ನಮ್ಮ ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರ ಒಂದು ಸಮಿತಿ ರಚಿಸಿದೆ. ಹೈಕೋರ್ಟ್ ನ್ಯಾಯಧೀಶರ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ಆ ಸಮಿತಿಯ ತೀರ್ಮಾನ ನಮ್ಮ ಗಮನಕ್ಕೂ ಬರುವುದಿಲ್ಲ, ದರ ಏರಿಕೆ ತೀರ್ಮಾನ ಅವರು ಮಾಡುತ್ತಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಮೆಟ್ರೋ ಟಿಕೆಟ್ ದರ ಏರಿಕೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿದೆ ಎನ್ನುವ ಬಿಜೆಪಿಯವರ ಆರೋಪದ ಬಗ್ಗೆ ಕೇಳಿದಾಗ ಉತ್ತರಿಸಿದ ಅವರು, “ಬಿಜೆಪಿಯವರಿಗೆ ರಾಜಕೀಯ ಹೊರತಾಗಿ ಬೇರೇನೂ ಗೊತ್ತಿಲ್ಲ. ಯಾರು ಬೇಕಾದರೂ ಸಂಸತ್ತಿನಲ್ಲಿ ಮಾತನಾಡಲಿ, ಇಲ್ಲಿ ಪ್ರತಿಭಟನೆ ಮಾಡಲಿ, ಗಲಾಟೆ ಮಾಡಲಿ. ಆದರೆ ಮೆಟ್ರೋ ಯೋಜನೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಶೇ 50:50 ಅನುಪಾತದಲ್ಲಿ ಮಾಡಲಾಗಿರುತ್ತದೆ. ಆದರೆ, ದರ ನಾವು ಏರಿಸಿಲ್ಲ” ಎಂದರು.
“ಡಬಲ್ ಡೆಕ್ಕರ್ ಸೇರಿದಂತೆ ಬೆಂಗಳೂರಿನ ಮೆಟ್ರೋವನ್ನು ಇನ್ನೂ ಹೆಚ್ಚಿನ ಭಾಗಕ್ಕೆ ವಿಸ್ತರಣೆ ಮಾಡಬೇಕಿದೆ. ಮೆಟ್ರೋ ಜೊತೆಗೆ ಮೇಲ್ಸೆತುವೆ ನಿರ್ಮಾಣಕ್ಕೆ ಬಿಬಿಎಂಪಿಯಿಂದ ಶೇ 50 ರಷ್ಟು ವೆಚ್ಚವನ್ನು ಭರಿಸುವುದಾಗಿ ನಾವು ತಿಳಿಸಿದ್ದೇವೆ. ಏಕೆಂದರೆ ರಸ್ತೆ ವಿಸ್ತರಣೆ ಮಾಡಬೇಕು ಎಂದರೆ ಭೂಸ್ವಾಧಿನಕ್ಕೆ ಹೆಚ್ಚು ಖರ್ಚು ಆಗುತ್ತದೆ. ಕಟ್ಟಡಗಳನ್ನು ಒಡೆದುಹಾಕಿ ರಸ್ತೆ ವಿಸ್ತರಿಸುವುದು ಹೆಚ್ಚು ತ್ರಾಸದಾಯಕ. ಇದನ್ನು ಪ್ರಾಯೋಗಿಕವಾಗಿ ರಾಗಿಗುಡ್ಡ ಜಂಕ್ಷನ್ ಬಳಿ ಮಾಡಿದ್ದೇವೆ” ಎಂದು ತಿಳಿಸಿದರು.
ಪ್ರಯಾಣ ದರ ಏರಿಕೆ ಹೆಸರಲ್ಲಿ ಬೆಂಗಳೂರು ಮೆಟ್ರೋ (ನಮ್ಮ ಮೆಟ್ರೋ) ಅಕ್ಷರಶಃ ಹಗಲು ದರೋಡೆಗೆ ಇಳಿದಂಗೆ ಕಾಣುತ್ತಿದೆ. ಶೇ.47ರಷ್ಟು ದರ ಹೆಚ್ಚಳ ಎಂದು ಬಿಎಂಆರ್ಸಿಎಲ್ (ಬೆಂಗಳೂರು ಮೆಟ್ರೋ ರೈಲು ನಿಗಮ) ಹೇಳಿದ್ದರೂ ಹಲವು ಕಡೆಗಳಲ್ಲಿ ಹಿಂದಿನ ದರದ ದುಪ್ಪಟ್ಟು ಶೇ.100ರಷ್ಟು ಅಧಿಕ ಮೊತ್ತ ನೀಡಬೇಕಾಗಿದೆ.
‘ನಮ್ಮ ಮೆಟ್ರೊ‘ ಪ್ರಯಾಣ ದರ ಏರಿಕೆ ಹೆಚ್ಚಳದಿಂದ ದೇಶದಲ್ಲಿಯೇ ಅತಿ ದುಬಾರಿ ಪ್ರಯಾಣ ದರವನ್ನು ಹೊಂದಿರುವ ರಾಜ್ಯ ಬೆಂಗಳೂರಿನ ಮೆಟ್ರೋದ್ದಾಗಿದೆ. ಪ್ರಯಾಣಿಕರಿಂದ ಪ್ರಯಾಣ ದರವನ್ನು ಪಡೆಯುವ ಬದಲು ಬೃಹತ್ ಆದಾಯ ಸಂಗ್ರಹದ ಉದ್ದೇಶದಿಂದ ದರ ಹೆಚ್ಚಳ ಮಾಡಲಾಗಿದೆ ಎಂಬ ಆರೋಪಕ್ಕೆ ನಿಗಮ ಗುರಿಯಾಗಿದೆ.