Homeಕರ್ನಾಟಕವಿಧಾನಸಭೆ ಅಥವಾ ವಿಧಾನ ಪರಿಷತ್ತಿನಲ್ಲಿ ಗುತ್ತಿಗೆದಾರರಿಗೆ ಒಂದು ಕೋಟಾ: ಡಿ ಕೆ ಶಿವಕುಮಾರ್

ವಿಧಾನಸಭೆ ಅಥವಾ ವಿಧಾನ ಪರಿಷತ್ತಿನಲ್ಲಿ ಗುತ್ತಿಗೆದಾರರಿಗೆ ಒಂದು ಕೋಟಾ: ಡಿ ಕೆ ಶಿವಕುಮಾರ್

– ಸಧ್ಯದಲ್ಲೇ ಸಿಎಂ ಜತೆ ಗುತ್ತಿಗೆದಾರರ ಸಭೆ ಏರ್ಪಾಡು
– ಬಿಜೆಪಿ ಸರಕಾರದ ಬಿಲ್ ಗೆ ನಮ್ಮ ಎದೆ ಮೇಲೆ ಕೂತಿದ್ದೀರಿ

ನಾನು ಹಾಗೂ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸೇರಿ ಈ ಅಧಿವೇಶನದ ವೇಳೆ ಮುಖ್ಯಮಂತ್ರಿಗಳ ಜೊತೆ ಗುತ್ತಿಗೆದಾರರ ಸಭೆ ಮಾಡಿಸುತ್ತೇವೆ. ನಿಮ್ಮ ಸಮಸ್ಯೆ ಬಗೆಹರಿಸಲು ನಾವೆಲ್ಲ ಸೇರಿ ಪರಿಹಾರ ಕಂಡುಕೊಳ್ಳಬೇಕು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾ ನಿರತರಾಗಿದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದವರನ್ನು ಉದ್ದೇಶಿಸಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ಮಾತನಾಡಿದರು.

“ಗುತ್ತಿಗೆದಾರರು ತಮ್ಮ ಬದುಕಿಗೆ ಮಾತ್ರವಲ್ಲ ರಾಜ್ಯದ ಬದುಕಿಗೆ ಸಹಾಯ ಮಾಡುತ್ತಿದ್ದೀರಿ. ನಮ್ಮ ಸರ್ಕಾರ ತಂದಿದ್ದೀರಿ ಎಂಬ ಅರಿವು ನಮಗಿದೆ. ನಿಮಗೆ ಹಣ ಪಾವತಿ ಮಾಡಬಾರದು ಎಂಬುದು ನಮ್ಮ ಉದ್ದೇಶವಲ್ಲ. ನಿಮ್ಮ ಅಧ್ಯಕ್ಷರಾದ ಮಂಜುನಾಥ್ ಅವರ ನ್ಯಾಯ ನಾನು ನೋಡುತ್ತಲೇ ಇದ್ದೇನೆ, ಮೂರು ತಿಂಗಳಿಗೊಮ್ಮೆ ಮಾಧ್ಯಮಗಳಿಗೆ ಒಂದೊಂದು ಹೇಳಿಕೆ ನೀಡುತ್ತಲೇ ಇರುತ್ತಾರೆ. ಅವರನ್ನು ನೋಡಿದರೆ ನೀವು ಅವರಿಗೆ ವಿಧಾನಸಭೆ ಅಥವಾ ವಿಧಾನ ಪರಿಷತ್ತಿನಲ್ಲಿ ಒಂದು ಜಾಗ ಕೊಡಿಸಬೇಕು. ವಿಧಾನ ಪರಿಷತ್ತಿನಲ್ಲಿ ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರ, ಸಿನಿಮಾ, ಕಲೆ ಸೇರಿದಂತೆ ಇತರೆ ವಲಯದವರಿಗೆ ಒಂದು ಪ್ರಾತಿನಿಧ್ಯ ನೀಡಿದಂತೆ ಗುತ್ತಿಗೆದಾರರಿಗೆ ಒಂದು ಜಾಗ ಕೊಡಿಸಬೇಕಿದೆ. ಆಗ ನಿಮ್ಮ ಸಮಸ್ಯೆ ಬಗೆಹರಿಯಬಹುದು. ಇದಕ್ಕೆ ಒಂದು ದಾರಿ ಹುಡುಕಬೇಕಿದೆ” ಎಂದು ತಿಳಿಸಿದರು.

“ನನ್ನ ಇಲಾಖೆಯಲ್ಲಿ 13 ಸಾವಿರ ಕೋಟಿ, ಬೋಸರಾಜು ಅವರ ಇಲಾಖೆಯಲ್ಲಿ 3 ಸಾವಿರ ಕೋಟಿ, ಸೇರಿದಂತೆ ಸುಮಾರು 37 ಸಾವಿರ ಕೋಟಿ ಬಿಲ್ ಬಾಕಿ ಇದೆ. ನಿಮ್ಮ ನೋವು ನಮಗೆ ಗೊತ್ತಿದೆ. ನಾನು ಚುನಾವಣೆಗೂ ಆರು ತಿಂಗಳು ಮುಂಚಿತವಾಗಿ ಹೇಳಿದ್ದೆ. ಇಲಾಖೆಗಳಲ್ಲಿ ಹಣವಿಲ್ಲದೆ ಯಾವುದೇ ಗುತ್ತಿಗೆ ಕಾಮಗಾರಿ ತಗೆದುಕೊಳ್ಳಬೇಡಿ ಎಂದು ಎಚ್ಚರಿಸಿದ್ದೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಹಣ ಇರಲಿ, ಬಿಡಲಿ, ಕಾಮಗಾರಿ ಕೊಟ್ಟಿದ್ದೇ ಕೊಟ್ಟದ್ದು. ನೀವು ಕೆಲಸ ತೆಗೆದುಕೊಂಡು ನಮ್ಮ ಎದೆ ಮೇಲೆ ಕೂತಿದ್ದೀರಿ. ಇದಕ್ಕೆ ಒಂದು ರೂಪ ನೀಡಬೇಕಿದೆ. ಇದಕ್ಕೆ ಸುಮಾರು 50 ಸಾವಿರ ಕೋಟಿಯಷ್ಟು ಬಾಂಡ್ ಅಥವಾ ಇತರೆ ಮಾರ್ಗ ಹುಡುಕಬೇಕು. ಆಗ ಮಾತ್ರ ಈ ಸಮಸ್ಯೆ ಬಗೆಹರಿಯಲಿದೆ” ಎಂದರು.

“ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ನೆರವು ನೀಡಲು ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ನೀಡಿದ್ದು, ಇದಕ್ಕಾಗಿ ಸುಮಾರು 52 ಸಾವಿರ ಕೋಟಿ ವಾರ್ಷಿಕವಾಗಿ ವೆಚ್ಟ ಮಾಡಲಾಗುತ್ತಿದೆ. ಆದರೂ ನಮ್ಮ ರಾಜ್ಯದಲ್ಲಿ ಉತ್ತಮ ಬಜೆಟ್ ನೀಡುತ್ತಿದ್ದೇವೆ. ಇವತ್ತು ಕೂಡ ಮುಖ್ಯಮಂತ್ರಿಗಳು ಸರಿದೂಗಿಸಿ ಬಜೆಟ್ ಮಂಡಿಸಿದ್ದಾರೆ. ಬಿಜೆಪಿಯವರು ನಿನ್ನೆಯೇ ಖಾಲಿ ಚೊಂಬು ತೆಗೆದುಕೊಂಡಿದ್ದಾರೆ. ಕೇಂದ್ರ ಬಜೆಟ್ ನಲ್ಲಿ ನಿರ್ಮಲ ಸೀತರಾಮನ್ ಅವರು ಏನು ಕೊಟ್ಟರು? ಖಾಲಿ ಬಿಂದಿಗೆ ಕೊಟ್ಟರು. ಆಗ ಇವರು ಏನೂ ಮಾತನಾಡಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ 5300 ಕೋಟಿ ಘೋಷಣೆ ಮಾಡಿ ಈಗ ಕೊಟ್ಟಿದ್ದಾರಾ?” ಎಂದು ಪ್ರಶ್ನಿಸಿದರು.

“ಬೆಂಗಳೂರು ಅಭಿವೃದ್ಧಿಗೆ ಅವರು ಹಣ ಕೊಟ್ಟಿಲ್ಲ. ಅವರು ಮಾಡಲಿ ಬಿಡಲಿ, ನಮ್ಮ ಕರ್ತವ್ಯ ನಾವು ಮಾಡಬೇಕು. ನೀವು ನಮ್ಮನ್ನು ಬಿಡಂಗಿಲ್ಲ, ನಾವು ನಿಮ್ಮನ್ನು ಬಿಡಂಗಿಲ್ಲ. ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದನ್ನು ಬಿಡಿ. ನೀವು ಹೇಳಿಕೆ ನೀಡಿದರೆ ಅದು ಒಂದು ದಿನದ ಸುದ್ದಿಯಾಗಬಹುದು, ಬೇರೆ ಯಾವುದೇ ಪ್ರಯೋಜನವಿಲ್ಲ. ನೀವು ನಮ್ಮ ಬಳಿ ಬಂದು ಚರ್ಚೆ ಮಾಡಿ, ಯಾವ ರೀತಿ ಹಣ ಹೊಂದಿಸಿ ಸಮಸ್ಯೆ ಬಗೆಹರಿಸಬೇಕು ನೋಡೋಣ. ನಿಮ್ಮ ಜತೆ ನಾವಿದ್ದೇವೆ ಎಂದು ಹೇಳಲು ನಾನು, ಸತೀಶ್ ಜಾರಕಿಹೊಳಿ ಹಾಗೂ ಬೋಸರಾಜು ಅವರು ಬಂದಿದ್ದೇವೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments