Homeಕರ್ನಾಟಕಮಹಿಳಾ ಅಧಿಕಾರಿಗೆ ಶಾಸಕ ಪುತ್ರನಿಂದ ಫೋನ್‌ನಲ್ಲಿ ನಿಂದನೆ, ಏನಿದು ಪ್ರಕರಣ?

ಮಹಿಳಾ ಅಧಿಕಾರಿಗೆ ಶಾಸಕ ಪುತ್ರನಿಂದ ಫೋನ್‌ನಲ್ಲಿ ನಿಂದನೆ, ಏನಿದು ಪ್ರಕರಣ?

ಅಕ್ರಮ ಮರಳು ದಂಧೆ ತಡೆಯಲು ಹೋದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯನ್ನು ಶಿವಮೊಗ್ಗದ ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ ಪುತ್ರ ಬಸವೇಶ್ ನಿಂದಿಸಿದ್ದಾರೆ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೀಗೆಬಾಗಿ ಬಾಬಳ್ಳಿ ಬಳಿ ಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆದು ಟ್ರ್ಯಾಕ್ಟರ್‌ನಲ್ಲಿ ಸಾಗಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭದ್ರಾವತಿ ವಿಭಾಗದ ಭೂವಿಜ್ಞಾನಿ ಕೆ.ಕೆ.ಜ್ಯೋತಿ ಹಾಗೂ ಶಿವಮೊಗ್ಗ ವಿಭಾಗದ ಭೂ ವಿಜ್ಞಾನಿ ಪ್ರೀತಿ ದೊಡ್ಡಗೌಡರ್‌ ಮೂವರು ಸಿಬ್ಬಂದಿಯೊಂದಿಗೆ ರಾತ್ರಿ ಸ್ಥಳಕ್ಕೆ ತೆರಳಿದ್ದಾರೆ.

ಈ ವೇಳೆ ಅಕ್ರಮವಾಗಿ ಮರಳು ತೆಗೆ ಯುತ್ತಿದ್ದ ವ್ಯಕ್ತಿಯೊಬ್ಬ ಜ್ಯೋತಿ ಅವರ ಬಳಿ ಬಂದು ಮೊಬೈಲ್ ಕೊಟ್ಟು ‘ಅಣ್ಣಾ ಮಾತಾಡುತ್ತಾರೆ’ ಎಂದು ಹೇಳುತ್ತಾನೆ. ಫೋನ್ ಸ್ವೀಕರಿಸಲು ನಿರಾ ಕರಿಸುವ ಅಧಿಕಾರಿ, ‘ಅವರಿಗೆ ನನ್ನ ಫೋನ್‌ಗೆ ಕರೆ ಮಾಡಲು ಹೇಳಿ’ ಎಂದು ತಿಳಿಸುತ್ತಾರೆ.

‘ಅಧಿಕಾರಿಯ ಫೋನ್‌ಗೆ ಕರೆ ಮಾಡಬೇಕಂತೆ ಅಣ್ಣಾ’ ಎಂದು ಮರಳು ಸಾಗಿಸುತ್ತಿದ್ದ ವ್ಯಕ್ತಿ ಹೇಳುತ್ತಾನೆ. ‘ಹೌದಾ?’ ಎನ್ನುವ ಆಚೆಕಡೆಯ ವ್ಯಕ್ತಿ, ‘ಲೌಡ್ ಸ್ಪೀಕರ್ ಆನ್ ಮಾಡು’ ಎಂದು ಹೇಳಿ ಅತ್ಯಂತ ಅವಾಚ್ಯವಾಗಿ ಅಧಿಕಾರಿಗೆ ನಿಂದಿಸುತ್ತಾನೆ. ‘ನೆಟ್ಟಗೆ ಮಾತನಾಡಿ, ಯಾರಿಗೆ ಮಾತಾಡುತ್ತೀರಿ. ಒಬ್ಬ ಅಧಿಕಾರಿಗೆ ಮಾತಾಡುತ್ತಿದ್ದೀರಿ. ಬೆಲೆ ಕೊಟ್ಟು ಮಾತನಾಡಿ’ ಎಂದು ಮಹಿಳಾ ಅಧಿಕಾರಿ ಹೇಳಿದರೂ ಹೀನಾಯವಾಗಿ ನಿಂದಿಸುವುದು ಮುಂದುವರಿಸುತ್ತಾನೆ.

ಜೆಡಿಎಸ್‌ ಕಿಡಿ

ಕಾಂಗ್ರೆಸ್‌ ಸರ್ಕಾರದಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆಯೇ ಇಲ್ಲವಾಗಿದೆ! ಭದ್ರಾವತಿಯಲ್ಲಿ ಒಂದು ಪೈಸೆ ಅಭಿವೃದ್ಧಿ ಕೆಲಸ ಮಾಡದ ನಾಲಾಯಕ್‌ ಕಾಂಗ್ರೆಸ್‌ ಶಾಸಕ ಸಂಗಮೇಶ್‌ ಹಾಗೂ ಅವರ ಮಗ ಬಿ.ಎಸ್.‌ ಬಸವೇಶ ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ, ಗೂಂಡಾಗಿರಿ ಮಾಡಿಕೊಂಡು ಲೂಟಿ ಹೊಡೆಯುತ್ತಿದ್ದಾರೆ. ಅಕ್ರಮ ಮರಳುಗಾರಿಕೆಯನ್ನು ತಡೆಯಲು ಬಂದ ಕರ್ತವ್ಯನಿರತ ಮಹಿಳಾ ಅಧಿಕಾರಿಗೆ ಶಾಸಕ ಸಂಗಮೇಶ್‌ ಅವರ ಪುತ್ರ ಫೋನಿನಲ್ಲಿ ಬೆದರಿಕೆ, ಧಮ್ಕಿ ಹಾಕಿ, ಅಶ್ಲೀಲ ಶಬ್ಧಗಳಿಂದ ನಿಂದಿಸಿರುವುದು ಅಕ್ಷಮ್ಯ ಅಪರಾಧ. ರಾಜ್ಯದಲ್ಲಿರುವ ಮಹಿಳಾ ಆಯೋಗ ಏನು ಮಾಡುತ್ತಿದೆ ? ಮಹಿಳೆಯ ಗೌರವಕ್ಕೆ ಧಕ್ಕೆ ತಂದಿರುವ ಹೆಣ್ಣುನಿಂದಕ ಶಾಸಕರ ಪುತ್ರನ ವಿರುದ್ಧ ಸರ್ಕಾರ ತಕ್ಷಣವೇ ಪ್ರಕರಣ ದಾಖಲಿಸಿ, ಬಂಧಿಸಬೇಕು” ಎಂದು ಜೆಡಿಎಸ್‌ ಆಗ್ರಹಿಸಿದೆ.

ಲೋಕಾಯುಕ್ತಕ್ಕೆ ದೂರು: ರವಿ ಕೃಷ್ಣಾ ರೆಡ್ಡಿ

“ಅವಾಚ್ಯವಾಗಿ ನಿಂದನೆ ಮಾಡಿ ಬೆದರಿಕೆ ಹಾಕಿರುವ ಕೊಳಕ ಭದ್ರಾವತಿಯ ಶಾಸಕ ಸಂಗಮೇಶರ ಮಗ ಬಸವೇಶ್ ಎನ್ನುವ ಮಾಹಿತಿ ಇದೆ. ಬಸವೇಶ್ ಆಗಲಿ ಅಥವಾ ಜ್ಯೋತಿ ಎನ್ನುವ ಆ ಶೋಷಿತ ಅಧಿಕಾರಿಯಾಗಲಿ ಇದನ್ನು ನಿರಾಕರಿಸಬೇಕು ಅಥವ ಖಚಿತಪಡಿಸಬೇಕು. ಈಗಾಗಲೇ ವೈರಲ್ ಆಗಿರುವ ಈ ವಿಡಿಯೋದ ಆಧಾರದ ಮೇಲೆ ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಈ ಕೂಡಲೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು. ಇಲ್ಲವಾದಲ್ಲಿ DC, SP ಮತ್ತು ಬೈಗುಳ ತಿಂದ ಅಧಿಕಾರಿಯ ವಿರುದ್ಧ KRS ಪಕ್ಷದವರು ಲೋಕಾಯುಕ್ತದಲ್ಲಿ ಕರ್ತವ್ಯಲೋಪದ ಅಡಿಯಲ್ಲಿ ದೂರು ದಾಖಲಿಸಲು ನಾನು ಈ ಮೂಲಕ ಶಿವಮೊಗ್ಗ ಜಿಲ್ಲೆಯ KRS ಪಕ್ಷದ ಮುಖಂಡರಿಗೆ ಸೂಚಿಸುತ್ತಿದ್ದೇನೆ” ಎಂದು ರವಿ ಕೃಷ್ಣಾ ರೆಡ್ಡಿ ವಿಡಿಯೋ ಹಂಚಿಕೊಂಡು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments