ದಕ್ಷಿಣ ಭಾರತದ ಕುಂಭಮೇಳ ಎಂದೇ ಕರೆಯುವ ಕೊಪ್ಪಳದ ಗವಿಮಠದ ಜಾತ್ರಾ ಮಹೋತ್ಸವ ಸಂಭ್ರಮ, ಸಡಗರ ಹಾಗೂ ಭಕ್ತಿಭಾವದಿಂದ ಸಂಪನ್ನಗೊಂಡಿದೆ.
ಶುಕ್ರವಾರ (ಜ.17) ಸಂಜೆ ನಡೆದ ಜಾತ್ರೆಯ ಸಮಾರೋಪ ಸಮಾರಂಭದಲ್ಲಿ ಗವಿಮಠದ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಭಕ್ತರ ಮುಂದೆ ಭಾವುಕರಾಗಿ, ಮೂರು ಮನವಿಗಳನ್ನು ಮುಂದಿಟ್ಟರು.
“ಭಕ್ತರ ಮುಂದೆ ಈ ವಿಚಾರಗಳನ್ನು ಹೇಳಬಾರದು ಎಂದುಕೊಂಡಿದ್ದೆ. ಆದರೆ, ಹೇಳುವುದೇ ಸೂಕ್ತ ಅಂತ ಅನ್ನಿಸಿದೆ. ಕೆಲವು ದಿನಗಳ ಹಿಂದೆ ಗವಿಸಿದ್ದೇಶ್ವರ ಹೆಸರನ್ನು ಕೊಪ್ಪಳದ ರೈಲ್ವೇ ನಿಲ್ದಾಣಕ್ಕೆ ನಾಮಕರಣ ಮಾಡಲು ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದು, ಸಂಘಟನೆ ಕೂಡುವುದು ಗೊತ್ತಾಯಿತು. ನನ್ನ ಎಲ್ಲ ಭಕ್ತರಲ್ಲಿ ಹೇಳುವುದು ಇಷ್ಟೇ; ಗವಿಸಿದ್ದಪ್ಪಜ್ಜನ ಮಠವನ್ನು ನಮ್ಮ ಆವರಣ ಬಿಟ್ಟು ಹೊರಗೆ ಎಲ್ಲಿಗೂ ಕರೆದುಕೊಂಡು ಹೋಗಬೇಡಿ”ಎಂದು ಕೈಮುಗಿದು ಕೇಳಿಕೊಂಡರು.
“ನಾನು ಗವಿಮಠದ ಆವರಣಕ್ಕೆ ಸೀಮಿತ ಇರುವೆ. ಇವತ್ತು ರೈಲ್ವೇ ನಿಲ್ದಾಣಕ್ಕೆ ಹೆಸರು ಇಡಿ ಅಂತೀರಿ, ಮುಂದೆ ವಿಶ್ವವಿದ್ಯಾಲಯಕ್ಕೆ ಹೆಸರು ಇಡಿ ಅಂತೀರಿ, ವಿಮಾನ ನಿಲ್ದಾಣಕ್ಕೂ ಇಡಿ ಅಂತೀರಿ. ಏನೂ ಇದರಲ್ಲಿ ಗುದ್ದಾಡುವುದೈತಾ? ಬೇರೆ ಬೇರೆ ಹೆಸರಿಡಲು ಇನ್ನೂ ಪ್ರತಿಭಟನೆ ನಡೆಯುತ್ತಿವೆ. ಅಲ್ಲೇ ಧರಣಿ ಸಹ ಕುಳಿತಿದ್ದಾರೆ. ನಿಮಗೆ ಹೇಳುವುದುಇಷ್ಟೇ; ಗವಿಸಿದ್ದಪ್ಪಜ್ಜ ನಿಮ್ಮೆಲ್ಲರ ಉಸಿರಿನಲ್ಲಿರುವಾಗ ಮತ್ತೊಂದು ಜಾಗಕ್ಕೆ ಅವರ ಹೆಸರು ಯಾಕೆ? ಇದು ಕೊನೆಯಾಗಬೇಕು. ಭಕ್ತರಿಗೆ ಪದೇ ಪದೇ ಈ ವಿಷಯದಲ್ಲಿ ನಾನು ಹೇಳುವುದಿಲ್ಲ. ನಿಮ್ಮ ಭಕ್ತಿ ನಮಗೆ ಗೊತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಗವಿಸಿದ್ದಪ್ಪಜನ ಹೆಸರು ಅದಕ್ಕ ಇಡಬೇಕು, ಇದಕ್ಕೆ ಇಡಬೇಕು ಅಂತ ಪೋಸ್ಟ್ ಮಾಡುತ್ತ ಹೋದರೆ, ನಮ್ಮನ್ನ ಪೋಸ್ಟ್ ಮಾರ್ಟ್ಮ್ ಮಾಡುತ್ತೀರಿ. ದಯವಿಟ್ಟು ಇದು ಇಲ್ಲಿಕೆ ಮುಗಿಯಬೇಕು” ಎಂದು ಬೇಡಿಕೊಂಡರು.
“ಎರಡನೇ ವಿಚಾರ, ನನ್ನ ಮೇಲೆ ನಿಮಗೆ ಪ್ರೀತಿ, ಅಭಿಮಾನ ಇರಬಹುದು. ಗವಿಮಠವನ್ನು ಇನ್ನೊಂದು ಮಠದ ಜೊತೆ ಹೋಲಿಕೆ ಮಾಡುವುದು, ಗವಿಮಠದ ಸ್ವಾಮೀಗಳನ್ನು ಇನ್ನೊಂದು ಮಠದ ಸ್ವಾಮೀಜಿಗಳ ಜತೆ ಹೋಲಿಸಿ ಮಾತನಾಡುವುದರ ಬಗ್ಗೆ ದಯವಿಟ್ಟು ಪೋಸ್ಟ್ ಹಾಕಬೇಡಿ. ನಾನು ತಿಳಿದುಕೊಂಡಿರುವುದು ಇಷ್ಟೇ; ಇಡೀ ನಾಡಿನ ಪೂಜ್ಯರ ಪಾದದ ದೂಳಾಗಿ ನಾನು ಇರುವೆ. ಯಾರ ಜೊತೆಗೂ ನನ್ನ ಹೋಲಿಕೆ ಬೇಡ” ಎಂದು ಕಣ್ಣೀರಿಟ್ಟರು.
“ಮೂರನೇ ವಿಚಾರ ಏನು ಅಂದ್ರ, ನಮ್ಮ ಅಜ್ಜರಿಗೆ ಆ ಪ್ರಶಸ್ತಿ ಕೊಡಿ, ಈ ಪ್ರಶಸ್ತಿ ಕೊಡಿ ಎಂದು ಪೋಸ್ಟ್ ಮಾಡುತ್ತೀರಿ. ನನಗೆ ಬರುವ ಪ್ರಶಸ್ತಿಗಳನ್ನು ತಿರಸ್ಕರಿಸುವಷ್ಟು ನಾನು ದೊಡ್ಡವನಲ್ಲ. ಅದನ್ನು ಸ್ವೀಕರಿಸುವ ಅರ್ಹತೆ ನನಗಿಲ್ಲವೇನೋ ಎನ್ನುವ ವಿನಯವಂತ. ಪ್ರಶಸ್ತಿ ಸ್ವೀಕರಿಸಲು ಒಂದು ಅರ್ಹತೆ ಬೇಕು. ಅದು ನನ್ನಲ್ಲಿಲ್ಲ. ಅದಕ್ಕಾಗಿ ನನಗೆ ದೊಡ್ಡ ಪ್ರಶಸ್ತಿ ಅಂದ್ರ, ನಿವೆಲ್ಲ ಪ್ರೀತಿಯಿಂದ ‘ನಮ್ಮ ಅಜ್ಜಾರು’ ಅಂತ ನಿಮ್ಮ ಹೃದಯದಲ್ಲಿ ಜಾಗ ಕೊಟ್ಟಿರಲ್ಲ ಅದುವೇ ದೊಡ್ಡ ಪ್ರಶಸ್ತಿ. ದಯವಿಟ್ಟು ಇನ್ಮುಂದೆ ಈ ಮೂರು ಕೆಲಸಗಳನ್ನು ಯಾರೂ ಮಾಡಬೇಡಿ. ದೊಡ್ಡ ಅಜ್ಜಾರ ಅಪ್ಪಣೆಯಾಗಿದೆ ನನಗೆ” ಎಂದು ಭಾವುಕರಾಗಿ ಭಕ್ತರಲ್ಲಿ ಮನವಿ ಮಾಡಿದರು.
“ಮಠದಲ್ಲಿ ನನ್ನ ಕೆಸಲ ಇಷ್ಟೇ; ಪೂಜೆ, ಓದು ಹಾಗೂ ಸೇವೆ. ನನಗೆ ಜಾತಿ ಧರ್ಮಗಳ ಗಲಾಟೆ ಬೇಡ. ನನ್ನ ಜಾತಿ ಮತ್ತು ಧರ್ಮದ ಪರಿಭಾಷೆ ಏನು ಅಂದ್ರ; ಎಲ್ಲರನ್ನು ಗೌರವಿಸು, ಎಲ್ಲರನ್ನು ಪ್ರೀತಿಸು. ಇದಕ್ಕೆ ಮಿಕ್ಕಿದ ಧರ್ಮದ ಪರಿಭಾಷೆಯನ್ನು ತಿಳಿದುಕೊಳ್ಳುವಷ್ಟು ಪಂಡಿತ ನಾನಲ್ಲ. ನನಗೆ ಗೊತ್ತಿರುವುದು ಇಷ್ಟೆ. ನನ್ನನ್ನು ಎಲ್ಲಿಯೂ ಬಲವಂತವಾಗಿ ಹೊರಗೆ ಕರೆದುಕೊಂಡು ಹೋಗಬೇಡಿ. ಮಠದಲ್ಲಿ ಕೂಡ ನನ್ನ ಫೋಟೋ ಹಾಕಲು ಅವಕಾಶ ಕೊಟ್ಟಿಲ್ಲ ನಾನು. ನಾನು ಮಠದ ಆಳು ಮಗ. ಈ ದೇಹದಲ್ಲಿ ಜೀವ ಇರುವರೆಗೂ ಮಠದ ಸೇವೆ ಮತ್ತು ನಿಮ್ಮ ಸೇವೆ ಅಷ್ಟೇ ಮಾಡುವೆ. ಸಮಾಜ ಬಹಳ ಸೂಕ್ಷ್ಮವಾಗಿ ಹೋಗುತ್ತಿದೆ. ನನಗೆ ಹೊರಗಿನ ವಿಷಯಗಳಲ್ಲಿ ಆಸಕ್ತಿ ಇಲ್ಲ” ಎಂದು ಎಲ್ಲರಿಗೂ ಧನ್ಯವಾದ ತಿಳಿಸಿ ಮಾತು ಮುಗಿಸಿದರು.