Homeಕರ್ನಾಟಕಸದ್ಯದಲ್ಲೇ ಬೆಂಗಳೂರಿಗೆ ಹೊಸ ರೂಪ: ಡಿಸಿಎಂ ಡಿ.ಕೆ. ಶಿವಕುಮಾರ್

ಸದ್ಯದಲ್ಲೇ ಬೆಂಗಳೂರಿಗೆ ಹೊಸ ರೂಪ: ಡಿಸಿಎಂ ಡಿ.ಕೆ. ಶಿವಕುಮಾರ್

ಕೆಲವೇ ದಿನಗಳಲ್ಲಿ ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ಬರಲಿದೆ. ನಂತರ ಸ್ವಚ್ಛತಾ ಅಭಿಯಾನದ ಮೂಲಕ ನಗರದಲ್ಲಿ ಕಸ ವಿಲೇವಾರಿ ಮಾಡಿ ಸ್ವಚ್ಛ ಬೆಂಗಳೂರು ನಿರ್ಮಿಸಲಾಗುವುದು. ಆ ಮೂಲಕ ಬೆಂಗಳೂರಿಗೆ ಹೊಸ ರೂಪ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 4 ಎಂಎಲ್ ಡಿ ಸಾಮರ್ಥ್ಯದ ಜಲಾಗಾರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಇಂದು ಶಂಕುಸ್ಥಾಪನೆ ಮಾಡಿರುವ ಯೋಜನೆ ಸುಮಾರು 30 ಸಾವಿರ ಮನೆಗಳು, 2.50 ಲಕ್ಷ ಜನರಿಗೆ ನೀರು ಪೂರೈಸಲಿದೆ. ಈ ಕ್ಷೇತ್ರದಲ್ಲಿ ರಸ್ತೆಗೆ 130 ಕೋಟಿ, ಮೇಲ್ಸೇತುವೆಗೆ 43 ಕೋಟಿ, 320 ಕೋಟಿ ಇತರೆ ವಾರ್ಡ್ ಅಭಿವೃದ್ಧಿಗೆ, 650 ಕೋಟಿ ವೆಚ್ಚದಲ್ಲಿ ಹೊಸ ಫ್ಲೈಓವರ್, ನಿಮ್ಮ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ನಿಮ್ಮ ಮನೆಬಾಗಿಲಿಗೆ ಉಚಿತವಾಗಿ ರವಾನಿಸಲಾಗುವುದು. ಇದನ್ನು ಸದ್ಯದಲ್ಲೇ ದೊಡ್ಡ ಆಂದೋಲನದ ರೀತಿಯಲ್ಲಿ ಮಾಡಲಾಗುವುದು. 50X80 ವಿಸ್ತೀರ್ಣದಲ್ಲಿ ಮನೆ ನಿರ್ಮಿಸಲು ಪ್ಲಾನ್ ಅನುಮತಿ ಪಡೆಯಲು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ನಂಬಿಕೆ ನಕ್ಷೆ ಯೋಜನೆ ಜಾರಿ ಮಾಡಲಾಗುವುದು” ಎಂದು ಹೇಳಿದರು.

“ಗ್ರೇಟರ್ ಬೆಂಗಳೂರು ಮೂಲಕ ಬೆಂಗಳೂರಿಗೆ ಹೊಸ ರೂಪ ನೀಡಲಾಗುತ್ತಿದೆ. ಎರಡು ಮೂರು ದಿನಗಳಲ್ಲಿ ಇದು ಚಾಲನೆಯಾಗಲಿದೆ. ಇದಾದ ತಕ್ಷಣ ಬೆಂಗಳೂರಿನಲ್ಲಿ ಸ್ವಚ್ಛತಾ ಅಭಿಯಾನ ಮಾಡಲಾಗುವುದು. ಪಾಲಿಕೆಯ ಸಹಾಯವಾಣಿ ನೀಡಿ ಬೆಂಗಳೂರಿನಲ್ಲಿ ಎಲ್ಲಿ ಕಸ ಇದೆ ಎಂದು ಸಾರ್ವಜನಿಕರು ಹೇಳಿದರೂ ಪಾಲಿಕೆ ವತಿಯಿಂದ ಅದನ್ನು ಸ್ವಚ್ಛಗೊಳಿಸಲಾಗುವುದು. ಆಮೂಲಕ ಸ್ವಚ್ಛ ಬೆಂಗಳೂರು ರೂಪಿಸಲಾಗುವುದು” ಎಂದರು.

“ನಾವು ಕೊಟ್ಟ ಮಾತಿನಂತೆ ಯೋಜನೆಗಳನ್ನು ನೀಡುತ್ತಾ ಬಂದಿದ್ದೇವೆ. ಕೊಟ್ಟ ಭರವಸೆಗಳನ್ನು ಸರಿಯಾಗಿ ಈಡೇರಿಸಿಕೊಂಡು ಬಂದಿರುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ, ಅಚ್ಛೇದಿನ ಕೊಡುತ್ತೇವೆ ಎಂದು ಹೇಳಿದ್ದರಲ್ಲಾ ಕೊಟ್ಟರಾ? ಬಿಜೆಪಿ ಸರ್ಕಾರದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ, ಆದಾಯ ಪಾತಾಳಕ್ಕೆ ಕುಸಿದ ಕಾರಣ ನಾವು ಈ ಗ್ಯಾರಂಟಿ ಯೋಜನೆ ನೀಡಿದ್ದೇವೆ. ಬೆಲೆ ಏರಿಕೆ ಮಧ್ಯೆ ನಿಮ್ಮ ಜೀವನ ಸುಗಮವಾಗಿ ಸಾಗಬೇಕು ಎಂದು ಈ ಯೋಜನೆ ನೀಡಿದ್ದೇವೆ” ಎಂದರು.

“ಮೊನ್ನೆಯಷ್ಟೇ ಮನೆಮನೆಗೆ ಕಾವೇರಿ, ಸಂಚಾರಿ ಕಾವೇರಿ ಯೋಜನೆ ಮೂಲಕ 650 ರೂಪಾಯಿಗೆ ಟ್ಯಾಕಂರ್ ನೀರು ಪೂರೈಸಲು ಮುಂದಾಗಿದ್ದಾರೆ. ಟ್ಯಾಂಕರ್ ನೀರಿನ ಮಾಫಿಯಾ ತಡೆಗಟ್ಟಲು ಈ ಯೋಜನೆ ಜಾರಿ ಮಾಡಲಾಗಿದೆ. ಈ ಯೋಜನೆ ಮೂಲಕ ಮನೆ ಮನೆಗೆ ಶುದ್ಧ ಕಾವೇರಿ ನೀರು ಪೂರೈಸಲಾಗುತ್ತಿದೆ. ನಾನು ಅಧಿಕಾರಕ್ಕೆ ಬಂದ ನಂತರ ಕಾವೇರಿ ಐದನೇ ಹಂತದ ಯೋಜನೆ ಜಾರಿ ಮಾಡಲಾಗಿದೆ. ನಂತರ ಬೆಂಗಳೂರಿಗೆ ಪೂರೈಸಲು ಹೆಚ್ಚುವರಿಯಾಗಿ 6 ಟಿಎಂಸಿ ನೀರನ್ನು ನೀಡಲಾಗಿದೆ. ಆಮೂಲಕ ಮುಂದಿನ 30-40 ವರ್ಷಗಳ ಕಾಲ ಬೆಂಗಳೂರಿಗೆ ಕುಡಿಯಲು ನೀರನ್ನು ಪೂರೈಸಬಹುದು” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments