ನಿರ್ಜನ ಪ್ರದೇಶವೊಂದರಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1 ಕೋಟಿ ರೂ. ಪತ್ತೆಯಾದ ಘಟನೆ ಕಾರವಾರ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ರಾಮನಗುಳಿ ಬಳಿ ನಡೆದಿದೆ.
ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ನಿರ್ಜನ ಪ್ರದೇಶದಲ್ಲಿ ನಿನ್ನೆ ಸಂಜೆ ಅಪರಿಚಿತರು ಕಾರೊಂದನ್ನು ನಿಲ್ಲಿಸಿ ಹೋಗಿದ್ದು, ಯಾರೂ ಸಹ ಪತ್ತೆಯಿರಲಿಲ್ಲ. ಇದರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಹೆದ್ದಾರಿ ಗಸ್ತು ಸಿಬ್ಬಂದಿ ಕಾರನ್ನು ಪರಿಶೀಲನೆ ಮಾಡಿದ್ದಾರೆ.
ಬೆಂಗಳೂರು ನೋಂದಣಿ ಹೊಂದಿರುವ ಹುಂಡೈ ಕ್ರೆಟಾ ಕಾರು ಇದಾಗಿದೆ. ಕಾರಿನ ಬಾಗಿಲು ತೆಗೆದು ಒಳಗೆ ಪರಿಶೀಲಿಸಿದಾಗ 1 ಕೋಟಿ ರೂಪಾಯಿ ಇರುವುದು ಕಂಡುಬಂದಿದೆ. ಕಾರಿನಲ್ಲಿ ಬೇರೆ ಯಾವುದೇ ದಾಖಲೆ ಪತ್ರಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಹೆದ್ದಾರಿ ಗಸ್ತು ಸಿಬ್ಬಂದಿ ಹಣದ ಸಹಿತ ಕಾರನ್ನು ಅಂಕೋಲಾ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾರೆ. ಸದ್ಯ ಕಾರಿನ ಮಾಲೀಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಕಾರು ಹಾಗೂ ಅದರಲ್ಲಿದ್ದ ಹಣ ಯಾರಿಗೆ ಸೇರಿದ್ದು, ನಿರ್ಜನ ಪ್ರದೇಶದಲ್ಲಿ ಕಾರನ್ನು ತಂದು ನಿಲ್ಲಿಸಿದ್ದು ಏಕೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.