Homeಕರ್ನಾಟಕಏರ್‌ ಶೋ -2025 | ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ, ಡಿ ಕೆ ಶಿವಕುಮಾರ್‌...

ಏರ್‌ ಶೋ -2025 | ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ, ಡಿ ಕೆ ಶಿವಕುಮಾರ್‌ ಹೇಳಿದ್ದೇನು?

ಉತ್ತರ ಪ್ರದೇಶದಲ್ಲಿ ಸಂಸ್ಕೃತಿಯ ಮಹಾ ಕುಂಭಮೇಳ ನಡೆಯುತ್ತಿದೆ. ಬೆಂಗಳೂರಿನಲ್ಲಿ ತಂತ್ರಜ್ಞಾನ ಹಾಗೂ ಯುದ್ಧೋಪಕರಣಗಳ ಹಾಗೂ ಯುದ್ಧ ವಿಮಾನಗಳ ಮಹಾ ಕುಂಭಮೇಳ ನಡೆಯುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಯಲಹಂಕ ವಾಯುನೆಲೆಯಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಏರ್‌ ಶೋ-2025ಗೆ ಚಾಲನೆ ನೀಡಿ ಮಾತನಾಡಿದ ಅವರು, “ಹೊಸ ಸವಾಲುಗಳಿಗೆ ಉತ್ತರ ಹುಡುಕುವ ಕಾರ್ಯ ಮಾಡಬೇಕಿದೆ. ಶಾಂತಿ, ಶಕ್ತಿ ನಮ್ಮ ಮಂತ್ರ ಬಲ ಆಗಬೇಕಿದೆ. ನಾವು ಬಲಾಢ್ಯರಾಗಿ ವಿಶ್ವದಲ್ಲಿ ನಮ್ಮ ಸ್ಥಾನ ಪ್ರದರ್ಶನ ಮಾಡಬೇಕಿದೆ. ಅತ್ಯಾಧುನಿಕ ಅನ್ವೇಷಣೆ ಮೂಲಕ ನಾವು ಮುಂದೆ ಹೆಜ್ಜೆ ಇಟ್ಟಿದ್ದೇವೆ” ಎಂದು ಹೇಳಿದರು.

“ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. 10 ವರ್ಷಗಳಿಂದ ವೈಮಾನಿಕ‌ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದೇವೆ. ಬಜೆಟ್​ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 1,080 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದೇವೆ. ಬೆಂಗಳೂರು ಇನ್ನೋವೇಷನ್ ಹಬ್, ಸಾಫ್ಟ್‌ವೇರ್​ನ ಹೆಗ್ಗಳಿಕೆ ಹೊಂದಿರುವ ನಗರ. ಏರೋಸ್ಪೇಸ್ ಮೂಲಕವೂ ಬೆಂಗಳೂರು ಹೆಸರುವಾಸಿಯಾಗುತ್ತಿದೆ” ಎಂದು ರಾಜನಾಥ್ ಸಿಂಗ್ ತಿಳಿಸಿದರು.

“ಬೆಂಗಳೂರು, ಏರೋಸ್ಪೇಸ್ ಉದ್ಯಮದಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಹೊಂದಿದೆ. ಇದು ವಿಮಾನ ಮತ್ತು ಹೆಲಿಕಾಪ್ಟರ್ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಸೂಕ್ತ ಸ್ಥಳವಾಗಿದೆ. ತಯಾರಕರಿಗೆ ಪ್ರೋತ್ಸಾಹ ನೀಡುವ ಮೂಲಕ, ಪ್ರತಿಭಾ ಪಲಾಯನವನ್ನು ತಡೆದು ನಮ್ಮ ದೇಶದ ಪ್ರತಿಭೆಗಳನ್ನು ಭಾರತದೊಳಗೆ ಉಳಿಸಿಕೊಳ್ಳಬಹುದು” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟರು.

“ರಕ್ಷಣಾ ಸಚಿವರು ಕರ್ನಾಟಕದಲ್ಲಿ ಏರೋಸ್ಪೇಸ್ ಉದ್ಯಮವನ್ನು ಸ್ಥಾಪಿಸಲು ಹಾಗೂ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ತಯಾರಕರನ್ನು ಹೆಚ್ಚು, ‌ಹೆಚ್ಚು ಬೆಂಗಳೂರಿನ ಕಡೆಗೆ ಗಮನ ಹರಿಸುವಂತೆ ಪ್ರೋತ್ಸಾಹ ನೀಡಬೇಕಾಗಿ ಮನವಿ ಮಾಡುತ್ತೇನೆ. ಕರ್ನಾಟಕ ಭಾರತದ ತಾಂತ್ರಿಕ ಮತ್ತು ಕೈಗಾರಿಕಾ ಪ್ರಗತಿಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ವಿಶ್ವ ದರ್ಜೆಯ ಸಂಶೋಧನಾ ಸಂಸ್ಥೆಗಳು, ಅತ್ಯಾಧುನಿಕ ಏರೋಸ್ಪೇಸ್ ಕಂಪನಿಗಳನ್ನು ಹೊಂದಿರುವ ಕೌಶಲ್ಯಪೂರ್ಣ ಕಾರ್ಯಪಡೆಯೇ ನಮ್ಮಲ್ಲಿದೆ” ಎಂದರು.

“ಇತ್ತೀಚಿನ ವರ್ಷಗಳಲ್ಲಿ, ಕರ್ನಾಟಕವು ದೇಶದ ಒಟ್ಟು ದೇಶೀಯ ಉತ್ಪನ್ನ, ಕೈಗಾರಿಕಾ ಬೆಳವಣಿಗೆ ಮತ್ತು ಹೂಡಿಕೆಯ ಒಳಹರಿವು ಸೇರಿದಂತೆ ಪ್ರಮುಖ ಆರ್ಥಿಕ ಕ್ಷೇತ್ರಗಳಲ್ಲಿ ಅಗಾಧ ಬೆಳವಣಿಗೆ ಕಂಡಿದೆ. ಸಂಶೋಧನೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಉದ್ದಿಮೆಗೆ ಪ್ರೋತ್ಸಾಹಿಸುವ ಭವಿಷ್ಯದ ದೃಷ್ಟಿಯಿಂದ ಕೈಗಾರಿಕಾ ನೀತಿಯನ್ನು ಪೋಷಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಆಕಾಶಕ್ಕೆ ಮಿತಿಯಿಲ್ಲ ಎಂಬುದನ್ನು ಈ ಏರ್ ಶೋ ಮೂಲಕ ನಾವು ಕಂಡುಕೊಳ್ಳಬಹುದು. ಬೆಂಗಳೂರು ಏರ್ ಶೋ ನಾಗರಿಕ ಮತ್ತು ಮಿಲಿಟರಿ ವಾಯುಯಾನ ಎರಡರಲ್ಲೂ ಭಾರತದ ಪ್ರಗತಿಯನ್ನು ಎತ್ತಿ ತೋರಿಸುವ ದೊಡ್ಡ ಕಾರ್ಯಕ್ರಮ” ಎಂದು ತಿಳಿಸಿದರು.

“ಏರೋ ಇಂಡಿಯಾ ಕೇವಲ ಪ್ರದರ್ಶನವಲ್ಲ. ಇದು ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಭಾರತದ ಸಾಮರ್ಥ್ಯ ಬೆಳೆಯುತ್ತಿರುವುದಕ್ಕೆ ಸಾಕ್ಷಿ ಮತ್ತು ಅಂತರರಾಷ್ಟ್ರೀಯ ಪಾಲುದಾರಿಕೆಗಳನ್ನು ಬೆಳೆಸುವ ವೇದಿಕೆ. 2013 ರಲ್ಲಿ ಏರೋಸ್ಪೇಸ್ ನೀತಿಯನ್ನು ಘೋಷಿಸಿದ ಮೊದಲ ರಾಜ್ಯ ಕರ್ನಾಟಕ. ನಮ್ಮ ರಾಜ್ಯವು ದೇವನಹಳ್ಳಿ ಬಳಿ ಏರೋಸ್ಪೇಸ್ ಕಂಪನಿಗಳಿಗಾಗಿ 1 ಸಾವಿರ ಎಕರೆ ಪ್ರದೇಶವನ್ನು ಮೀಸಲಿಟ್ಟು ಏರೋಸ್ಪೇಸ್ ಪಾರ್ಕ್ ಸ್ಥಾಪಿಸಿದೆ. ಇಂದು ಏರೋಸ್ಪೇಸ್ ಉದ್ಯಮವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಬೆಂಗಳೂರು ಅತ್ಯುತ್ತಮ ನಗರವಾಗಿದೆ. ಅನೇಕ ಬ್ರ್ಯಾಂಡ್‌ಗಳು ಮತ್ತು ಅತ್ಯುತ್ತಮ ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಬೆಂಗಳೂರು ಸೂಕ್ತ ಸ್ಥಳವಾಗಿದೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments