ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ, ಇನ್ವೆಸ್ಟ್ ಕರ್ನಾಟಕ-25ರ ಒಟ್ಟಾರೆ 10.27 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯ ಭಾಗವಾಗಿದ್ದ ₹315 ಕೋಟಿ ರೂಪಾಯಿಗಳ ಜರ್ಮನಿ ಮೂಲದ ಕ್ರೋನ್ಸ್ ಕಂಪನಿಯ ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಘಟಕ ನಿರ್ಮಾಣದ ಅನುಷ್ಠಾನ ಗುರುವಾರ ಆರಂಭಗೊಂಡಿದೆ.
ಕೋಲಾರ ಜಿಲ್ಲೆಯ ವೇಮಗಲ್ನಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಕಂಪನಿ ನಿರ್ಮಿಸಲಿರುವ ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಘಟಕಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಭೂಮಿ ಪೂಜೆ ನೆರವೇರಿಸಿ ಕಾರ್ಯಯೋಜನೆಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, “ಕೈಗಾರಿಕಾ ಅಗತ್ಯಗಳಿಗೆ ಬೇಕಾಗುವ ಬಾಟ್ಲಿಂಗ್ ಮತ್ತು ಶುದ್ಧೀಕರಣ ಸಾಧನಗಳ ತಯಾರಿಕೆಗೆ ದೇಶದಲ್ಲಿ ಅಪಾರ ಬೇಡಿಕೆ ಇದೆ. ಇದನ್ನು ಮನಗಂಡು ಕ್ರೋನ್ಸ್, ರಾಜ್ಯದಲ್ಲಿ ಈ ಸ್ಥಾವರ ಆರಂಭಿಸಲು ಮುಂದಾಗಿದೆ. ಇದರಿಂದ ಬಂಡವಾಳ ಹೂಡಿಕೆಯ ಜತೆಗೆ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯೂ ಆಗಲಿದೆ. ವೇಮಗಲ್ ಕೈಗಾರಿಕಾ ಪ್ರದೇಶವು ಬೆಂಗಳೂರಿಗೆ ಕೂಡ ಹತ್ತಿರದಲ್ಲಿ ಇರುವುದರಿಂದ ಮತ್ತಷ್ಟು ಅನುಕೂಲವಾಗಲಿದೆ” ಎಂದರು.
“ತಾವು ಮೂರು ತಿಂಗಳ ಹಿಂದೆ ಇತ್ತೀಚೆಗೆ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಜರ್ಮನಿಯಲ್ಲಿ ರೋಡ್-ಶೋ ನಡೆಸಿದಾಗ, ಅಲ್ಲಿ ಕ್ರೋನ್ಸ್ ಕಂಪನಿಯ ಕೇಂದ್ರ ಕಚೇರಿಗೆ ಭೇಟಿ ನೀಡಿ, ವ್ಯವಸ್ಥೆಯನ್ನು ವೀಕ್ಷಿಸಿದ್ದೆ. ಪ್ರಿಸಿಷನ್ ಎಂಜಿನಿಯರಿಂಗ್ ಮತ್ತು ನಾವೀನ್ಯತೆಗಳಿಗೆ ಹೆಸರು ಮಾಡಿರುವ ಕಂಪನಿಯು ಭಾರತದಲ್ಲಿನ ತನ್ನ ನೂತನ ಉತ್ಪಾದನಾ ಸ್ಥಾವರವನ್ನು ಆರಂಭಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಜರ್ಮನಿಯಲ್ಲಿ ಏನಿದೆಯೋ ಅವೆಲ್ಲವೂ ನಮ್ಮಲ್ಲೂ ಬರಬೇಕು. ಇದಕ್ಕಾಗಿ ಸರಕಾರವು ಎಲ್ಲ ಬೆಂಬಲವನ್ನೂ ಕೊಡಲು ಬದ್ಧವಾಗಿದೆ ಎಂದು ಹೇಳಿದ್ದೆ. ಆ ಪ್ರಕಾರ ಇವತ್ತು ಈ ಸಂಸ್ಥೆ ನಿರ್ಮಾಣಕ್ಕೆ ನಾಂದಿಯಾಗಿದೆ” ಎಂದು ಹೇಳಿದರು.
“ಕಂಪನಿಯು ಹಂತ ಹಂತವಾಗಿ 315 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, 550 ಮಂದಿಗೆ ಉದ್ಯೋಗ ಸಿಗಲಿದೆ. ನಿಮಿಷಕ್ಕೆ ನೂರಾರು ಬಾಟಲಿ ಉತ್ಪಾದಿಸುವ ಯಂತ್ರಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. ಸ್ಥಳೀಯ ಹಾಗೂ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ ನೀಡಬೇಕೆಂದೂ ಸಚಿವರು ಕ್ರೋನ್ಸ್ ಪ್ರತಿನಿಧಿಗಳಲ್ಲಿ ಮನವಿ ಮಾಡಿದರು. ಇದನ್ನು ಆದ್ಯತೆ ಮೇಲೆ ಮಾಡಬೇಕು” ಎಂದು ಕೋರಿದರು.
“ವೇಮಗಲ್ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಕರ್ನಾಟಕವನ್ನು ಉತ್ಪಾದನಾ ವಲಯದಲ್ಲಿ ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬುದರ ಬಗ್ಗೆಯೂ ಸದ್ಯದಲ್ಲೇ ಪರಿಣಿತರ ಚರ್ಚೆ ಕೂಡ ಮಾಡಲಾಗುವುದು ಎಂದ ಅವರು, ಸಿಎಸ್ ಆರ್ ಹಣ ಕೂಡ ಸ್ಥಳೀಯರ ಅಭಿವೃದ್ಧಿಗೆ ಬಳಸಿ” ಎಂದು ಸಂಬಂಧಪಟ್ಟ ಕಂಪೆನಿಯ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಕ್ರೋನ್ಸ್ ಆಡಳಿತ ಮಂಡಳಿ ನಿರ್ದೇಶಕರಾದ ರೊಲ್ಫ್ಸ್ ಗೋಲ್ಡ್ ಬ್ರೋನರ್, ಮಾರ್ಕಸ್ ವಿಂಟರ್, ಯೋಜನಾ ನಿರ್ದೇಶಕ ಡೇವಿಡ್ ಕ್ರಿಮ್ಮರ್, ಕ್ರೋನ್ಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಹರೀಶ ಹನುಗೋಡು, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ, ಕೆಐಎಡಿಬಿ ಸಿಇಒ ಡಾ.ಮಹೇಶ ಮುಂತಾದವರು ಉಪಸ್ಥಿತರಿದ್ದರು.