ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ರಾಜ್ಯ ಸರ್ಕಾರ ಕ್ವಿಂಟಾಲ್‌ಗೆ ಹೆಚ್ಚುವರಿ 450 ರೂ.ನೀಡಲು ನಿರ್ಧರಿಸಿದ್ದು, ಈ ಉದ್ದೇಶಕ್ಕೆ 140 ಕೋಟಿ ರೂ. ಒದಗಿಸಲಾಗುವುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಘೋಷಿಸಿದ್ದಾರೆ.
ವಿಜಯಪುರ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರೊಂದಿಗೆ ಅವರ ಬೇಡಿಕೆಗಳ ಬಗ್ಗೆ ಚರ್ಚಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ ಸಚಿವರು, ಒಟ್ಟು ಪ್ರತಿ ಕ್ರಿಂಟಾಲ್‌ಗೆ ಎಂಟು ಸಾವಿರ ರೂ. ಬೆಂಬಲ ಬೆಲೆ ನೀಡಲಾಗುವುದು ಎಂದು ಹೇಳಿದರು.
“ಕೇಂದ್ರ ಸರ್ಕಾರದ ನಫೆಡ್ ಖರೀದಿ ಏಜನ್ಸಿಯಾಗಿದ್ದು, ದಾಖಲೆಗಳನ್ನು ಸಕಾಲಕ್ಕೆ ಒದಗಿಸದ ಕಾರಣ ಖರೀದಿ ಪ್ರಕ್ರಿಯೆ ವಿಳಂಬವಾಗಿದೆ. ರಾಜ್ಯಾದ್ಯಂತ 400ಕ್ಕೂ ಅಧಿಕ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ತೊಗರಿ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ” ಎಂದು ತಿಳಿಸಿದರು.
“ಇದೇ ಮೊದಲ ಬಾರಿಗೆ 8,000 ರೂ. ಧಾರಣಿಯಲ್ಲಿ ತೊಗರಿ ಖರೀದಿ ಮಾಡಲಾಗುತ್ತಿದೆ. ಇದುವರೆಗೆ 5,800 ರೂ. ಧಾರಣಿಯಲ್ಲಿ ಖರೀದಿ ಮಾಡಲಾಗುತ್ತಿತ್ತು. ಬೀದರ್ ಜಿಲ್ಲೆಯಿಂದ ಚಿತ್ರದುರ್ಗ ಜಿಲ್ಲೆಯವರೆಗೆ ತೊಗರಿ ಬೆಳೆಯಲಾಗುತ್ತಿದ್ದು, ರೈತರು ಬೆಂಬಲ ಬೆಲೆ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ರೈತರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿ ಕ್ವಿಂಟಾಲ್‌ಗೆ 450 ರೂ. ಹೆಚ್ಚುವರಿ ಕೊಡುವ ನಿರ್ಧಾರ ಕೈಗೊಂಡಿದೆ” ಎಂದರು.
ಆಂಧ್ರದ ಜೋಳಕ್ಕೆ ತಡೆ
“ಆಂಧ್ರಪ್ರದೇಶದ ಹೈಬ್ರಿಡ್ ಜೋಳವನ್ನು ರಾಜ್ಯದ ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿರುವುದು ಗಮನಕ್ಕೆ ಬಂದಿದ್ದು, ಆಂಧ್ರದ ಜೋಳಕ್ಕೆ ಕಡಿವಾಣ ಹಾಕಲಾಗುವುದು. ಹೈಬ್ರಿಡ್ ಜೋಳಕ್ಕೆ 3,370 ರೂ ಹಾಗೂ ಮಾಲದಂಡಿ ಜೋಳಕ್ಕೆ 3,400 ರೂ. ಬೆಂಬಲ ಬೆಲೆ ಘೋಷಣೆ ಮಾಡಲಾಗಿದ್ದು, ಒಟ್ಟು ಐದು ಲಕ್ಷ ಕ್ವಿಂಟಾಲ್ ಖರೀದಿ ಮಾಡಲಾಗುವುದು. ಇದುವರೆಗೆ ಕೆಲವೇ ಕೆಲವು ಜಿಲ್ಲೆಗಳ ರೈತರು ಮಾತ್ರ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಾರಿ ಜೋಳ ಬೆಳೆಯುವ ಎಲ್ಲ ಜಿಲ್ಲೆಗಳಿಗೂ ಖರೀದಿ ಪ್ರಮಾಣವನ್ನು ಹಂಚಿಕೆ ಮಾಡಲಾಗುವುದು” ಎಂದು ವಿವರಿಸಿದರು.
“ಕಳಪೆ ಬಿತ್ತನೆ ಬೀಜ ಮತ್ತು ಕೀಟನಾಶಕ ಮಾರಾಟದ ದೂರುಗಳು ಹೆಚ್ಚಾಗಿದ್ದು, ಅಂತಹವರಿಗೆ ಶಿಕ್ಷೆ ಕೊಡಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ” ಎಂದರು.