ಮುಖ್ಯಮಂತ್ರಿಗಳು ಆಲ್ ಈಸ್ ವೆಲ್ ನಾಟಕ ಬದಿಗಿಡಬೇಕು. ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಕ್ರೋಢೀಕೃತ ಹಣ ಉಪಯೋಗ ಆಗುತ್ತಿದೆಯೇ ದುರುಪಯೋಗ ಆಗುತ್ತಿದೆಯೇ? ಎಂದು ಪ್ರಶ್ನಿಸಿದರು.
“ಗ್ಯಾರಂಟಿಗಳ ಬಗ್ಗೆ ನಮ್ಮ ವಿರೋಧವಿಲ್ಲ. ಅದರ ಅನುಷ್ಠಾನ ಆಗಲೇಬೇಕು. ಯುವನಿಧಿ ಬಗ್ಗೆ ಚಕಾರ ಎತ್ತುತ್ತಿಲ್ಲ. ಪರಿಶಿಷ್ಟ ಜಾತಿ, ಪಂಗಡದ ಹಣವನ್ನು ಗ್ಯಾರಂಟಿಗೆ ಬಳಸಿದ್ದಾರೆ. ಇದರ ವಿರುದ್ಧ ಆ ಸಮಾಜದ ಮುಖಂಡರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಮಗೆ ಅನ್ಯಾಯ ಮಾಡದಿರಿ ಎಂದು ತಾಕೀತು ಮಾಡಿ ಮನವಿ ಸಲ್ಲಿಸಿದ್ದಾರೆ” ಎಂದು ಗಮನ ಸೆಳೆದರು.
“ಮುಖ್ಯಮಂತ್ರಿಗಳು ಸುಳ್ಳಿನ ಸರದಾರ. ಸರಕಾರದ ಯೋಗ್ಯತೆಗೆ ಬೆಂಗಳೂರಿನ ಒಂದು ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ. ಭೂಗತ ಟನೆಲ್ ಬಗ್ಗೆ ಮಾತನಾಡುತ್ತೀರಿ, ಆದರೆ ಶಾಸಕರಿಗೆ ಅಭಿವೃದ್ಧಿ ಅನುದಾನ ನೀಡುತ್ತಿಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
“ಸಿಎಂ ಕುರ್ಚಿಗಾಗಿ ಭರ್ಜರಿ ಪೈಪೋಟಿ ನಡೆದಿದೆ. ಸಿದ್ದರಾಮಯ್ಯನವರು ಪೂರ್ಣಾವಧಿ ಸಿಎಂ ಎಂದು ಹಲವರು ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರೆಲ್ಲ ಸಿದ್ದರಾಮಯ್ಯನವರ ಪರ ಇದ್ದಾರೆ ಎಂಬ ಭ್ರಮೆಯಿಂದ ಹೊರಕ್ಕೆ ಬರಬೇಕಿದೆ. ಅವರೆಲ್ಲರೂ ಸಿಎಂ ಹುದ್ದೆಯ ಆಕಾಂಕ್ಷಿಗಳು” ಎಂದು ವಿಜಯೇಂದ್ರ ಹೇಳಿದರು.
“ಒಂದೆಡೆ ಕಾಂಗ್ರೆಸ್ ಹೈಕಮಾಂಡ್ ಸುಪ್ರೀಂ ಎನ್ನುತ್ತಾರೆ. ಇನ್ನೊಂದೆಡೆ ಸಿದ್ದರಾಮಯ್ಯನವರ ಬೆಂಬಲಿಗರು ಹೈಕಮಾಂಡಿಗೇ ಎಚ್ಚರಿಕೆ ನೀಡಿದ್ದಾರೆ. ತಮ್ಮ ಮಾತು ಕೇಳದಿದ್ದರೆ ನಮ್ಮ ದಾರಿ ನಮಗೆ ಎಂಬ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ನಡೆಯಲಿದೆ” ಎಂದರು.
“ಲೋಕಸಭಾ ಚುನಾವಣೆ ಬಂದಾಗ ಗ್ಯಾರಂಟಿ ಹಣ ನೀಡುತ್ತಾರೆ. ಉಪ ಚುನಾವಣೆ ಬಂದಾಗಲೂ ಗ್ಯಾರಂಟಿ ಅನುಷ್ಠಾನಕ್ಕೆ ಬರುತ್ತದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಬಂದಾಗ ಹಣ ಕೊಡುವ ಸಾಧ್ಯತೆ ಇದೆ. ರಾಜ್ಯದ ಜನರನ್ನು ಕಾಂಗ್ರೆಸ್‌ನವರು ಭಿಕ್ಷುಕರು ಅಂದುಕೊಂಡಿದ್ದೀರಾ” ಎಂದು ಪ್ರಶ್ನಿಸಿದರು.
“ರಾಜ್ಯದಲ್ಲಿ ಭೀಕರ ಬರಗಾಲದ ಸೂಚನೆಗಳು ಈಗಾಗಲೇ ಕಾಣುತ್ತಿವೆ. ಮುಖ್ಯಮಂತ್ರಿಗಳು, ಸರಕಾರ ಎಚ್ಚೆತ್ತುಕೊಳ್ಳಲಿ. ನಿದ್ರೆಯಲ್ಲಿರುವ ಸರಕಾರವು ಕುಡಿಯುವ ನೀರಿನ ಸಮಸ್ಯೆಯನ್ನು ಕೂಡಲೇ ಬಗೆ ಹರಿಸಬೇಕು” ಎಂದು ಒತ್ತಾಯಿಸಿದರು.
ಸಂಸದ ಪಿ.ಸಿ. ಮೋಹನ್, ಮಾಜಿ ಸಚಿವರಾದ ಗೋಪಾಲಯ್ಯ, ಶಾಸಕ ಉದಯ ಗರುಡಾಚಾರ್, ರಾಜ್ಯ ಮುಖ್ಯ ವಕ್ತಾರ ಅಶ್ವಥ್ ನಾರಾಯಣ್, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.