Homeದೇಶತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಬಳಕೆ, ನಾಲ್ವರ ಬಂಧನ

ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಬಳಕೆ, ನಾಲ್ವರ ಬಂಧನ

ತಿರುಪತಿಯ ಲಡ್ಡು ಪ್ರಸಾದದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬಿನಾಂಶವನ್ನು ತುಪ್ಪದಲ್ಲಿ ಕಲಬೆರಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ನಾಲ್ವರನ್ನು ಬಂಧಿಸಿದೆ.

ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಚನೆಯಾದ ಸಿಬಿಐ ವಿಶೇಷ ತನಿಖಾ ತಂಡವು ಲಡ್ಡು ತಯಾರಿಸಲು ತುಪ್ಪ ಪೂರೈಸಿದ ಕಂಪನಿಗಳ ನಾಲ್ವರನ್ನು ಬಂಧಿಸಿದೆ. ಬಂಧಿತರನ್ನು ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾದ ವಿಪಿನ್ ಜೈನ್ ಮತ್ತು ಪೋಮಿಲ್ ಜೈನ್, ವೈಷ್ಣವಿ ಡೈರಿಯ ಅಪೂರ್ವ ಚಾವ್ಡಾ ಮತ್ತು ಎಆರ್ ಡೈರಿಯ ರಾಜು ರಾಜಶೇಖರನ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ನಾಲ್ಕು ಜನರನ್ನು ಬಂಧಿಸಲಾಗಿದೆ. ಅವರಲ್ಲಿ ಬಿಪಿನ್ ಜೈನ್ ಮತ್ತು ಪೋಮಿ ಜೈನ್ ಎಂಬವರು ಭೋಲೆ ಬಾಬಾ ಡೈರಿಯವರು. ವೈಷ್ಣವಿ ಡೈರಿಯ ಅಪೂರ್ವ ಚಾವ್ಡಾ ಮತ್ತು ಎಆರ್ ಡೈರಿಯ (ರಾಜು) ರಾಜಶೇಖರನ್” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತುಪ್ಪ ಪೂರೈಕೆಯ ಪ್ರತಿ ಹಂತದಲ್ಲೂ ಗಂಭೀರ ನಿಯಮ ಉಲ್ಲಂಘನೆಯು ಎಸ್​​ಐಟಿ ತನಿಖೆ ವೇಳೆ ಬಹಿರಂಗವಾಗಿದೆ. ಹೀಗಾಗಿ, ನಾಲ್ವರನ್ನು ಬಂಧಿಸಲಾಗಿದೆ. ವೈಷ್ಣವಿ ಡೈರಿ ಅಧಿಕಾರಿಗಳು ದೇವಸ್ಥಾನಕ್ಕೆ ತುಪ್ಪ ಪೂರೈಸಲು ಎಆರ್ ಡೈರಿ ಹೆಸರಿನಲ್ಲಿ ಟೆಂಡರ್‌ಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ, ಟೆಂಡರ್ ಪ್ರಕ್ರಿಯೆಯನ್ನು ತಿರುಚಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ವೈಷ್ಣವಿ ಡೈರಿಯು ಭೋಲೆ ಬಾಬಾ ಡೈರಿಯಿಂದ ತುಪ್ಪವನ್ನು ಪಡೆಯಲಾಗಿದೆ ಎಂದು ಸುಳ್ಳು ಹೇಳಿದೆ. ಆದರೆ ತಿರುಪತಿ ದೇವಸ್ಥಾನಕ್ಕೆ ಅಗತ್ಯ ತುಪ್ಪದ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯವನ್ನು ಅದು ಹೊಂದಿಲ್ಲ ಎಂಬ ಅಂಶಗಳು ತನಿಖೆ ವೇಳೆ ಗೊತ್ತಾಗಿದೆ.

ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಬಳಸಲಾಗಿದೆ ಎಂಬ ಆರೋಪದ ತನಿಖೆಗಾಗಿ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಕಳೆದ ವರ್ಷ ನವೆಂಬರ್‌ನಲ್ಲಿ ಐವರು ಅಧಿಕಾರಿಗಳ ಸಿಬಿಐ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು. ತಂಡದಲ್ಲಿ ಕೇಂದ್ರ ಸಂಸ್ಥೆಯ ಇಬ್ಬರು ಅಧಿಕಾರಿಗಳು, ಆಂಧ್ರಪ್ರದೇಶದ ಇಬ್ಬರು ಪೊಲೀಸರು ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಓರ್ವ ಅಧಿಕಾರಿ ಇದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು 2024ರ ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ ಹಿಂದಿನ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತದ ಅವಧಿಯಲ್ಲಿ, ತಿರುಪತಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆರೋಪ ಮಾಡಿದ್ದರು. ಆ ಬಳಿಕ ಈ ವಿಚಾರವು ದೇಶಾದ್ಯಂತ ಭಾರಿ ಚರ್ಚೆ, ವಿವಾದಕ್ಕೆ ಕಾರಣವಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments