ನಕ್ಸಲ್ ಚಳವಳಿಯಲ್ಲಿ ಸಕ್ರಿಯವಾಗಿದ್ದ ಕೋಟೆಹೊಂಡ ರವೀಂದ್ರ ಶನಿವಾರ (ಫೆ.1) ಮುಖ್ಯವಾಹಿನಿಗೆ ಬರಲಿದ್ದಾರೆ.
ಶೃಂಗೇರಿ ತಾಲ್ಲೂಕಿನ ಕಿಗ್ಗಾ ಗ್ರಾಮದ ಕೋಟೆಹೊಂಡ ರವೀಂದ್ರ ಕಾಡಿನಲ್ಲೇ ಉಳಿದಿದ್ದ ನಕ್ಸಲ್ ಚಳವಳಿಯ ಕೊನೆಯ ವ್ಯಕ್ತಿಯಾಗಿದ್ದರು.
ಲತಾ ಮುಂಡಗಾರು, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ತೂರು, ಮಾರಪ್ಪ ಅರೋಲಿ, ಕೆ.ವಸಂತ(ತಮಿಳುನಾಡು), ಟಿ.ಎನ್.ಜಿಷಾ(ಕೇರಳ) ಒಳಗೊಂಡ ತಂಡ ಜ.8ರಂದು ಮುಖ್ಯವಾಹಿನಿಗೆ ಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಎಲ್ಲರನ್ನು ಸ್ವಾಗತಿಸಲಾಗಿತ್ತು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ತಂಡದಿಂದ ಬೇರ್ಪಟ್ಟಿದ್ದ ಕೋಟೆಹೊಂಡ ರವೀಂದ್ರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವರನ್ನು ಸಂಪರ್ಕಿಸುವ ಪ್ರಯತ್ನವನ್ನು ಶಾಂತಿಗಾಗಿ ನಾಗರಿಕ ವೇದಿಕೆ ಮತ್ತು ನಕ್ಸಲ್ ಶರಣಾಗತಿ ಸಮಿತಿ ಮಾಡಿದೆ.
ಅವರನ್ನು ಮುಖ್ಯವಾಹಿನಿಗೆ ಬರಮಾಡಿಕೊಳ್ಳಲು ಚಿಕ್ಕಮಗಳೂರು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ. ಶನಿವಾರ ಮಧ್ಯಾಹ್ನ ರವೀಂದ್ರ ಅವರು ಚಿಕ್ಕಮಗಳೂರಿನಲ್ಲಿ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಸದಸ್ಯರು ಹಾಗೂ ಶಾಂತಿಗಾಗಿ ನಾಗರಿಕರ ವೇದಿಕೆಯ ಸದಸ್ಯರ ಸಮ್ಮುಖದಲ್ಲಿ ಇಂದು 12 ಗಂಟೆಗೆ ಮುಖ್ಯವಾಹಿನಿಗೆ ಬರಲಿದ್ದಾರೆ.