Homeಕರ್ನಾಟಕಬಿಸಿಲಿನ ತಾಪಮಾನ ಏರಿಕೆ | ಮಾರ್ಚ್‌ - ಏಪ್ರಿಲ್‌ನಲ್ಲಿ ರಣಬೀಸಿಲು: ಹವಾಮಾನ ಇಲಾಖೆ

ಬಿಸಿಲಿನ ತಾಪಮಾನ ಏರಿಕೆ | ಮಾರ್ಚ್‌ – ಏಪ್ರಿಲ್‌ನಲ್ಲಿ ರಣಬೀಸಿಲು: ಹವಾಮಾನ ಇಲಾಖೆ

ಚಳಿಗಾಲ ಇನ್ನೂ ಮುಗಿದಿಲ್ಲ. ಆಗಲೇ ಬಿಸಿಲಿನ ತಾಪಮಾನ ಗಣನೀಯ ಏರಿಕೆ ಕಂಡಿದೆ. ಬೆಳಗ್ಗೆ ಎಂಟು ಗಂಟೆಗೆಲ್ಲ ಬಿಸಿಲಿನ ತೀವ್ರತೆ ಹೆಚ್ಚಿರುತ್ತದೆ. ಮಧ್ಯಾಹ್ನ 12 ಗಂಟೆ ಹೊತ್ತಿಗೆ ಹೊರಗೆ ನಡೆದಾಡಲೂ ಸಾಧ್ಯವಾಗದಷ್ಟು ಬಿಸಿಲಿನ ಉಷ್ಣತೆ ಇದೆ.

ರಾಜ್ಯಾದ್ಯಂತ ರಣಬೀಸಿಲು ಹೆಚ್ಚಾಗುತ್ತಿದೆ. ಕಳೆದ ವರ್ಷವೇ ದಾಖಲೆಯ ಬಿಸಿಲು ದಾಖಲಾಗಿತ್ತು. ಸುಡು ಬಿಸಿಲಿಗೆ ಜನರು ಕಂಗೆಟ್ಟು ಹೋಗಿದ್ದರು. ಇದೀಗ ಈ ವರ್ಷವೂ ಕಳೆದ ವರ್ಷಕ್ಕಿಂತ ಹೆಚ್ಚು ಬಿಸಿಲಿರುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಈ ವರ್ಷ ಫೆಬ್ರವರಿಯಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್‌ ಬಿಸಿಲು ಅಧಿಕವಾಗಿದೆ. ಇದು ಹೀಗೆ ಮುಂದುವರಿದು ಮಾರ್ಚ್ ನಲ್ಲಿ ತಾಪಮಾನ ದಾಖಲೆ ಮಟ್ಟಕ್ಕೆ ಮುಟ್ಟಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಗಾಳಿ ಬೀಸುವ ದಿಕ್ಕು ಕಾರಣ ಎನ್ನಲಾಗಿದೆ. ಚಳಿಗಾಲದಲ್ಲಿ ಗಾಳಿಯ ದಿಕ್ಕು ಉತ್ತರದಿಂದ ಬೀಸಿದರೆ ಚಳಿ ತೀವ್ರತೆ ಹೆಚ್ಚುತ್ತದೆ. ಪೂರ್ವ ದಿಕ್ಕಿನಿಂದ ಗಾಳಿ ಬೀಸಿದಾಗ ವಾತಾವರಣ ಉಷ್ಣದಿಂದ ಕೂಡಿರುತ್ತದೆ.

ಬಯಲುಸೀಮೆ , ಉತ್ತರ ಕರ್ನಾಟಕ ಮಾತ್ರವಲ್ಲದೆ, ಬೆಂಗಳೂರಲ್ಲೂ ಬಿಸಿಲಿನ ಬೇಗೆ ಹೆಚ್ಚಾಗಿದೆ. ಮಾರ್ಚ್‌ನಿಂದ ಬೇಸಿಗೆ ಆರಂಭಗೊಳ್ಳಲಿದ್ದು, ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಬಿಸಿಲು ಹಾಗೂ ಸೆಕೆ ಇರಲಿದೆ. ಬಹುತೇಕ ಜಿಲ್ಲೆಗಳಲ್ಲಿ ಫೆಬ್ರವರಿ ಮೊದಲ ವಾರವೇ 32ರಿಂದ 37 ಡಿಗ್ರಿಯವರೆಗೂ ತಾಪಮಾನ ದಾಖಲಾಗುತ್ತಿದೆ.

ಕರಾವಳಿ ಕರ್ನಾಟಕದಾದ್ಯಂತ ಗರಿಷ್ಠ ತಾಪಮಾನ 33-34 ಡಿಗ್ರಿ ಸೆಲ್ಸಿಯಸ್‌, ಉತ್ತರ ಒಳನಾಡಿನ ಕರ್ನಾಟಕದ ಪ್ರದೇಶಗಳಲ್ಲಿ 34 ರಿಂದ 37°C, ಆಗುಂಬೆ, ಬೆಂಗಳೂರು, ಚಿಕ್ಕಮಗಳೂರು, ಹಾಸನ, ಮೈಸೂರು, ಚಿಂತಾಮಣಿ ಮತ್ತು ಮಡಿಕೇರಿಗಳಲ್ಲಿ 31-33°C ಮತ್ತು ದಕ್ಷಿಣ ಒಳನಾಡಿನ ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ ಮತ್ತು ಶಿವಮೊಗ್ಗಗಳಲ್ಲಿ 34-37°C ನಷ್ಟು ದಾಖಲಾಗಿದೆ.

ಮುಂದಿನ ಒಂದು ವಾರದಲ್ಲಿ ಕರ್ನಾಟಕದ ಉತ್ತರ ಒಳನಾಡಿನಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-4°C ಮತ್ತು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ 2-3°C ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3°C ರಷ್ಟು ಹೆಚ್ಚಾಗುವ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯಕ್ಕಿಂತ 1-2°C ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.‌

ಬೆಂಗಳೂರು ನಗರಕ್ಕೂ ಕೂಡ ಹವಾಮಾನ ಇಲಾಕೆ ಅಲರ್ಟ್‌ ನೀಡಿದ್ದು, ಬೆಳಗ್ಗೆ ಹೆಚ್ಚಿನ ಚಳಿ ಇರುತ್ತೆ ಬೆಳಗ್ಗೆ 10 ಗಂಟೆಯ ನಂತರ ಬಿಸಿಲ ತಾಪ ಹೆಚ್ಚಿರುತ್ತೆ ಎಂದು ಸೂಚಿಸಿಲಾಗಿದೆ. ಶಿವರಾತ್ರಿ ಸಮೀಪಿಸುತ್ತಿದ್ದು ಬೇಸಿಗೆ ಆರಂಭದಲ್ಲಿಯೇ ಬಯಲು ಸೀಮೆ ಜಿಲ್ಲೆಗಳಲ್ಲಿ ತಾಪಮಾನ ಏರುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments