Homeಕರ್ನಾಟಕವಿಧಾನಸೌಧದಲ್ಲಿ ಭುವನೇಶ್ವರಿಯ ಪುತ್ಥಳಿ ಅನಾವರಣ

ವಿಧಾನಸೌಧದಲ್ಲಿ ಭುವನೇಶ್ವರಿಯ ಪುತ್ಥಳಿ ಅನಾವರಣ

ನಾವು ಎಲ್ಲ ಭಾಷೆಗಳನ್ನು ಪ್ರೀತಿಸಬೇಕು. ಕನ್ನಡವನ್ನು ಮಾತ್ರ ಬಳಸಬೇಕು, ಬೆಳೆಸಬೇಕು, ಬೆಳಗಬೇಕು ಎಂದು ಸಿ.ಎಂ ಸಿದ್ದರಾಮಯ್ಯ ಅವರು ಕರೆ ನೀಡಿದರು.

ವಿಧಾನಸೌಧದ ಆವರಣದಲ್ಲಿ ಸೋಮವಾರ (ಜ.27) ತಾಯಿ ಭುವನೇಶ್ವರಿಯ ವೈಭವದ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿ, “ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಎಂದು ನಾಮಕರಣ ಮಾಡಿದರು. 2023 ಕ್ಕೆ ಈ ನಾಮಕರಣ ಆಗಿ 50 ವರ್ಷ ತುಂಬಿದರೂ ಆಗಿನ ಬಿಜೆಪಿ ಸರ್ಕಾರ ಈ ಸುವರ್ಣೋತ್ಸವವನ್ನು ಬೇಕಂತಲೇ ಕೈಬಿಟ್ಟರು. ಆದರೆ ನಾವು ಅಧಿಕಾರಕ್ಕೆ ಬಂದು ಒಂದು ವರ್ಷ ಲೇಟಾದರೂ ಕರ್ನಾಟಕದ ಸುವರ್ಣೋತ್ಸವವನ್ನು ಆರಂಭಿಸಿ ಇಡೀ ವರ್ಷ ಆಚರಿಸಲು ನಿರ್ಧರಿಸಿದೆವು. ಕನ್ನಡ ಭಾಷೆ, ಸಂಸ್ಕೃತಿ ವಿಚಾರದಲ್ಲಿ ಇದು ನಮ್ಮ ಬದ್ಧತೆ” ಎಂದು ಹೇಳಿದರು.

“ಕನ್ನಡ ಭಾಷೆ, ಸಂಸ್ಕೃತಿ, ಕಲೆಯನ್ನು ರಾಜ್ಯದ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು. ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕರ್ನಾಟಕ ಎನ್ನುವುದು ನಮ್ಮ ನಿಮ್ಮೆಲ್ಲರ ಅಭಿಮಾನವಾಗವಾಗಬೇಕು. ಆಗ ಮಾತ್ರ ಕನ್ನಡ ಸಾರ್ವಭೌಮ‌ಭಾಷೆಯಾಗುತ್ತದೆ. ನಾವು ಎಲ್ಲಾ ಭಾಷೆಗಳನ್ನು ಪ್ರೀತಿಸಬೇಕು. ಕನ್ನಡವನ್ನು ಬಳಸಬೇಕು, ಬೆಳೆಸಬೇಕು, ಬೆಳಗಬೇಕು. ನಾವು ನಮ್ಮ ಸಹೋದರ ಮತ್ತು ಇತರೆ ಭಾಷಿಕರ ಜೊತೆ ಕನ್ನಡದಲ್ಲಿ ಮಾತನಡುವ, ವ್ಯವಹರಿಸುವ ಸಂಸ್ಕೃತಿಯನ್ನು ಪಾಲಿಸಬೇಕು” ಎಂದು ಕರೆ ನೀಡಿದರು.

“ಇತರೆ ಭಾಷೆಯಲ್ಲಿ ತಪ್ಪು ತಪ್ಪಾಗಿ ಮಾತನಾಡುವುದಕ್ಕಿಂತ ನಮ್ಮದೇ ಭಾಷೆಯಲ್ಲಿ ಮಾತಾಡಬೇಕು. ಅಕ್ಕ ಪಕ್ಕದ ಎಲ್ಲಾ ರಾಜ್ಯಗಳಲ್ಲೂ ಆಯಾ ರಾಜ್ಯದ ಜನರಾಡುವ ಭಾಷೆಯೇ ಸಾರ್ವಭೌಮ. ನಮ್ಮಲ್ಲೂ ಇದನ್ನೇ ಆಚರಿಸಬೇಕು. ಒಂದು ಭಾಷೆ ಮಾತನಾಡುವ ಜನ ಒಂದು ಆಡಳಿತದ ಸೂರಿನಡಿ ಬರಬೇಕು ಎನ್ನುವುದು ಕನ್ನಡ ಏಕೀಕರಣ ಚಳವಳಿಯ ಆಶಯವಾಗಿತ್ತು. ಈ ಆಶಯ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಕನ್ನಡ ಓದುವುದನ್ನು, ಬರೆಯುವುದನ್ನು ಹೆಚ್ಚೆಚ್ಚು ಕಲಿಯಬೇಕು, ಕಲಿಸಬೇಕು” ಎಂದರು.

ಕನ್ನಡಪರ ಹೋರಾಟಗಾರರ ಎಲ್ಲ ಕೇಸ್ ವಾಪಸ್: ಸಿಎಂ ಸಿದ್ದರಾಮಯ್ಯ ಘೋಷಣೆ

ಕನ್ನಡಪರ ಹೋರಾಟಗಾರರ ಎಲ್ಲ ಕೇಸ್ ವಾಪಸ್ ಪಡೆಯಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಿ.ಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರು.

ಎಲ್ಲ ಸಂಸ್ಥೆಗಳಲ್ಲೂ ಕನ್ನಡ ಬಾವುಟ ಹಾರಾಟ ಕಡ್ಡಾಯ: ಡಿಸಿಎಂ ಡಿ.ಕೆ. ಶಿವಕುಮಾರ್

ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲಾ ಸಂಘ ಸಂಸ್ಥೆ (ಸರ್ಕಾರಿ ಹಾಗೂ ಖಾಸಗಿ) ಗಳಲ್ಲಿ ಕನ್ನಡ ಧ್ವಜಾರೋಹಣ ಮಾಡುವುದನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

“ನಮ್ಮ ಮಾತೃಭಾಷೆ, ಈ ನೆಲ, ಜಲ ಕಾಪಾಡಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಬೆಂಗಳೂರಿನಲ್ಲಿ 107 ಭಾಷೆ ಮಾತನಾಡುವ ಜನರಿದ್ದಾರೆ. ಕಳೆದ ವರ್ಷ ಎಲ್ಲಾ ಸಂಘ ಸಂಸ್ಥೆಗಳಲ್ಲೂ ನವೆಂಬರ್ 1 ರಂದು ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕನ್ನಡದ ಧ್ವಜ ಹಾರಿಸುವಂತೆ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದೆ. ನಾನು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ, ಆದರೆ ಮುಂದಿನ ದಿನಗಳಲ್ಲಿ ಇದನ್ನು ಕಡ್ಡಾಯ ಮಾಡುವ ಆದೇಶವನ್ನು ಹೊರಡಿಸಲಾಗುವುದು. ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಅಥವಾ ಪಾಲಿಕೆ ವತಿಯಿಂದ ಎಲ್ಲಾ ಸಂಸ್ಥೆಗಳಿಗೂ ಕನ್ನಡ ಬಾವುಟ ಪೂರೈಸುವ ಕೆಲಸ ಮಾಡುತ್ತೇವೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಕನ್ನಡರಾಜ್ಯೋತ್ಸವದ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವಂತೆ ಸೂಚಿಸಲಾಗುವುದು. ಆಮೂಲಕ ಸಣ್ಣ ವಯಸ್ಸಿನಿಂದಲೇ ಮಕ್ಕಳಲ್ಲಿ ಕನ್ನಡದ ವೈಭವವನ್ನು ಬಿತ್ತುವ ಕೆಲಸ ಮಾಡಲಾಗುವುದು” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments