ಇವರೊಬ್ಬ ಗಟ್ಟಿ ಕುಳ ಇವರನ್ನು ಅಪಹರಿಸಿದರೆ ಬಾರಿ ಮೊತ್ತ ಹಾಗೂ ಚಿನ್ನದ ಗಟ್ಟಿ ಸಿಗಲಿದೆ ಎಂದು ಭಾವಿಸಿ ವ್ಯಕ್ತಿಯನ್ನು ಅಪಹರಿಸಿದ ದುಷ್ಕರ್ಮಿಗಳು ಅವರಿಂದ ಹಣ ಸಿಗುವುದಿಲ್ಲ ಎಂದು ತಿಳಿದ ಮೇಲೆ ರಾತ್ರಿ ಹೊತ್ತಲ್ಲಿ ಅವರೇ 300 ರೂಪಾಯಿ ಕೊಟ್ಟು ಅಪಹರಣವಾದ ವ್ಯಕ್ತಿಯನ್ನು ಬಿಡುಗಡೆ ಮಾಡಿದ್ದಾರೆ. ಇದರ ನಂತರ ಪೊಲೀಸರಿಂದ ಗುಂಡೇಟು ತಿಂದಿದ್ದಾರೆ.
ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ವೈದ್ಯ ಸುನಿಲ್ ಕುಮಾರ್ ಅವರು ಜನವರಿ 25ರ ಬೆಳಿಗ್ಗೆ ಆರು ಗಂಟೆ ಸುಮಾರಿನಲ್ಲಿ ಬಳ್ಳಾರಿ ನಗರದ ಸತ್ಯನಾರಾಯಣಪೇಟೆ ಬಳಿ ವಾಯು ವಿಹಾರ ನಡೆಸುತ್ತಿದ್ದ ವೇಳೆ ಅವರನ್ನು ಅಪಹರಿಸಿದ್ದ ಅಪಹರಣಕಾರರು ಅವರ ಸೋದರನಿಗೆ ಕರೆ ಮಾಡಿ ನಿಮ್ಮ ಅಣ್ಣನನ್ನು ಬಿಡುಗಡೆ ಮಾಡಬೇಕಾದರೆ 3 ಕೋಟಿ ಹಣ ಹಾಗೂ ಮೂರು ಕಿಲೋ ಚಿನ್ನ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಆನಂತರ ತಮ್ಮ ಕಾರಿನಲ್ಲಿ ಅಪಹೃತ ವ್ಯಕ್ತಿಯನ್ನು ಚಿತ್ರದುರ್ಗ, ದಾವಣಗೆರೆ, ಕೊಪ್ಪಳ ಸುತ್ತಮುತ್ತ ಸುತ್ತಾಡಿಸಿದ್ದಾರೆ. ಅಷ್ಟೇ ಅಲ್ಲ ಅವರ ಜೇಬುಗಳನ್ನು ತಡಕಾಡಿದ್ದಾರೆ ಆದರೆ ಎಲ್ಲಿಯೂ ಅವರಿಗೆ ಒಂದು ರೂಪಾಯಿ ಸಿಕ್ಕಿಲ್ಲ. ಆನಂತರ ಅವರ ಸೋದರನಿಗೆ ಕರೆ ಮಾಡಿದರು ಕೂಡ ಹಣ ಕೊಟ್ಟು ಬಿಡಿಸಿಕೊಂಡು ಹೋಗುವ ಬಗ್ಗೆ ಯಾವುದೇ ಭರವಸೆ ಸಿಕ್ಕಿಲ್ಲ.
ಇದರಿಂದ ಬೇಸರಗೊಂಡ ಅವರು ಅಂತಿಮವಾಗಿ ಡಾ. ಸುನಿಲ್ ಕುಮಾರ್ ಅವರನ್ನು ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಬಳಿ ಬಿಟ್ಟು 300 ರೂ. ಕೊಟ್ಟು ಬಸ್ಸಿನಲ್ಲಿ ಹೋಗುವಂತೆ ಸೂಚಿಸಿ ಅಲ್ಲಿಂದ ತೆರಳಿದ್ದಾರೆ.
ಇದಾದ ನಂತರ ಡಾ. ಸುನಿಲ್ ಕುಮಾರ್ ಅವರು ಪೊಲೀಸರನ್ನು ಭೇಟಿ ಮಾಡಿ ತಮ್ಮ ಅಪಹರಣ ಹಾಗೂ ಅಪಹರಣಕಾರರ ಕುರಿತಂತೆ ಮಾಹಿತಿ ನೀಡಿದ್ದಾರೆ. ಇದನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಬಳ್ಳಾರಿ ಪೊಲೀಸರು ಬಳ್ಳಾರಿ ನಗರ ವಾಸಿಗಳಾದ ಶ್ರೀಕಾಂತ್ (44), ರಾಕೇಶ್(44), ತರುಣ್(22), ಅರುಣ್(25), ಭೋಜರಾಜ್(25), ಸಾಯಿಕುಮಾರ್(21) ಮತ್ತು ಪುರುಷೋತ್ತಮ್ ಎಂಬುವರನ್ನು ಅಪಹರಣ ಆರೋಪದಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ಇಂದು ಬೆಳಿಗ್ಗೆ ಸ್ಥಳ ಮಹಜರು ಮತ್ತು ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲು ಕರೆದುಕೊಂಡು ಹೋಗುತ್ತಿದ್ದ ವೇಳೆ ಶ್ರೀಕಾಂತ್ ಎಂಬಾತ ಗಾಂಧಿನಗರ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಕಾಳಿಂಗ ಅವರ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಸಿಂಧೂರ್ ಅವರು ಶ್ರೀಕಾಂತ್ ಕಾಲಿಗೆ ಗುಂಡು ಹೊಡೆದಿದ್ದಾರೆ. ಗಾಯಗೊಂಡ ಶ್ರೀಕಾಂತನನ್ನು ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ( ವಿಮ್ಸ್)ಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.