Homeಕರ್ನಾಟಕಬಿಜೆಪಿ ಬಿಡಲ್ಲ, ಫೆ.5ರ ನಂತರ ದೆಹಲಿಗೆ ಬರಲು ವರಿಷ್ಠರ ಸೂಚನೆ: ಬಿ ಶ್ರೀರಾಮುಲು

ಬಿಜೆಪಿ ಬಿಡಲ್ಲ, ಫೆ.5ರ ನಂತರ ದೆಹಲಿಗೆ ಬರಲು ವರಿಷ್ಠರ ಸೂಚನೆ: ಬಿ ಶ್ರೀರಾಮುಲು

ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ, ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ಫೆ.5ರ ನಂತರ ದೆಹಲಿ ಬರಲು ವರಿಷ್ಠರು ಹೇಳಿದ್ದಾರೆ. ಸಂವಹನ ಕೊರತೆಯಿಂದ ಕೆಲವು ಗೊಂದಲ ಇದೆ. ವರಿಷ್ಠರು ಅದನ್ನೆಲ್ಲ ಸರಿಪಡಿಸುತ್ತಾರೆ ಎಂಬ ಭರವಸೆ ಇದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕಾನಹೊಸಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಪಕ್ಷದ ವರಿಷ್ಠರು ನಾನು ಪಕ್ಷದಲ್ಲೇ ಇರಬೇಕು ಎಂದಿದ್ದಾರೆ. ಹೀಗಾಗಿ ಪಕ್ಷ ಬಿಡುವ ಮಾತಿಲ್ಲ. ಇನ್ನು ಜನಾರ್ದನ ರೆಡ್ಡಿ ಅವರು ಸಹ ಪಕ್ಷದ ಕಾರ್ಯಕರ್ತರೇ ಹೊರತು ವರಿಷ್ಠರಲ್ಲ, ನಾನು ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ ಎಂದು ಅವರು ಹೇಳಿದ್ದಕ್ಕೆ ಮಹತ್ವ ಕೊಡಬೇಕಿಲ್ಲ” ಎಂದಿದ್ದಾರೆ.

ಪಕ್ಷ ಸಂಘಟನೆ ದೃಷ್ಟಿಯಿಂದ ಗೊಂದಲಗಳು, ಅಸಮಾಧಾನಗಳು ನಮ್ಮಲ್ಲಿ ಇವೆ. ಯತ್ನಾಳ್‌, ರಮೇಶ್ ಜಾರಕಿಹೊಳಿ, ಸುಧಾಕರ್ ಅವರೆಲ್ಲ ಕೆಲವು ವ್ಯಕ್ತಿಗಳ ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು ಪಕ್ಷದ ವಿರುದ್ಧವಲ್ಲ. ರಾಜ್ಯದ ಒಟ್ಟಾರೆ ಬೆಳವಣಿಗೆ ಬಗ್ಗೆ ವರಿಷ್ಠರ ಜೊತೆ ಮಾತನಾಡುವೆ. ಅವರೆಲ್ಲ ಇದ್ದರಷ್ಟೇ ಪಕ್ಷ ಸಂಘಟನೆ ಸಾಧ್ಯ. 2028ರಲ್ಲಿ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ನಾವೆಲ್ಲ ಒಗ್ಗಟ್ಟಿನಿಂದ ಪ್ರಯತ್ನಿಸಲಿದ್ದೇವೆ” ಎಂದು ತಿಳಿಸಿದ್ದಾರೆ.

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿಯಾಗಿದ್ದೇನೆ. ಆದರೆ ಪಕ್ಷದಲ್ಲಿ ಚುನಾವಣೆ ವ್ಯವಸ್ಥೆ ಇದೆ. ಅದರಂತೆಯೇ ಎಲ್ಲವೂ ನಡೆಯುತ್ತದೆ. ಏನಿದ್ದರೂ ವರಿಷ್ಠರ ನಿರ್ಧಾರವೇ ಅಂತಿಮ. ರಾಜ್ಯಸಭಾ ಸದಸ್ಯ ಸ್ಥಾನ ನೀಡಬೇಕು ಎಂದೂ ನಾನು ಕೇಳಿಲ್ಲ, ಅವಕಾಶ ಇದ್ದರೆ ಕೊಡಿ ಎಂದು ಕೇಳಿದ್ದೇನೆ, ಕೊಟ್ಟರೆ ಸಂತೋಷ.
ಪಕ್ಷ ಬಯಸಿದರೆ ಮುಂದೆ ಮುಖ್ಯಮಂತ್ರಿಯಾಗಲು ಸಹ ನಾನು ಸಿದ್ಧ’ ಎಂದು ಹೇಳಿದ್ದಾರೆ.

ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ನಾನು ಭಾವನಾತ್ಮಕವಾಗಿ ಮಾತನಾಡಿರುವೆ ಹೊರತು ಅದು ಖಡಾಖಂಡಿತ ನಿರ್ಧಾರವಲ್ಲ. ಅಖಂಡ ಬಳ್ಳಾರಿಯಲ್ಲಿ ಐದು ಮೀಸಲು ಕ್ಷೇತ್ರಗಳಿದ್ದು, ಎಲ್ಲಾ ಕಡೆಯಿಂದಲೂ ನನಗೆ ಆಹ್ವಾನ ಇದೆ. ಅದರೆ ಮುಂದಿನ ಮೂರು ವರ್ಷ ಪಕ್ಷ ಸಂಘಟನೆ, ಬಲಪಡಿಸುವುದೇ ನನ್ನ ಗುರಿ. ಅಂತಿಮವಾಗಿ ಟಿಕೆಟ್ ಯಾರಿಗೆ ಕೊಡಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ” ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments