Homeಕರ್ನಾಟಕಮುಡಾ ಹಗರಣ | ಸಿದ್ದರಾಮಯ್ಯ ವಿರುದ್ಧ ಕಾನೂನು ಹೋರಾಟ: ಪ್ರತಿಪಕ್ಷ ನಾಯಕ ಆರ್.ಅಶೋಕ್

ಮುಡಾ ಹಗರಣ | ಸಿದ್ದರಾಮಯ್ಯ ವಿರುದ್ಧ ಕಾನೂನು ಹೋರಾಟ: ಪ್ರತಿಪಕ್ಷ ನಾಯಕ ಆರ್.ಅಶೋಕ್

ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಲೋಕಾಯುಕ್ತ ಮತ್ತು ಇಡಿ ತನಿಖೆ ನಡೆಯುತ್ತಿದ್ದು, ಸದ್ಯಕ್ಕೆ ಸಿದ್ದರಾಮಯ್ಯನವರಿಗೂ ಸ್ವಲ್ಪ ರಿಲೀಫ್ ಸಿಕ್ಕಿದೆ. ಅಲ್ಲದೇ ಲೂಟಿಯಾಗಿರುವ ರಾಜ್ಯದ ಜನತೆಯ ದುಡ್ಡು ಮತ್ತೆ ಖಜಾನೆಗೆ ವಾಪಸ್ ಬರುತ್ತದೆ ಎಂಬ ವಿಶ್ವಾಸ ಇದೆ. ಹೈಕೋರ್ಟ್ ಆದೇಶವನ್ನು ನಾವು ಒಪ್ಪಲೇಬೇಕಾಗುತ್ತದೆ. ಸಿದ್ದರಾಮಯ್ಯ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರಿಸುತ್ತೇವೆ” ಎಂದು ತಿಳಿಸಿದರು.

“ಕಾಂಗ್ರೆಸ್‌ ಆಡಳಿತದ 20 ತಿಂಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಇದನ್ನು ಕಾಂಗ್ರೆಸ್ ಶಾಸಕರೇ ಒಪ್ಪಿಕೊಂಡಿದ್ದಾರೆ. ರಾಜ್ಯ ಸುಭದ್ರವಾಗಿರಬೇಕಾದರೆ ಕಾನೂನು ಸುವ್ಯವಸ್ಥೆ ಸರಿಯಾಗಿರಬೇಕು. ಆದರೆ ರಾಜ್ಯದಲ್ಲಿ ಬ್ಯಾಂಕ್ ದರೋಡೆಗಳು, ಗೋವುಗಳ ಕೆಚ್ಚಲು ಕೊಯ್ಯುವುದು, ಹೊಟ್ಟೆ ಸೀಳುವುದು, ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತಿವೆ. ಕಾನೂನು ಸುವವ್ಯಸ್ಥೆ ಹದಗೆಟ್ಟು ಹೋಗಿದೆ. ಬೆಳಗಾವಿಯಲ್ಲಿ ಅಷ್ಟು ದೊಡ್ಡ ಅಧಿವೇಶನ ಮಾಡಲು ದುಡ್ಡು ಎಲ್ಲಿಂದ ಬಂತು? ಬ್ಯಾನರ್‌, ಬಸ್‌, ಊಟಕ್ಕೆ ದುಡ್ಡು ಎಲ್ಲಿಂದ? 60 ಪರ್ಸೆಂಟ್ ಕಮಿಷನ್ ಪಡೆದಿರುವುದನ್ನು ಸರ್ಕಾರ ಅಧಿವೇಶನಕ್ಕೆ ಬಳಕೆ ಮಾಡಿದೆ. ಆರು ತಿಂಗಳಿಗೊಮ್ಮೆ ಬಜೆಟ್ ಮಾಡಿ ಮತ್ತೆ ಬೆಲೆ ಏರಿಕೆ ಮಾಡುತ್ತಾರೆ” ಎಂದು ದೂರಿದರು.

“ಬಿಜೆಪಿ ಅವಧಿಯಲ್ಲಿ 25 ಸಾವಿರ ಕೋಟಿಯಷ್ಟು ಸಾಲ ಪಡೆಯಲು ಅವಕಾಶ ಇದ್ದರೂ ಜನರ ಮೇಲೆ ಹೊರೆ ಬರಬಾರದು ಎಂದು ಸಾಲ ತೆಗೆದುಕೊಂಡಿಲ್ಲ. ಆದರೆ ಇವರು ಸಾಲಗಾರರ ರಾಜ್ಯ ಮಾಡಲು ಹೊರಟಿದ್ದಾರೆ. ಹೀಗೆ ಮಾಡಿದರೆ ಕೇರಳದಂತೆ ಭಿಕ್ಷೆ ಬೇಡುವ ಸ್ಥಿತಿ ರಾಜ್ಯಕ್ಕೆ ಬರಲಿದೆ. ಸಿಎಂ ಸಿದ್ದರಾಮಯ್ಯ ನವೆಂಬರ್‌ನಲ್ಲಿ ಸಿಎಂ ಸ್ಥಾನ ಬಿಡಬೇಕಾಗಬಹುದು. ಹಾಗಾಗಿ ಅವರಿಗೂ ಆಸಕ್ತಿ ಇಲ್ಲ. ಆಡಳಿತ ಪಕ್ಷ ಅಧ್ವಾನವಾದರೆ ಅಭಿವೃದ್ಧಿ ಕುಂಠಿತವಾಗುತ್ತದೆ” ಎಂದರು.

“ಪಕ್ಷದ ಆಂತರಿಕ ವಿಚಾರವನ್ನು ನಾಲ್ಕು ಗೋಡೆಗಳ ಮಧ್ಯೆ ಮಾತಾಡಬೇಕು. ನಾವೆಲ್ಲರೂ ಒಟ್ಟಿಗೆ ಹೋರಾಟ ಮಾಡಿದರೆ ಕಾಂಗ್ರೆಸ್ ಸರ್ಕಾರವನ್ನು ಬಗ್ಗು ಬಡಿಯಬಹುದಾಗಿತ್ತು. ಹದಿನೈದು-ಇಪ್ಪತ್ತು ದಿನಗಳಲ್ಲಿ ಇದಕ್ಕೆ ಅಂತಿಮ ತೀರ್ಮಾನವನ್ನು ಕೇಂದ್ರದ ನಾಯಕರು ಕೊಡುತ್ತಾರೆ. ಒಟ್ಟಾಗಿ ಹೋಗಬೇಕು ಎನ್ನುವುದು ನನ್ನ ಅಭಿಪ್ರಾಯ. ಕೆಲವು ಸಲ ಪ್ರಜಾಪ್ರಭುತ್ವದ ಮಾತಿನ ಸ್ವಾತಂತ್ರ್ಯದಲ್ಲಿ ಎಲ್ಲರೂ ಮಾತಾಡಲು ಶುರು ಮಾಡುತ್ತಾರೆ. ಪ್ರಾರಂಭದಲ್ಲೇ ಇದು ಕಡಿಮೆ ಆಗಿರುತ್ತಿದ್ದರೆ ಒಳ್ಳೆಯದಿತ್ತು. ಸರಿ ಪಡಿಸಿಕೊಂಡು ಹೋಗುವುದೇ ದೊಡ್ಡ ಗುಣ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments