Homeಕರ್ನಾಟಕರಾಜ್ಯದ ನೀರಾವರಿ ಯೋಜನೆಗಳಿಗೆ ಬಾಕಿ ಇರುವ ಅನುಮತಿ, ಅನುದಾನ ನೀಡಿ: ಡಿ.ಕೆ.ಶಿವಕುಮಾರ್ ಆಗ್ರಹ

ರಾಜ್ಯದ ನೀರಾವರಿ ಯೋಜನೆಗಳಿಗೆ ಬಾಕಿ ಇರುವ ಅನುಮತಿ, ಅನುದಾನ ನೀಡಿ: ಡಿ.ಕೆ.ಶಿವಕುಮಾರ್ ಆಗ್ರಹ

ಕೇಂದ್ರ ಸರಕಾರವು ಕರ್ನಾಟಕ ರಾಜ್ಯಕ್ಕೆ ಬಾಕಿ ಇರುವ ನೀರಾವರಿ ಯೋಜನೆಗಳಿಗೆ ಅನುಮತಿ ಹಾಗೂ ಅನುದಾನಗಳನ್ನು ನೀಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಗ್ರಹಿಸಿದರು.

ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ “2047ರಲ್ಲಿ ಭಾರತ ಜಲ ಸಮೃದ್ಧಿ ರಾಷ್ಟ್ರ” ಎಂಬ 2ನೇ ಅಖಿಲ ಭಾರತ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಮ್ಮೇಳನದಲ್ಲಿ ಶಿವಕುಮಾರ್ ಅವರು ಮಂಗಳವಾರ ಮಾತನಾಡಿ, “ಕರ್ನಾಟಕ ರಾಜ್ಯದ ಯೋಜನೆಗಳಿಗೆ ಕೇಂದ್ರ ಜಲಶಕ್ತಿ ಸಚಿವಾಲಯವು ಆದ್ಯತೆ ಮೇರೆಗೆ ಅಗತ್ಯ ಕ್ರಮ ಕೈಗೊಂಡು ಅನುಮತಿ ಕೊಡಿಸಬೇಕು. ಮೇಕೆದಾಟು ಯೋಜನೆಗೆ ಡಿಪಿಆರ್ ಪರಿಗಣಿಸಿ, ಅನುಮತಿ ನೀಡುವಂತೆ ಸಿಡಬ್ಲ್ಯೂಸಿಗೆ ನಿರ್ದೇಶನ ನೀಡಬೇಕು. ಇದರಿಂದ ತಮಿಳುನಾಡಿಗೆ ಪ್ರತಿ ತಿಂಗಳ ಲೆಕ್ಕಾಚಾರದ ನೀರು ನೀಡಬಹುದು. ಜತೆಗೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮತ್ತು ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

“2023-24 ರ ಕೇಂದ್ರ ಬಜೆಟ್ನಲ್ಲಿ ಮಧ್ಯ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ಘೋಷಿಸಿದ್ದರೂ ಈವರೆಗೂ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಬೇಗನೆ ಯೋಜನೆ ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡುವಂತೆ ಸಚಿವಾಲಯಕ್ಕೆ ವಿನಂತಿಸುತ್ತೇನೆ. 2011 ರ ಸೆಪ್ಟೆಂಬರ್ 16 ರಂದು ನೀಡಿರುವ ತೀರ್ಪಿನಲ್ಲಿ ಕೆಲವು ಬದಲಾವಣೆ ಮಾಡಲು ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜತೆಗೆ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿಯು (KWDT-II) 2010ರಲ್ಲಿ ನೀಡಿರುವ ತೀರ್ಪಿನ ಅನ್ವಯ ತನಗೆ ಮೀಸಲಾಗಿರುವ ನೀರನ್ನು ಕರ್ನಾಟಕ ಬಳಸಿಕೊಳ್ಳಲು ಗೆಜೆಟ್ ಅಧಿಸೂಚನೆ ಹೊರಡಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ” ಎಂದು ತಿಳಿಸಿದರು.

“ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಮೇಲೆ ಒತ್ತಡ ತಂದು, 2018ರ ಆಗಸ್ಟ್ ನಲ್ಲಿ ಮಹದಾಯಿ ಜಲ ವಿವಾದ ನ್ಯಾಯಮಂಡಳಿ ನೀಡಿದ ತೀರ್ಪಿನ ಅನ್ವಯ ಕಳಸಾ ನಾಲಾ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ದೊರಕಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಜಲಶಕ್ತಿ ಸಚಿವಾಲಯವು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಮೇಲೆ ಒತ್ತಡ ಹೇರಿ, ನದಿ ಜೋಡಣೆ ಯೋಜನೆಯಡಿ ಗೋದಾವರಿ- ಕಾವೇರಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಪಾಲನ್ನು ಮರುಪರಿಶೀಲನೆ ಮಾಡಬೇಕು. ಈ ಯೋಜನೆಯಡಿ ಪ್ರಸ್ತುತ ಕರ್ನಾಟಕಕ್ಕೆ ಕೇವಲ 15.891 ಟಿಎಂಸಿ (ಶೇ. 10.74) ನೀರನ್ನು ಮಾತ್ರ ಹಂಚಿಕೆ ಮಾಡಲಾಗಿದೆ” ಎಂದರು.

“ನಮ್ಮ ದೇಶವು ಪ್ರಪಂಚದ ಶೇ.18 ರಷ್ಟು ಜನಸಂಖ್ಯೆ ಹೊಂದಿದೆ. ಆದರೆ ಶೇ. 4 ರಷ್ಟು ಮಾತ್ರ ಶುದ್ದ ಕುಡಿಯುವ ನೀರಿನ ಮೂಲವನ್ನು ಹೊಂದಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ದೇಶವು ಸಾಕಷ್ಟು ಸವಾಲು ಎದುರಿಸಬೇಕಿದೆ. ಕೃಷಿ ಅಗತ್ಯಗಳಿಗೆ, ಬೆಳೆಯುತ್ತಿರುವ ಜನಸಂಖ್ಯೆಗೆ, ನಗರಗಳ ವಿಸ್ತರಣೆಗೆ, ಕೈಗಾರಿಕೆಗಳಿಗೆ ನೀರು ಬೇಡಿಕೆ ಪೂರೈಸಲು ಈಗಿನಿಂದಲೇ ಸನ್ನದ್ಧವಾಗಿರಬೇಕು” ಎಂದು ಹೇಳಿದರು.

“ದೇಶದಲ್ಲಿ ಈವರೆಗೆ ಸುಮಾರು 253 ಶತಕೋಟಿ ಘನ ಮೀಟರ್ (BCM) ನೀರಿನ ಸಂಗ್ರಹಣಾ ಸಾಮರ್ಥ್ಯವಿದೆ. ನಮ್ಮ ದೇಶವು ಸುಸ್ಥಿರ ಪ್ರಗತಿ ಸಾಧಿಸಲು ನೀರಿನ ಸಂಪನ್ಮೂಲ ಬಲಪಡಿಸುವ ಅಗತ್ಯವಿದೆ. ನೀರಿನ ಸಂಗ್ರಹ ಸಾಮರ್ಥ್ಯ ಮತ್ತು ಜಿಡಿಪಿ ಬೆಳವಣಿಗೆ ನಡುವೆ ನೇರ ಸಂಬಂಧವಿದೆ ಎಂದು ಅನೇಕ ತಜ್ಞರು ಹೇಳಿದ್ದಾರೆ. ನೀರು ವಿಶಿಷ್ಟ ಸಂಪನ್ಮೂಲ. ಸುಸ್ಥಿರ ಆರ್ಥಿಕ ಬೆಳವಣಿಗೆಗೆ, ಮಾನವನ ಮೂಲಭೂತ ಅಗತ್ಯ ಪೂರೈಸಲು, ಪರಿಸರ ಸಮತೋಲನ ಕಾಯ್ದುಕೊಳ್ಳಲು ನೀರು ಮೂಲಾಧಾರ. ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ನೀರಿನ ಮಾಲಿನ್ಯ ಮತ್ತು ವಿವಿಧ ವಲಯಗಳು ಅಥವಾ ಬಳಕೆದಾರರ ನಡುವಿನ ಸ್ಪರ್ಧೆಯಿಂದ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ” ಎಂದರು.

“ನೀರಾವರಿ ವಲಯದ ಪರಿಣಾಮಕಾರಿ ನಿರ್ವಹಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ನೂತನ ರಾಜ್ಯ ಜಲ ನೀತಿಯನ್ನು 2022 ರಲ್ಲಿ ಜಾರಿಗೆ ತರಲಾಯಿತು. ಜಲ ಸಂರಕ್ಷಣೆ ಹಾಗೂ ಆರೋಗ್ಯ, ಆಹಾರ, ಇಂಧನ, ಪರಿಸರ ಉದ್ದೇಶಕ್ಕೆ ನೀರಿನ ಮೂಲಗಳ ಸಮರ್ಪಕ ಬಳಕೆಗೆ ಒತ್ತು ನೀಡಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಿದೆ. ಅವುಗಳೆಂದರೆ, ಪ್ರಸ್ತುತ ಜಲ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 29 ವಿವಿಧ ಶಾಸನಗಳಿದ್ದು, ಆ ಪೈಕಿ 14 ಕೇಂದ್ರ ಸರ್ಕಾರ ಹಾಗೂ 15 ರಾಜ್ಯ ಸರ್ಕಾರಗಳ ಕಾಯ್ದೆಗಳಾಗಿವೆ. ಮುಂದಿನ ದಿನಗಳಲ್ಲಿ ನೀರಿನ ಪರಿಣಾಮಕಾರಿ ಬಳಕೆಗೆ ಇನ್ನಷ್ಟು ತಿದ್ದುಪಡಿ ಮಾಡುವುದರ ಜತೆಗೆ ಹೊಸ ಕಾಯ್ದೆಗಳನ್ನು ಜಾರಿಗೆ ತರಬೇಕು. ಅಧಿಕಾರಗಳು, ಪ್ರಾಧಿಕಾರಗಳು, ಸಿಬ್ಬಂದಿ ಮತ್ತು ಸಂಪನ್ಮೂಲಗಳೊಂದಿಗೆ ಹೊಸ ಆಡಳಿತ ಸಂಸ್ಥೆಗಳ ಸ್ಥಾಪನೆ ಮಾಡಬೇಕು. ಸರ್ಕಾರಿ ಇಲಾಖೆಗಳ, ಸಂಸ್ಥೆಗಳ ಪುನರ್ ರಚನೆ. ಇವುಗಳ ನಿರ್ವಹಣೆಗಾಗಿ ನೂತನ ನಿರ್ದಿಷ್ಟ ಕಾರ್ಯಾಚರಣಾ ಪ್ರಕ್ರಿಯೆಗಳ (Standard Operating Procedures) ಅಭಿವೃದ್ಧಿ ಮತ್ತು ಅಳವಡಿಕೆ ಮಾಡಿಕೊಳ್ಳಬೇಕಿದೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments