ದೇವರಾಜ ಅರಸು ಅವರನ್ನು ‘ಸಾಮಾಜಿಕ ನ್ಯಾಯದ ಹರಿಕಾರ’ ಎಂದು ಕರೆಯಲಾಗುತ್ತದೆ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾದ ಅರಸು, ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹೋರಾಡಿದ ನಾಯಕರಾಗಿ ಸ್ಮರಿಸಲ್ಪಡುತ್ತಾರೆ. ಇಂದು ಅವರ 110ನೇ ಜನ್ಮದಿನ.
“ಭೂ ಸುಧಾರಣೆ. ಜೀತ ಪದ್ಧತಿ ನಿರ್ಮೂಲನೆ, ಋಣ ಪರಿಹಾರ ಕಾಯಿದೆ. ಕನಿಷ್ಠ ಕೂಲಿ ನಿಗದಿ, ಹಿಂದುಳಿದ ಜಾತಿಗಳಿಗೆ ಮೀಸಲು- ಹೀಗೆ ನಾನಾ ರೀತಿಯ ಸಕಾರಣಗಳಿಗೆ ದೇವರಾಜ ಅರಸು ಹೆಸರು ಇಂದಿಗೂ ಹಸಿರು. ಕರ್ನಾಟಕದ ನೆಲದಲ್ಲಿ ಬಹುದೊಡ್ಡ ಸಾಮಾಜಿಕ ಸುಧಾರಣೆ ಮಾಡಿ, ಸಾಮಾಜಿಕ ನ್ಯಾಯ ಎಂಬ ಪರಿಪಾಲನೆ ಯೋಗ್ಯ ಆಶಯವನ್ನ ಚಾಲನೆಗೆ ತಂದ ನೈಜ ಹಾಗೂ ಜನಪರ ಮುಖ್ಯಮಂತ್ರಿ ಎಂದರೆ ಅರಸು ಹೆಸರನ್ನು ಹೇಳಲೇಬೇಕು.”
ಹೀಗೆಂದು ಪತ್ರಕರ್ತರೊಬ್ಬರು ದೇವರಾಜ ಅರಸು ಅವರನ್ನು ಇತ್ತೀಚೆಗೆ ನೆನಪಿಸಿಕೊಂಡಿದ್ದರು. ಹೌದು, ದೇವರಾಜ ಅರಸು ರಾಜಕೀಯ ನಭೋಮಂಡಲದಲ್ಲಿ ಒಂದು ಧ್ರುವತಾರೆ. ರಾಜಕೀಯ, ಆರ್ಥಿಕ, ಸಾಮಾಜಿಕ ಸುಧಾರಣೆಯ ಹರಿಕಾರರಾಗಿದ್ದವರು. ಎಂಟು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಹಲವು ದಿಟ್ಟ ಹೆಜ್ಜೆಗಳನ್ನಿಟ್ಟು ದೇಶದ ಗಮನ ಸೆಳೆದಿದ್ದ ಬಹು ಎತ್ತರದ ರಾಜಕಾರಣಿ.
ಸ್ವಾತಂತ್ರೋತ್ತರ ಭಾರತದ ಇತರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಹೋಲಿಸಿದಾಗಲೂ ಕೂಡ ದೇವರಾಜ ಅರಸು ಪ್ರಥಮ ಸ್ಥಾನದಲ್ಲಿ ನಿಲ್ಲುತ್ತಾರೆ. ಹಲವು ವರ್ಷಗಳ ಹಿಂದೆ ಭಾರತದ ಪ್ರಮುಖ ವಾರಪತ್ರಿಕೆಯಾದ ‘ಎಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ’ಯಲ್ಲಿ ಒಬ್ಬ ಪ್ರಸಿದ್ದ ಸಮಾಜ ಶಾಸ್ತ್ರಜ್ಞರು ಭಾರತದ ಮುಖ್ಯಮಂತ್ರಿಗಳ ತುಲನಾತ್ಮಕ ಅಧ್ಯಯನ ನಡೆಸಿ ಬರೆದ ದೀರ್ಘವಾದ ಸಂಶೋಧನಾ ಪ್ರಬಂಧದಲ್ಲಿ ಈ ಮಾತನ್ನು ಆಧಾರಸಹಿತ ಉಲ್ಲೇಖಿಸಿದ್ದಾರೆ. ಇದನ್ನು ಖ್ಯಾತ ಲೇಖಕ, ಅರ್ಥಶಾಸ್ತ್ರಜ್ಞ ದಿವಂಗತ ಡಾ.ನಿ. ಮುರಾರಿ ಬಲ್ಲಾಳ್ ಆಗಾಗ ಹೇಳುತ್ತಲೇ ಇದ್ದರು.
ವಿಭಿನ್ನ ರಾಜಕಾರಣಿ
ದೇವರಾಜ ಅರಸು ಮುಖ್ಯಮಂತ್ರಿಯಾದ ಹೊಸತು. ಅವರ ಹುಟ್ಟೂರಾದ ಮೆಸೂರು ಜಿಲ್ಲೆ ಹುಣಸೂರು ತಾಲೂಕು ಕಲ್ಲಹಳ್ಳಿಯ ಜನ, ನಾಡಿನ ಸಿಎಂ ಆದ ಊರ ಮಗನನ್ನು ಅಭಿಮಾನದಿಂದ ಸನ್ಮಾನಿಸಿದರು. ಬಳಿಕ, ತವರಿಗೆ ರಸ್ತೆ, ಆಸ್ಪತ್ರೆ, ಶಾಲೆ ಸೇರಿದಂತೆ ಒಂದಿಷ್ಟು ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಮನವಿ ಕೂಡ ಮಾಡಿದರು. ಇದಕ್ಕೆ ಅರಸು ನೀಡಿದ ಉತ್ತರ ಏನು ಗೊತ್ತೇ?: ನಾನು ಕೇವಲ ಕಲ್ಲಹಳ್ಳಿಯ ಅರಸನಲ್ಲ. ಕರ್ನಾಟಕದ ಆರಸು. ಈ ರಾಜ್ಯದ ಎಲ್ಲ ಹಳ್ಳಿಗಳು ನನ್ನವೆ. ಎಲ್ಲ ಸಮುದಾಯದ ಜನರೂ ನನ್ನವರೇ ಎಂದು! ಇದೊಂದು ಘಟನೆ ಸಾಕು ಅರಸು ವಿಭಿನ್ನ ರಾಜಕಾರಣಿ ಎಂದು ತಿಳಿಸಲು.
ಅರಸು ಜೋಕರ್!
ಯಾವುದೋ ಹಿಂದುಳಿದ ಜಾತಿಯವರ ಸಭೆ ನಡೆದಿತ್ತು. ಅರಸು ಅಲ್ಲಿ ಭಾಷಣ ಮಾಡಿದ್ದು ಹೀಗೆ; “ಮೈಸೂರು ರಾಜ್ಯದಲ್ಲಿ ನಾನು ಜೋಕರ್ ಇದ್ದಹಾಗೆ. ಇಸ್ಪೀಟ್ ಆಟದಲ್ಲಿ ಜೋಕರ್‌ಗಳನ್ನು ಎಲ್ಲಿ ಬೇಕಾದರೂ ಜೋಡಿಸಿಕೊಳ್ಳಬಹುದು. ರಾಜಕೀಯದಲ್ಲಿ ಯಾವ ಕೆಳಜಾತಿಗೆ ಪ್ರಾತಿನಿಧ್ಯ ಇಲ್ಲವೋ ಅವರ ಪ್ರತಿನಿಧಿ, ಸೇವಕ. ಮುಖಂಡ ಎಲ್ಲ ನಾನೇ. ನನಗೆ ಜಾತಿ ಇಲ್ಲ” ಎಂದು. ಈ ಮಾತಲ್ಲಿ ಸ್ವಘೋಷಿತ ನಾಯಕನ ಗತ್ತಿನ ದನಿ ಇದೆ ಎಂದು ಅನಿಸಬಹುದು. ಆದರೆ ಕರ್ನಾಟಕದಲ್ಲಿ ಭೂಮಿ. ಶಿಕ್ಷಣ, ನೌಕರಿ ಹಾಗೂ ರಾಜಕಾರಣದಲ್ಲಿ ಬಲವಾದ ಹಿಡಿತ ಪಡೆದ ಬ್ರಾಹ್ಮಣರು, ಲಿಂಗಾಯಿತರು, ಒಕ್ಕಲಿಗರು ಕ್ರಿಯಾಶೀಲರಾಗಿದ್ದಾಗ ಕೆಳಜಾತಿಗಳ ಪರವಾಗಿ ಅರಸು ಮಾಡಿದ ರಾಜಕಾರಣಕ್ಕೆ ಚಾರಿತ್ರಿಕ ಮಹತ್ವವಿದೆ ಎನ್ನುತ್ತಾರೆ ಖ್ಯಾತ ಲೇಖಕ ರಹಮತ್ ತರೀಕೆರೆ.
ಸಾಮಾಜಿಕ ಆರ್ಥಿಕ ಶೋಷಣೆಯನ್ನು ಕೊನೆಗೊಳಿಸಿ. ರಾಜಕೀಯ ಸಮಾಜ ಸುಧಾರಣೆಯನ್ನು ಸಾಧಿಸಲು ಅಧಿಕಾರವನ್ನು ಹೊಂದಿ ಸರಕಾರದ ಸಂಪನ್ಮೂಲಗಳನ್ನು ಉಪಯೋಗಿಸುವುದು ಉಚಿತ ಎಂದು ದೇವರಾಜ ಅರಸು ನಂಬಿದ್ದರು. ಆದ್ದರಿಂದ ಬಲಹೀನರಾದ ಅಲ್ಪಸಂಖ್ಯಾತ ಹರಿಜನ ಮತ್ತು ಮುಸ್ಲಿಮರರನ್ನು ಒಂದುಗೂಡಿಸಿ ಅರಸರು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಮುಂದಾಗಿದ್ದರು. ಈ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಏಳಿಗೆಗಾಗಿ ಅವರು ಯಾವ ಪ್ರಯತ್ನವನ್ನೂ ಕೈ ಬಿಡಲಿಲ್ಲ. ಅತ್ಯಂತ ಸಣ್ಣ ಜಾತಿಯವರಲ್ಲಿಯೂ ರಾಜಕೀಯ ಪ್ರಜ್ಞೆ ಮೂಡಿಸಿದ ಅರಸು, ರಾಜ್ಯದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿದರು.
ಹಾಡುಗಾರ ಅರಸು!
ಅರಸು ಅವರಿಗೆ ಒಳ್ಳೆಯ ಕಂಠವಿತ್ತು. ಡಿವಿಜಿಯವರ ‘ಮಂಕುತಿಮ್ಮನ ಕಗ್ಗ’ ಮತ್ತು ‘ಅಂತಃಪುರ ಗೀತೆ’ಗಳನ್ನು ಮಧುರವಾಗಿ ಹಾಡುತ್ತಿದ್ದರು. ಕಾಲೇಜು ದಿನಗಳಲ್ಲಿಯೇ ‘ಹರಿಶ್ಚಂದ್ರ ಕಾವ್ಯ’ದ ಕೆಲ ಪದ್ಯಗಳ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಪಡೆದಿದ್ದರು. ಪುರಂದರದಾಸ, ಕನಕದಾಸರ ಕೀರ್ತನೆಗಳನ್ನು ಸೊಗಸಾಗಿ ಹಾಡುತ್ತಿದ್ದರು. ಸೈಗಲೇ, ಪಂಕಜ್ ಮಲ್ಲಿಕ್, ಕೆಸಿಡೇ, ಕಾನನ್ ಬಾಲ, ಶಾಂತಾ ಆಪ್ಪೆ ಮುಂತಾದ ಆಗಿನ ಕಾಲದ ಸಿನಿಮಾದವರ ಹಾಡುಗಳನ್ನೂ ಚೆನ್ನಾಗಿ ಹಾಡುತ್ತಿದ್ದರು.
ಒಂಬತ್ತನೇ ತರಗತಿಯಲ್ಲಿರುವಾಗ ನಂಜನಗೂಡಿನ ಶ್ರೀಕಂಠಶಾಸ್ತ್ರಿಗಳ ನಿರ್ದೇಶನದ ನಾಟಕದಲ್ಲಿ ಪಾತ್ರವೊಂದನ್ನು ಮಾಡಿದ್ದರು. ಸಂಗೀತ ಪ್ರಧಾನವಾದ ಈ ನಾಟಕದಲ್ಲಿ ಹಾಡಬೇಕಾಗಿತ್ತು. ಅರಸು ಬಿಟ್ಟಾರೆಯೇ ಹಾಡಿ, ನಾಟಕವನ್ನ ಚಂದ ಕಾಣಿಸಿದ್ದರು.
ಹಾಡುಗಾರ ಅರಸು ಒಳ್ಳೆಯ ಕುಸ್ತಿಪಟು ಕೂಡ ಆಗಿದ್ದರು. ಆಗಿನ ಹೆಸರಾಂತ ವ್ಯಾಯಾಮ ಶಿಕ್ಷಕ ವಿ.ಡಿ.ಎಸ್. ನಾಯ್ಡು ಅರವ ಬಳಿ ದೈಹಿಕ ತರಬೇತಿ ಪಡೆದಿದ್ದರು. ಬಾಡಿ ಬ್ಯೂಟಿ ಕಾಂಪಿಟೇಷನ್‌ನಲ್ಲಿ ಭಾಗವಹಿಸಿ, ಅದರಲ್ಲಿಯೂ ಮೊದಲ ಬಹುಮಾನ ಪಡೆದಿದ್ದರು. ಅವರು ಮುಖ್ಯಮಂತ್ರಿಯಾಗಿದ್ದಾಗ ‘ಕಲ್ಲಹಳ್ಳಿಯ ಫೈಲ್ವಾನ್’ ಎಂದೇ ಕೆಲವು ಪತ್ರಿಕೆಗಳು ಬರೆಯುತ್ತಿದ್ದವು.
ಜಾತಿ ರಾಜಕಾರಣ
ಅರಸು ಜನಾಂಗದ ಜನಸಂಖ್ಯೆ ರಾಜ್ಯದಲ್ಲಿ ಕೇವಲ ಆರು ಸಾವಿರದಷ್ಟಿದ್ದರೂ ದೇವರಾಜ ಅರಸು ಮುಖ್ಯಮಂತ್ರಿಯಾದರು. 1972ರ ವಿಧಾನಸಭಾ ಚುನಾವಣೆಗೂ ಮೊದಲು 223 ಸದಸ್ಯರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಸುಮಾರು 150 ಮಂದಿ ಲಿಂಗಾಯಿತರು. ಒಕ್ಕಲಿಗರು, ಬ್ರಾಹ್ಮಣರು ಇರುತ್ತಿದ್ದರು. ಉಳಿದ 73 ಸ್ಥಾನಗಳಲ್ಲಿ 23 ಸ್ಥಾನಗಳಿಗೆ ಪರಿಶಿಷ್ಟ ಜನಾಂಗದವರನ್ನು, ಆರೇಳು ಸ್ಥಾನಗಳಿಗೆ ಮತೀಯ ಅಲ್ಪಸಂಖ್ಯಾತರಾಗಿದ್ದ ಮುಸ್ಲಿಮರಿಗೆ ಉಳಿದ ಸ್ಥಾನಗಳನ್ನು ಸಣ್ಣಪುಟ್ಟ ಜಾತಿಯವರಿಗೆ ನೀಡಲಾಗುತ್ತಿತ್ತು.
ಆದರೆ 1972ರಲ್ಲಿ ಪ್ರಕಟವಾಗಿದ್ದ ಇಂದಿರಾ ಕಾಂಗ್ರೆಸ್‌ನ ಪಟ್ಟಿಯಲ್ಲಿ 133 ಮಂದಿ ಪರಿಶಿಷ್ಟರು. ಸಮಾಜಿಕ ದುರ್ಬಲರು ಮತ್ತು ಮತೀಯ ಅಲ್ಪಸಂಖ್ಯಾತರು ಇದ್ದರು. ಉಳಿದ 90 ಸ್ಥಾನಗಳಲ್ಲಿ ಲಿಂಗಾಯಿತರಿಗೆ, ಒಕ್ಕಲಿಗರಿಗೆ ಮತ್ತು ಬ್ರಾಹ್ಮಣರಿಗೆ ಹಂಚಲಾಗಿತ್ತು. ಚುನಾವಣೆಯಲ್ಲಿ ಮೊದಲ ಬಾರಿಗೆ ಹಿಂದುಳಿದವರ್ಗಗಳು ಮತ್ತು ಅಲ್ಪಸಂಖ್ಯಾತರ ಪ್ರಾತಿನಿಧ್ಯವನ್ನು ಶೇ.70ಕ್ಕಿಂತಲೂ ಹೆಚ್ಚು ಹೆಚ್ಚಿಸಿಕೊಂಡಿದ್ದ ಅರಸು. ಮಂತ್ರಿಮಂಡಲದಲ್ಲಿಯೂ ಎಲ್ಲರಿಗೂ ಅವಕಾಶ ನೀಡಿದ್ದರು. ಅವರ ಸಂಪುಟದಲ್ಲಿ ಇಬ್ಬರು ಮುಸ್ಲಿಮರು, ಮೂವರು ದಲಿತರು, ಮೀನುಗಾರ, ಲಂಬಾಣಿ, ಗಂಗಾಮತಸ್ಥ, ಬಂಟರು. ಕ್ರೈಸ್ತರು. ಮೊಗವೀರರು ಇದ್ದರು. ಹಾಗೆಯೇ ಒಕ್ಕಲಿಗರು ಮತ್ತು ಲಿಂಗಾಯಿತರಿಗೆ ಹೆಚ್ಚಿನ ಪ್ರತಿನಿಧ್ಯವಿದ್ದೇ ಇತ್ತು. ರಾಜ್ಯದ ಇತಿಹಾಸದಲ್ಲಿಯೇ ಮೊದಲಬಾರಿಗೆ ಅರಸು ಜಾತಿಮೂಲವಾದ ರಾಜಕೀಯ ಪ್ರಭುತ್ವವನ್ನು ಮುರಿದು ಹೊಸ ವ್ಯವಸ್ಥೆಗೆ ನಾಂದಿ ಹಾಡಿದ್ದರು.
ಮುಖ್ಯಮಂತ್ರಿಯಾಗಿ ಎಲ್ಲ ಹಿಂದುಳಿದ ಜಾತಿ ಮತ್ತು ವರ್ಗಗಳಿಂದ ಬಂದಿದ್ದ ವಿದ್ಯಾವಂತ ಯುವಕರನ್ನು ಗುರುತಿಸಿ ಅವರಿಗೆ ರಾಜಕೀಯದಲ್ಲಿ ಸೂಕ್ತ ಸ್ಥಾನಮಾನ ನೀಡಿ ಬೆಳೆಸಿದರು. ಅರಸು ಅವರಿಗೆ ಹಿಂದುಳಿದ ವರ್ಗಗಳ ಬಗ್ಗೆ ಅಪಾರವಾದ ನಂಬಿಕೆ ಮತ್ತು ವಿಶ್ವಾಸಗಳಿದ್ದವು. ಅವರು ನನ್ನ ಕೈ ಬಿಡುವುದಿಲ್ಲ ಎಂದೇ ನಂಬಿದ್ದರು. ಈ ಧೈರ್ಯದ ಮೇಲೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾದಾಗ ಅವರ ಸಚಿವ ಸಂಪುಟದಲ್ಲಿ ಮೊದಲಒಂಬತ್ತು ತಿಂಗಳ ಅವಧಿಯವರೆಗೆ ಬ್ರಾಹ್ಮಣರಿಗೆ ಪ್ರಾತಿನಿಧ್ಯವನ್ನೇ ನೀಡಿರಲಿಲ್ಲ. ಅದಕ್ಕೆ ಬದಲಾಗಿ ಆರು ಮಂದಿ ಹಿಂದುಳಿದ ವರ್ಗದ ವ್ಯಕ್ತಿಗಳೀಗೆ ಪ್ರಾಶಸ್ತ್ರ ನೀಡಿದ್ದರು.
“ದಲಿತರಿಗೆ ದನಿಯಾದದ್ದೇ ಅರಸು ಅವರ ಮಹಾಸಾಧನೆ. ಯಾವುದನ್ನು ಇಂದಿರಾಗಾಂಧಿ ಘೋಷಿಸಿದರೋ ಅದನ್ನು ಆಗಮಾಡಿದ್ದು ಅರಸರ ಪವಾಡ. ಇಂದಿಗೂ ಭಾರತದ ಬೇರೊಂದು ಭಾಗದಲ್ಲಿ ಕರ್ನಾಟಕದಲ್ಲಿ ನಡೆದಿರುವ ಈ ಕಾರ್ಯ ಈ ಪ್ರಮಾಣದಲ್ಲಿ ನಡೆದಿಲ್ಲ ಎಂಬುದನ್ನು ಗಮನಿಸಿದರೆ ಆರಸರು ಎಷ್ಟು ಮುಂದೆ ಹೋಗಿದ್ದರು ಎಂಬುದು ಗೊತ್ತಾಗುತ್ತದೆ. ಕರ್ನಾಟಕದಲ್ಲಿ ಲಿಂಗಾಯಿತರ ಮತ್ತು ಒಕ್ಕಲಿಗರ ಪ್ರಾಬಲ್ಯವನ್ನು ಮುರಿದು, ಅಲ್ಪಸಂಖ್ಯಾತರ ಆಳ್ವಿಕೆಯನ್ನು ತಂದದ್ದು ಸಾಹಸದ ಕಾರ್ಯ. ಇದರಲ್ಲಿ ಜಾತಿಯ ಅಭಿಯಾನಕ್ಕೆ ಅರಸರು ಗಾಳಿ ಹಾಕಿದ್ದು, ಮರೆತುಹೋದ ಜಾತಿಗಳನ್ನೆಲ್ಲ ನೆನಪಿಸಿಕೊಟ್ಟಿದ್ದು ಸುಳ್ಳಲ್ಲ. ಹಾಗೆ ಮಾಡದೆ ಅವರಿಗೆ ತಮ್ಮ ಉದ್ದೇಶಿತ ಗುರಿಯನ್ನು ಮುಟ್ಟುವುದು ಸಾಧ್ಯವಿರಲಿಲ್ಲ” ಎಂದಿದ್ದಾರೆ ಸಾಹಿತಿ, ಅಂಕಣಕಾರ ದಿವಂಗತ ಡಾ.ಹಾ.ಮಾ.ನಾಯಕ.
ಮಾತಿನ ಮೋಡಿಗಾರ
ಅರಸು ಅಪರೂಪದ ವಾಗ್ನಿಯಾಗಿದ್ದರು. ಹತ್ತಾರು ಜನರ ಸಣ್ಣ ಗುಂಪಿರಲಿ, ಸಾವಿರಾರು ಜನರು ಸೇರಿರುವ ಮಹಾಸಭೆಯಿರಲಿ ವಶೀಕರಿಸುವ ಕಲೆ ಅವರಿಗೆ ಚೆನ್ನಾಗಿ ಕರಗತವಾಗಿತ್ತು. ಗಂಟೆಗಟ್ಟಲೆ ಮಾತನಾಡುವ ಶಕ್ತಿಯೂ ಅವರಿಗಿತ್ತು. ವ್ಯಾಪಕವಾದ ಅಧ್ಯಯನ, ಅನುಭವ, ಪುರಾಣ ಪುಣ್ಯಕಥೆಗಳಿಂದ ಸಮಯೋಚಿತವಾಗಿ ಉದ್ಧರಿಸುವ ಜಾಣೆ ಸಮಯಪ್ರಜ್ಞೆ ಅವರ ಮಾತುಗಾರಿಕೆಗೆ ಹೆಚ್ಚಿನ ಬಣ್ಣ ನೀಡಿದ್ದವು. ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಕ್ತಾಯ ಭಾಷಣ ಮಾಡಿದ್ದರು. ಸಭಾಧ್ಯಕ್ಷತೆ ವಹಿಸಿದ್ದ ಮಾಸ್ತಿಯವರು ಈ ಭಾಷಣ ಕೇಳಿ ಹೇಳಿದ್ದೇನು ಗೊತ್ತೇ?; ಅರಸರ ಈ ಭಾಷಣ ಸಾಹಿತ್ಯ ಅಲ್ಲದಿದ್ದರೆ. ಇನ್ನು ಯಾವುದು ಸಾಹಿತ್ಯ?.
ವರಕವಿ ಬೇಂದ್ರೆಯವರಂತೂ; ” ಜವಾಬ್ದಾರಿಗೆ ತಲೆಕೊಟ್ಟು ನಿಂತಿರುವ ನಾಯಕಮಣಿ ಅರಸು ಅವರು ಅರ್ಥ ಸಂಶಯ ಬರದಂತೆ, ಗುರಿಗೆ ಗುಂಡು ಹೊಡೆದಂತೆ ಸ್ಪಷ್ಟ ನೇರ ಮಾತಿನವರು. ದಿಟ್ಟ ತನದ ಮಾತುಗಾರರು. ಕದ್ದು ಮುಚ್ಚಿ ಮಾತನಾಡುವ ಜನವಲ್ಲ” ಎಂದಿದ್ದರು. ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರು; “ಜನರನ್ನು ಮುಟ್ಟುವ ಗುಣ ಅರಸರ ಮಾತಿಗೆ ಸಿದ್ಧಿಸಿದೆ. ಆತುರ ವೇಗಗಳಿಲ್ಲದ ಗಂಭೀರ ಭಾಷಣಕಾರರು ಆರಸು” ಎಂದಿದ್ದರು.
ಅಧಿಕಾರದಲ್ಲಿದ್ದಾಗ ಅರಸು ಎದುರು ಪಕ್ಷದ ಸದಸ್ಯರ ಬಾಣಗಳಂಥ ಪ್ರಶ್ನೆಗಳನ್ನು ಬಾಣಗಳಂಥ ಉತ್ತರದಿಂದಲೇ. ಎದುರಿಸುತ್ತಿದ್ದರು. ಒಮ್ಮೆ ಪಡಿತರದಲ್ಲಿ ಸಿಕ್ಕುವ ಜೋಳ ಚೆನ್ನಾಗಿಲ್ಲ ಎಂದು ಪರಿಷತ್ತಿನಲ್ಲಿ ವಿಪಕ್ಷಗಳ ಸದಸ್ಯರು ಆರೋಪಿಸಿದ್ದರು. ಜೋಳವನ್ನು ತಂದು ಪ್ರದರ್ಶಿಸಿದರು ಕೂಡ. ಸಚಿವರಿಗೆ ಏನೆಂದು ಉತ್ತರ ಕೊಡುವುದು ಎಂದು ಗೊತ್ತಾಗಲಿಲ್ಲ. ಮುಖ್ಯಮಂತ್ರಿ ಅರಸು, ಜೋಳ ತರಿಸಿ ನೋಡಿದರು. “ಈ ಜೋಳಕ್ಕೇನಾಗಿದೆ? ಚೆನ್ನಾಗಿಯೇ ಇದೆಯಲ್ಲ. ಇದರಿಂದ ರೊಟ್ಟಿ ಮಾಡಿಸುತ್ತೇನೆ ನಮ್ಮ ಮನೇಲಿ, ನಾಳೆಯೇ ಊಟಕ್ಕೆ ಬನ್ನಿ” ಎಂದು ವಿಪಕ್ಷ ನಾಯಕ ರಾಮಕೃಷ್ಣ ಹೆಗಡೆಯವರಿಗೆ ಆಮಂತ್ರವಣವನ್ನು ನೀಡಿದರು. ಆಗ ಎಲ್ಲರೂ ಗೊಳ್ಳೆಂದು ನಕ್ಕರು. ವಿಷಯ ಅಲ್ಲಿಗೇ ಮುಗಿದಿತ್ತು.
1973ರ ಬಜೆಟ್ ಮೇಲೆ ಚರ್ಚೆ ನಡೆಯುತ್ತಿದ್ದಾಗ ವಿಪಕ್ಷ ನಾಯಕ ರಾಮಕೃಷ್ಣ ಹೆಗಡೆ, “ನಿರ್ಮಾಣ ಕಾರ್ಯಗಳಿಗಿಂತ ಹೆಚ್ಚು ಹಣ ಸಮಾಜಸೇವೆಯ ಸಂತರ್ಪಣೆಗೆ” ಹೋಗುತ್ತಿದ್ದೆಯೆಂದು ಹೇಳಿ ಸರಕಾರದ ಭ್ರಷ್ಟಾಚಾರದ ಬಗ್ಗೆ ಬೊಟ್ಟು ಮಾಡಿದ್ದರು. ಇದಕ್ಕೆ ಆಗಿನ ಹಣಕಾಸು ಸಚಿವ ಎಂ.ವೈ. ಘೋರ್ಪಡೆಯವರು ತಕ್ಕ ಉತ್ತರವನ್ನೇ ನೀಡಿದ್ದರು. ಆದರೂ ಅರಸು ಮಧ್ಯಪ್ರವೇಶ ಮಾಡಿ, ಆಗ ರಾಮಕೃಷ್ಣ ಹೆಗಡೆ ಕಟ್ಟಿಸುತ್ತಿದ್ದ 10 ಲಕ್ಷ ರೂಪಾಯಿಯ ಮನೆಯ ವಿಷಯವನ್ನು ಅವರೇ ಪ್ರಸ್ತಾಪ ಮಾಡಿ, ನ್ಯಾಯಾಂಗ ತನಿಖೆಗೆ ಒತ್ತಾಯಿಸುವಂತೆ ಮಾಡಿದ್ದರು! ಮಾರನೇ ದಿನ ಬಜೆಟ್ ವಿಷಯ. ಹೆಗಡೆಯವರ ಭ್ರಷ್ಟಾಚಾರದ ಆರೋಪಕ್ಕಿಂತ ಅವರ ಮನೆಯ ವಿಷಯವೇ ಪತ್ರಿಕೆಗಳಲ್ಲಿ ದೊಡ್ಡದಾಗಿತ್ತು!!