ನನಗೆ ಭಯ ಶುರುವಾಗಿದೆಯಾ? ನನ್ನ ನೋಡಿದರೆ ನಿಮಗೆ ಹಾಗೆ ಅನಿಸುತ್ತಾ? ಸಿಎಂ ಕಳೆದ ವಾರದಿಂದ ಹೇಗೆ ನಡೆದುಕೊಡಿದ್ದಾರೆ ನೋಡಿದ್ದೀರಲ್ಲಾ? ನನ್ನನ್ನು ಬಂಧಿಸಲು ನೂರು ಜನ ಸಿದ್ದರಾಮಯ್ಯರು ಬರಬೇಕು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದರು.
“ಅಗತ್ಯವಿದ್ದರೆ ಕುಮಾರಸ್ವಾಮಿಯನ್ನು ಮುಲಾಜಿಲ್ಲದೆ ಬಂಧಿಸುತ್ತೇವೆ” ಎಂದು ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ತಿರುಗೇಟು ಕೊಟ್ಟರು.
“ಮೈಸೂರಿನ ಮುಡಾ ದಾಖಲೆ ಇದೆಯಲ್ಲ. ಮುಡಾ ಆಸ್ತಿಯನ್ನು ನನ್ನ ಆಸ್ತಿ ಎಂದು ಹೇಳುತ್ತಿದ್ದಾರೆ. ಇಂತಹ ಭಂಡತನ ಯಾವ ಸಿಎಂ ಕೂಡ ತೋರಿಲ್ಲ. ನನ್ನ ಬಂಧನ ಮಾಡುವುದಕ್ಕೆ ನೂರು ಜನ ಸಿದ್ದರಾಮಯ್ಯರು ಬರಬೇಕು” ಎಂದು ವಾಗ್ದಾಳಿ ನಡೆಸಿದರು.
ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣದ ಬಗ್ಗೆ ಕೇಂದ್ರ ಸಚಿವರು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಬೆನ್ನಲ್ಲೇ ಸಿಎಂ ಮೇಲಿನಂತೆ ಹೇಳಿಕೆ ನೀಡಿದ್ದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು, “ನನಗೆ ಯಾವುದೇ ಭಯ ಇಲ್ಲ. ನನ್ನ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್ಗೆ ಅನುಮೋದನೆಗೆ ಕೋರಿದ್ದಾರೆ. ಅನುಮತಿ ಕೋರಿರೋದು 2023 ನವೆಂಬರ್ನಲ್ಲಿ. ಸುಮಾರು ಹತ್ತು ತಿಂಗಳಾಗಿದೆ” ಎಂದರು.