತ್ಕಾಲಿಕ ವಾಸಸ್ಥಳವನ್ನು ನಿರ್ಮಿಸಿಕೊಂಡಿತ್ತು. ಅಲ್ಲಿ ಮೋಹಿ ತನ್ನ ದಿನಗಳನ್ನು ಪ್ರಾರ್ಥನೆ ಮತ್ತು ಧ್ಯಾನದಲ್ಲಿ ಕಳೆದಿದ್ದಾಳೆಂದು ಹೇಳಲಾಗುತ್ತಿದೆ.
ಆಕೆ ಆಧ್ಯಾತ್ಮಿಕ ಶಾಂತಿಯನ್ನು ಬಯಸಿ ಆ ಗುಹೆಗೆ ತೆರಳಿದ್ದಾಗಿ ಹೇಳಿಕೊಂಡಿದ್ದಾರೆ. ಮಾಮೂಲಿನಂತೆ ಗಸ್ತು ತಿರುಗುತ್ತಿದ್ದಾಗ ಪೊಲೀಸರ ಕಣ್ಣಿಗೆ ಆ ದೂರದ ಬೆಟ್ಟದ ಗುಹೆಯ ಹೊರಗೆ ಬಟ್ಟೆ ಒಣಗಿ ಹಾಕಿದ್ದು ಕಾಣಿಸಿತ್ತು. ರೌಂಡ್ಸ್ ನಲ್ಲಿದ್ದ ಪೊಲೀಸರಿಗೆ ಗುಡ್ಡದ ಮೇಲಿನ ಲಿಂಗ ಪೂಜೆ ಮಾಡಿರುವುದು ಕಂಡಿದೆ. ಅನುಮಾನ ಬಂದು ಗುಹೆ ಒಳಗಡೆ ಹೋಗುತ್ತಿದ್ದಂತೆ ಬಟ್ಟೆ ಧರಿಸದ ಪುಟ್ಟ ಮಗು ಓಡಿ ಹೊರ ಬಂದಿದೆ.
ಪೊಲೀಸರನ್ನು ನೋಡಿ ಒಳಗೆ ಓಡಿ ಹೋದ ಪುಟ್ಟ ಮಗುವಿನ ಹಿಂದೆ ಹೋದಾಗ ಚಿಕ್ಕ ದೀಪವನ್ನಿಟ್ಟುಕೊಂಡು ತನ್ನ ದೊಡ್ಡ ಮಗುವಿಗೆ ಚಿತ್ರ ಬಿಡಿಸುವುದನ್ನು ಹೇಳಿಕೊಡುತ್ತಿದ್ದ ಮಹಿಳೆಯನ್ನು ಕಂಡು ಪೊಲೀಸರಿಗೆ ಅಚ್ಚರಿ ಆಗಿತ್ತು. ಆ ಗುಹೆ ಸಂಪೂರ್ಣವಾಗಿ ಕತ್ತಲಾಗಿದ್ದು ಗುಹೆಯ ಸುತ್ತ ಬೃಹತ್ ಗಾತ್ರದ ಸರ್ಪ ಗಳಿವೆ. ಆ ಪ್ರದೇಶದಲ್ಲಿ ಟ್ರೆಕ್ಕಿಂಗ್ ಕೂಡ ನಿಷೇಧಿಸಿ ಸುತ್ತಲೂ ಫೆನ್ಸಿಂಗ್ ಹಾಕಲಾಗಿದೆ. ಫೆನ್ಸಿಂಗ್ ಇದ್ದರೂ ಪಕ್ಕದ ಗುಡ್ಡದಿಂದ ಗುಹೆ ಒಳಗಡೆ ಹೋಗಿ ನೆಲೆಸಿದ್ದ ರಷ್ಯಾದ ಮಹಿಳೆ ಈ ಹಿಂದೆಯೂ ಬಹಳಷ್ಟು ಬಾರಿ ಈ ಗುಹೆಯಲ್ಲಿ ಬಂದು ನೆಲೆಸಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.
ಆ ಮಹಿಳೆ ವಾಸವಾಗಿದ್ದ ಗುಹೆ ಇರುವ ರಾಮತೀರ್ಥ ಬೆಟ್ಟವು ಜುಲೈ 2024ರಲ್ಲಿ ಭಾರೀ ಭೂಕುಸಿತವನ್ನು ಅನುಭವಿಸಿತ್ತು. ಅಲ್ಲಿ ವಿಷಪೂರಿತ ಹಾವುಗಳು ಸೇರಿದಂತೆ ಅಪಾಯಕಾರಿ ವನ್ಯಜೀವಿಗಳಿಗೆ ನೆಲೆಸಿವೆ. ಇದು ಅಪಾಯಕಾರಿ ಪ್ರದೇಶವಾಗಿದೆ. ಪೊಲೀಸರು ಮಹಿಳೆಗೆ ಸಲಹೆ ನೀಡಿ ಅಲ್ಲಿನ ಅಪಾಯಗಳ ಬಗ್ಗೆ ತಿಳಿಸಿದ ನಂತರ, ಆಕೆ ಹಾಗೂ ಇಬ್ಬರು ಮಕ್ಕಳನ್ನು ಯಶಸ್ವಿಯಾಗಿ ರಕ್ಷಿಸಿ ಬೆಟ್ಟದಿಂದ ಕೆಳಕ್ಕೆ ಕರೆದುಕೊಂಡು ಬರಲಾಗಿದೆ.
ಆಕೆಯ ಕೋರಿಕೆಯ ಮೇರೆಗೆ ಆ ಮಹಿಳೆಯನ್ನು ಕುಮಟಾ ತಾಲ್ಲೂಕಿನ ಬಂಕಿಕೋಡ್ಲಾ ಗ್ರಾಮದಲ್ಲಿರುವ 80 ವರ್ಷದ ಮಹಿಳಾ ಸನ್ಯಾಸಿ ಸ್ವಾಮಿ ಯೋಗರತ್ನ ಸರಸ್ವತಿ ನಡೆಸುತ್ತಿರುವ ಆಶ್ರಮಕ್ಕೆ ಸ್ಥಳಾಂತರಿಸಲಾಗಿದೆ.
ರಷ್ಯಾದಿಂದ 2016ರಲ್ಲಿ ಗೋವಾಕ್ಕೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆಂದು ಬಂದಿದ್ದ ಮೋಹಿಯನ್ನು 2017ರ ಬಳಿಕ ಕಂಪನಿಯರು ಕೆಲಸದಿಂದ ತೆಗೆದುಹಾಕಿದ್ದರು. ಹೀಗಾಗಿ, ಆಕೆ ಗೋವಾದಿಂದ ನೇಪಾಳಕ್ಕೆ ತೆರಳಿ ಅಲ್ಲಿ ಕೆಲವು ದಿನ ವಾಸವಾಗಿದ್ದರು. ಮತ್ತೆ ಗೋವಾಕ್ಕೆ ಬಂದು ಅಲ್ಲಿಂದ ಆಗಾಗ ಗೋಕರ್ಣಕ್ಕೆ ಬಂದು ಈ ಗುಹೆಯಲ್ಲಿ ನೆಲೆಸುತ್ತಿದ್ದಳು.
ಸಂಪೂರ್ಣವಾಗಿ ಆಧ್ಯಾತ್ಮಿಕತೆಯತ್ತ ವಾಲಿರುವ ಮಹಿಳೆ ಏಕಾಂತ ಹಾಗೂ ಪೂಜೆಯನ್ನು ಹೆಚ್ಚು ಇಷ್ಟ ಪಡುತ್ತಿರುವುದಾಗಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ. ಭಾರತ, ಭಾರತೀಯ ಸಂಸ್ಕೃತಿಯ ಬಗ್ಗೆ ನನಗೆ ಭಾರಿ ಗೌರವ ಇದೆ, ನಾನು ಋಷಿ ಮುನಿಗಳ ತರ ಗುಹೆಯಲ್ಲಿ ಇರಲು ಖುಷಿ ಇದೆ ಅಂತ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾಳೆ.
ಮಹಿಳೆ ದಿನಸಿ ವಸ್ತುಗಳನ್ನು ಖರೀದಿಸಲು ಪಟ್ಟಣಕ್ಕೆ ಭೇಟಿ ನೀಡುವಾಗ ತನ್ನ ಫೋನ್ ಅನ್ನು ಚಾರ್ಜ್ ಮಾಡುತ್ತಿದ್ದಳು ಮತ್ತು ಅದನ್ನು ವಿರಳವಾಗಿ ಬಳಸುತ್ತಿದ್ದಳು ಎಂದು ತಿಳಿದುಬಂದಿದೆ. ಇನ್ನು ಈಕೆಗೆ ಯಾವಾಗ ಮಕ್ಕಳಾದವು? ಈಕೆಯ ಗಂಡನಾರು? ಗುಹೆಯಲ್ಲಿ ಯಾವಾಗಿನಿಂದ ವಾಸಿಸುತ್ತಿದ್ದರು? ಅಸಲಿಗೆ ಈ ಗುಹೆಗೆ ಪ್ರವೇಶಿಸುತ್ತಿದ್ದುದಾದರೂ ಹೇಗೆ? ದಟ್ಟ ಕಾನನದಲ್ಲಿ ವಿಷ ಜಂತುಗಳ ಭಯವಿಲ್ಲದೇ; ಹೊರಗಿತನ ಜಗತ್ತಿನ ಪರಿವೆಯೇ ಇಲ್ಲದೇ ಬದುಕುತ್ತಿದ್ದುದಾದರೂ ಹೇಗೆ? ವೀಸಾ ಅವಧಿ ಮುಗಿದಿದ್ದರೂ ಭಾರತದಲ್ಲಿ ಉಳಿದುಕೊಂಡಿದ್ದಾದರೂ ಹೇಗೆ ಮತ್ತು ಏಕೆ? ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲ.