Homeಕರ್ನಾಟಕನೀರಿನ ದರ ಹೆಚ್ಚಳ‌ | ಬಡವರು ಲೀಟರ್ ನೀರಿಗೆ ಒಂದು ಪೈಸೆಯಾದರೂ ನೀಡಲಿ: ಡಿ ಕೆ...

ನೀರಿನ ದರ ಹೆಚ್ಚಳ‌ | ಬಡವರು ಲೀಟರ್ ನೀರಿಗೆ ಒಂದು ಪೈಸೆಯಾದರೂ ನೀಡಲಿ: ಡಿ ಕೆ ಶಿವಕುಮಾರ್

ಕುಡಿಯುವ ನೀರಿನ ಬೆಲೆ ಹೆಚ್ಚಳದ ಬಗ್ಗೆ ವರದಿ ನೀಡಲು ಸೂಚನೆ ನೀಡಲಾಗಿದೆ. ವರದಿ ನೀಡಿದ ತಕ್ಷಣ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ನೀರಿನ ಅಕ್ರಮ ಸಂಪರ್ಕಗಳ ಸಕ್ರಮೀಕರಣ, ನೀರಿನ ಸಂಪರ್ಕ ಹಾಗೂ ಬಳಕೆಯ ನಿಖರವಾದ ಲೆಕ್ಕವನ್ನು ಪಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಬೆಂಗಳೂರಿನ ಕಾವೇರಿ ಭವನದಲ್ಲಿ ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್ ಬಿ, ಬಿಎಂ ಆರ್ ಡಿ ಎ ಅಧಿಕಾರಿಗಳ ಜತೆ ಮಂಗಳವಾರ ಸಭೆ ನಡೆಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ. ಶಿವಕುಮಾರ್ ಅವರು ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

“2014ರಿಂದ ಇಲ್ಲಿಯ ತನಕ ಅಂದರೆ 11 ವರ್ಷಗಳಿಂದ ನಗರದಲ್ಲಿ ನೀರಿನ ಬಿಲ್ ಅನ್ನು ಹೆಚ್ಚಳ ಮಾಡಿಲ್ಲ. ಈ ಕಾರಣಕ್ಕೆ ಬಿಡ್ಬ್ಯೂಎಸ್ಎಸ್ ಬಿಗೆ ವರ್ಷಕ್ಕೆ 1 ಸಾವಿರ ಕೋಟಿ ನಷ್ಟವಾಗುತ್ತಿದೆ. ವಿದ್ಯುತ್ ಬಿಲ್ ಈ ಹಿಂದೆ 35 ಕೋಟಿಯಾಗುತ್ತಿತ್ತು. ಈ ಬಾರಿ 75 ಕೋಟಿಯಾಗಿದೆ. ಇತರೇ ಸೇವೆಗಳು, ಮಾನವ ಸಂಪನ್ಮೂಲ ವೆಚ್ಚ ಸೇರಿದಂತೆ ತಿಂಗಳಿಗೆ 85 ಕೋಟಿ ಹಣ ನಷ್ಟವಾಗುತ್ತಿದೆ” ಎಂದರು.

ಬೆಲೆ ಹೆಚ್ಚಳದ ಅನಿವಾರ್ಯತೆ ಎದುರಾಗಿದೆ

“ನೀರಿನ ಬಿಲ್ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕಾರಣಕ್ಕೆ ನಗರದ ಎಲ್ಲಾ ಶಾಸಕರ ಬಳಿ ಹೋಗಿ ಮಂಡಳಿಯವರು ಚರ್ಚೆ ನಡೆಸಿದ್ದಾರೆ. ಅಲ್ಲದೇ ನೀರಿನ ಜಾಲ ವಿಸ್ತರಣೆ ಮಾಡುವ ಸಲುವಾಗಿ ಅನೇಕ ಬ್ಯಾಂಕ್ ಗಳ ಬಳಿ ಸಾಲ ಕೇಳಲೂ ಆಗುತ್ತಿಲ್ಲ. ಬ್ಯಾಂಕ್ ಅವರು ಮಂಡಳಿ ನಷ್ಟದಲ್ಲಿದೆ ನಾವು ಸಹಾಯ ಮಾಡಲು ಆಗುವುದಿಲ್ಲ ಎನ್ನುತ್ತಿದ್ದಾರೆ. ನಮಗೆ ಹಣ ನೀಡುತ್ತಿರುವ ಜೈಕಾ ಸಂಸ್ಥೆ ಸೇರಿದಂತೆ ಹಲವಾರು ಸಂಸ್ಥೆಗಳು ನೆರವು ಬೇಕು ಎಂದಾದರೆ ಹಣ ವಾಪಸಾತಿಯ ಬಗ್ಗೆ ಭರವಸೆ ನೀಡಿ ಎಂದು ತಿಳಿಸುತ್ತಿದ್ದಾರೆ” ಎಂದರು.

ಬೇಸಿಗೆಗೆ ಈಗಿನಿಂದಲೇ ತಯಾರಿ

“ಮುಂಬರುವ ಬೇಸಿಗೆ ವೇಳೆಗೆ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗಬಾರದು ಎನ್ನುವ ಸೂಚನೆ ನೀಡಲಾಗಿದೆ. ಜೊತೆಗೆ ಅಂತರ್ಜಲ ಹೆಚ್ಚಳಕ್ಕೆ ಯಾವುದಾದರೂ ಕೆರೆ ತುಂಬಿಸಬೇಕಿದ್ದರೆ ಈ ಕುರಿತು ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ತಿಳಿಸಿದರು.

15 ಸಾವಿರ ನೂತನ ಸಂಪರ್ಕ

“ಕಾವೇರಿ 5 ನೇ ಹಂತದ ಕುಡಿಯುವ ನೀರಿನ ಯೋಜನೆಯಡಿ ಇದುವರೆಗೂ ಸುಮಾರು 15 ಸಾವಿರ ಹೊಸ ಸಂಪರ್ಕಗಳನ್ನು ನೀಡಲಾಗಿದೆ. ಇನ್ನೂ 20 ಸಾವಿರದಷ್ಟು ನೀರಿನ ಸಂಪರ್ಕಗಳನ್ನು ನೀಡಬೇಕಾಗಿದೆ. ಅಲ್ಲದೇ ಸಾಕಷ್ಟು ವಸತಿ ಸಮುಚ್ಚಯಗಳು ನೀರಿನ ಸಂಪರ್ಕಗಳನ್ನು ತೆಗೆದುಕೊಳ್ಳುತ್ತಿಲ್ಲ. ಅವರೆಲ್ಲಾ ಕಡ್ಡಾಯವಾಗಿ ಸಂಪರ್ಕ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ” ಎಂದರು.

ನೀರಿನ ದರವನ್ನು ಎಷ್ಟು ಏರಿಕೆ ಮಾಡಲಾಗುವುದು ಎಂದು ಕೇಳಿದಾಗ, “ಮಂಡಳಿಗೆ 1 ಸಾವಿರ ಕೋಟಿ ನಷ್ಟವಾಗುತ್ತಿದೆ. ಚರ್ಚೆಯ ನಂತರ ಬೆಲೆ ಏರಿಕೆ ಬಗ್ಗೆ ತಿಳಿಸಲಾಗುವುದು. ಇದರ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಬಡವರು ಹೆಚ್ಚು ಹಣ ನೀಡಲು ಆಗದಿದ್ದರೆ ಒಂದು ಲೀಟರ್ ಗೆ ಒಂದು ಪೈಸೆಯಾದರೂ ನೀಡಲಿ ಎಂಬುದು ನಮ್ಮ ಅಭಿಲಾಷೆ. ಇದರಿಂದ ನೀರಿನ ಬಳಕೆಯ ಲೆಕ್ಕ ದೊರೆಯಲಿ ಎನ್ನುವುದು ಇದರ ಉದ್ದೇಶ” ಎಂದರು.

ವಿದ್ಯುತ್ ಬೆಲೆ ಕಡಿಮೆ ಮಾಡಿದ್ದೇವೆ

ಮೆಟ್ರೋ ಟಿಕೆಟ್ ಬೆಲೆ ಏರಿಕೆ ಬಗ್ಗೆ ಚರ್ಚೆಯಾಗುತ್ತಿದೆ ಜೊತೆಗೆ ನೀರಿನ ಬೆಲೆ ಏರಿಕೆಯಾದರೆ ಜನರಿಗೆ ಹೊರೆಯಾಗುವುದಿಲ್ಲವೇ ಎಂದು ಕೇಳಿದಾಗ, “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ದರವನ್ನು ಕಡಿಮೆ ಮಾಡಿದೆ. ಬೆಲೆ ಏರಿಕೆಗೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಇದೆಲ್ಲ ಆಗುತ್ತಿದೆ. ನೌಕರರಿಗೆ ಶೇ. 10 ರಷ್ಟು ಸಂಬಳ ಏರಿಕೆ, ಡಿಎ ಏರಿಕೆ ಮಾಡಲಾಗುತ್ತಿದೆಯಲ್ಲವೇ? ಏನೂ ಇಲ್ಲದೇ ಇನ್ನೆಷ್ಟು ದಿನ ಕಡಿಮೆ ಬೆಲೆಗೆ ನೀಡಲು ಆಗುತ್ತದೆ. ಮಂಡಳಿಯಲ್ಲಿ ನೌಕರರು ಸಂಬಳ ನೀಡಿಲ್ಲ ಎಂದು ಜಗಳ ಮಾಡುತ್ತಿದ್ದಾರೆ” ಎಂದರು.

ಫೆಬ್ರವರಿ ಅಂತ್ಯಕ್ಕೆ ಟನಲ್ ರಸ್ತೆ ಟೆಂಡರ್

“ಸುರಂಗ ರಸ್ತೆ ನಿರ್ಮಾಣಕ್ಕಾಗಿ ರೂ. 17,780 ಕೋಟಿ ಮೊತ್ತದ ಟೆಂಡರ್ ಅನ್ನು ಫೆಬ್ರವರಿ ಅತ್ಯಂದ ವೇಳೆಗೆ ಕರೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜೊತೆಗೆ ಮೂರುವರೆ ವರ್ಷಗಳ ಒಳಗಾಗಿ ಮುಗಿಯಬೇಕು ಎಂದು ತಿಳಿಸಿದ್ದೇನೆ. ಎರಡು ಹಂತದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು. ಬಿಬಿಎಂಪಿಯಿಂದಲೂ ಹಣ ನೀಡಲಾಗುವುದು. ಸರ್ಕಾರದಿಂದಲೂ ಅನುದಾನ ನೀಡಲಾಗುವುದು. ಪವರ್ ಫೈನಾನ್ಸ್ ಕಾರ್ಪೋರೇಷನ್, ಹುಡ್ಕೋ ಸೇರಿದಂತೆ ಒಂದಷ್ಟು ಬ್ಯಾಂಕ್ ಗಳು ಸಾಲ ನೀಡಲು ಮುಂದೆ ಬಂದಿವೆ. ಇದಕ್ಕೂ ಹರಾಜು ಪ್ರಕ್ರಿಯೆ ಕರೆಯಲಾಗಿದೆ. ಯಾರು ಕಡಿಮೆ ಬಡ್ಡಿದರಕ್ಕೆ ಹಣ ನೀಡುತ್ತಾರೋ ಅವರಿಗೆ ಅವಕಾಶ ನೀಡಲಾಗುವುದು” ಎಂದು ಹೇಳಿದರು.

ಟನಲ್ ರಸ್ತೆ ಬೇಡ ಎಂದು ಸಂಸದ ಪಿ.ಸಿ.ಮೋಹನ್ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “ಇದರಿಂದ ಯಾರ ಭೂಮಿಯೂ ಹೋಗುವುದಿಲ್ಲ. ಭೂಮಿಯ ಕೆಳಗೆ ಹೋಗುತ್ತದೆ” ಎಂದರು. ಅರಮನೆ ಮೈದಾನದಲ್ಲಿ ಸುರಂಗ ರಸ್ತೆ ಬರುತ್ತದೆಯೇ ಎಂದು ಮರು ಪ್ರಶ್ನಿಸಿದಾಗ, “ಎಲ್ಲಿ ಬಂದರೂ ಭೂಮಿಯ ಒಳಗಡೆ ಬರುತ್ತದೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments