ಕಾಲೇಜುಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಮುಖಾಂತರ ಬೆದರಿಕೆ ಸಂದೇಶ ಕಳುಹಿಸುತ್ತಿದ್ದ ನಿರುದ್ಯೋಗಿ ಪದವೀಧರನನ್ನು ವಿ.ವಿ.ಪುರಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಸಾಲ್‌ಬರಿಯ ಬಿಕಾಂ ಪದವೀಧರ ದೀಪಾಂಜಲ್ ಮಿಶ್ರ ಬಂಧಿತ ಆರೋಪಿಯಾಗಿದ್ದಾನೆ. ಸ್ಥಳೀಯರಲ್ಲಿ ಭೀತಿ ವಾತಾವರಣ ಸೃಷ್ಟಿಸಲು ನಿರುದ್ಯೋಗಿಯಾಗಿದ್ದ ಆರೋಪಿಯು ಇಂತಹ ಕೃತ್ಯ ನಡೆಸುತ್ತಿದ್ದ ಎಂದು ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದರು.
ಕಳೆದ ಅ.10ರಂದು ವಿ.ವಿ.ಪುರಂ ಠಾಣಾ ಸರಹದ್ದಿನಲ್ಲಿರುವ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಕಾಲೇಜಿನ ಆವರಣದಲ್ಲಿ ಹೈಡೋಜನ್ ಆಧಾರಿತ ಸುಧಾರಿತ ಐಇಡಿ ಗಳನ್ನು ಇಟ್ಟಿರುವುದಾಗಿ ಇ-ಮೇಲ್ ಬೆದರಿಕೆ ಹಾಕಿದ್ದ ಪ್ರಕರಣವನ್ನು ದಾಖಲಿಸಿ ಎಲ್ಲ ಅಯಾಮಗಳಲ್ಲಿ ತನಿಖೆಯನ್ನು ಕೈಗೊಳ್ಳಲಾಗಿತ್ತು.
ಇದಲ್ಲದೆ ಆರೋಪಿ ವಿರುದ್ಧ ಹನುಮಂತನಗರ ಪೊಲೀಸ್ ಠಾಣಾ ಸರಹದ್ದಿನ ಬಿ.ಎಂ.ಎಸ್ ಕಾಲೇಜಿನ ಪ್ರಾಂಶುಪಾಲರು ಸಹ ದೂರನ್ನು ಸಲ್ಲಿಸಿದ್ದು, ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿರುತ್ತದೆ.
ಎರಡು ಪ್ರಕರಣಗಳ ತನಿಖೆಯನ್ನು ತಾಂತ್ರಿಕ ವಿಧಾನಗಳಿಂದ ಕೈಗೊಂಡು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆ, ಸಾಲ್‌ಬರಿ ಟೌನ್‌ನಲ್ಲಿ ವಶಕ್ಕೆ ಪಡೆದುಕೊಂಡು, ಆತನನ್ನು ವಿಚಾರಣೆಗೊಳಪಡಿಸಿದಾಗ ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ತಪ್ಪು ಒಪ್ಪಿಕೊಂಡಿರುತ್ತಾನೆ.
ಆರೋಪಿಯು ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಒಂದು ಹೆಚ್.ಪಿ ಕಂಪನಿಯ ಲ್ಯಾಪ್‌ಟಾಪ್ ಮತ್ತು ಒಂದು ನೋಕಿಯಾ ಮೊಬೈಲ್ ಫೋನ್‌ನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಆರೋಪಿಯು 10 ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿಸಿರುತ್ತಾನೆ. ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ಬಾಂಬ್‌ಗಳನ್ನು ಇಟ್ಟಿರುವುದಾಗಿ ಬೆದರಿಕೆಯ ಇ-ಮೇಲ್ ಕಳುಹಿಸಿರುವ ಸಂಬಂಧ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿಯೂ ಈ ಆರೋಪಿಯ ಪಾತ್ರದ ಬಗ್ಗೆ ತನಿಖೆಯನ್ನು ಕೈಗೊಳ್ಳಬೇಕಾಗಿದೆ.
ಆರೋಪಿಯನ್ನು ಪಶ್ಚಿಮ ಬಂಗಾಳದ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಟ್ರ್ಯಾನ್ಸಿಟ್ ವಾರೆಂಟ್‌ಗೆ ಕೋರಿದ್ದು. ನ್ಯಾಯಾಲಯವು ಆರೋಪಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿಲಾಗಿದೆ. ದಕ್ಷಿಣ ವಿಭಾಗದ ಡಿಸಿಪಿ ಲೊಕೇಶ್ ಬರಮಪ್ಪ ಜಗಲಸರ್ ಮಾರ್ಗದರ್ಶನದಲ್ಲಿ ವಿವಿಪುರಂ ಪೊಲೀಸ್ ಇನ್ಸ್‌ಪೆಕ್ಟರ್ ಧರ್ಮೇಂದ್ರ ಮತ್ತವರ ಸಿಬ್ಬಂದಿ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.