ಮಂಗಳೂರು ನಗರದ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಧರ್ಮ ನಿಂದನೆ ಮಾಡಿದ್ದಾರೆ ಎನ್ನಲಾದ ಪ್ರಕರಣ ಹಾಗೂ ಅದರ ನಂತರದ ಬೆಳವಣಿಗೆಗಳ ಕುರಿತು ತನಿಖೆ ನಡೆಸಲು ಐಎಎಸ್ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಶಾಲಾ ಶಿಕ್ಷಣ ಇಲಾಖೆ ಕಲಬುರಗಿಯ ಹೆಚ್ಚುವರಿ ಆಯುಕ್ತರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಈ ಸಂಬಂಧ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದ್ದು, ಶೀಘ್ರ ವರದಿ ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ” ಎಂದು ಹೇಳಿದರು.
“ಶಿಕ್ಷಕಿ ಪಾಠ ಮಾಡುವಾಗ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಇಲ್ಲಿನ ಶಾಸಕರು, ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸಿ ಪ್ರತಿಭಟನೆ ಮಾಡಿದ್ದಾರೆ. ಇದು ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು. ಅವರ ನಡವಳಿಕೆಯಿಂದ ಬೇಸರವಾಗಿದೆ. ಘಟನೆ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಶಾಸಕರ ಮೇಲೆ ಪ್ರಕರಣ ದಾಖಲಿಸಲಾಗಿದೆ” ಎಂದರು.
“ಬಿಜೆಪಿಯವರು ಹೇಳಿದಾಕ್ಷಣ ಪ್ರಕರಣ ಹಿಂಪಡೆಯಲಾಗದು. ತನಿಖೆ ನಡೆಯುತ್ತಿದ್ದು, ತಪ್ಪು ಎಸಗಿದ್ದು ದೃಢಪಟ್ಟರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ” ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಆಶಾಕಿರಣ’ ಕಾರ್ಯಕ್ರಮಕ್ಕೆ ಸಿಎಂ ಚಾಲನೆ
“ಭಾನುವಾರ ಹಾವೇರಿಯಲ್ಲಿ ನಡೆಯಲಿರುವ ರಾಜ್ಯ ಸರ್ಕಾರದ ‘ಆಶಾಕಿರಣ’ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ‘ನಿಮ್ಮ ಮನೆ ಬಾಗಿಲಿಗೆ ಕಣ್ಣಿನ ಆರೈಕೆ’ ಎಂಬ ಧ್ಯೇಯ ವಾಕ್ಯದಲ್ಲಿ ಯೋಜನೆ ಜಾರಿಯಾಗಲಿದೆ” ಎಂದು ಸಚಿವರು ತಿಳಿಸಿದರು.
“ಮಗುವಿನಿಂದ ಹಿಡಿದು ಎಲ್ಲಾ ವಯೋಮಾನದವರಿಗೆ ಕಣ್ಣಿನ ತಪಾಸಣೆ ಮಾಡಲಾಗುತ್ತೆ. ದೃಷ್ಟಿದೋಷ ಇರುವವರಿಗೆ ಉಚಿತ ಕನ್ನಡಕ ವಿತರಣೆ ಮಾಡುತ್ತೇವೆ. ಅವಶ್ಯಕತೆ ಇರುವವರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡುತ್ತೇವೆ. ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ, ಕಲಬುರಗಿ, ಚಾಮರಾಜನಗರ, ಹಾವೇರಿ ಜಿಲ್ಲೆಯಲ್ಲಿ ಈ ಯೋಜನೆ ಜಾರಿ ಮಾಡಿದ್ದೇವೆ” ಎಂದರು.
“ಎರಡನೇ ಹಂತದಲ್ಲಿ ಚಿತ್ರದುರ್ಗ, ಮಂಡ್ಯ, ರಾಯಚೂರು, ಉತ್ತರಕನ್ನಡ ಜಿಲ್ಲೆಯಲ್ಲಿ ಆಶಾಕಿರಣ ಅಭಿಯಾನ ಆರಂಭವಾಗುತ್ತದೆ. ಮುಂದೆ ಹಂತ ಹಂತವಾಗಿ ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಈ ಯೋಜನೆ ವಿಸ್ತರಣೆ ಆಗುತ್ತೆ. ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುತ್ತಾರೆ” ಎಂದು ಮಾಹಿತಿ ನೀಡಿದರು.