ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ದೋಷಪೂರಿತ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ವಿಚಾರದಲ್ಲಿ ರಾಜ್ಯ ಸರ್ಕಾರ ಅಭ್ಯರ್ಥಿಗಳಿಗೆ ನ್ಯಾಯ ನೀಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಮತ್ತು ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಜರುಗಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಈ ಕುರಿತು ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, “2023-24ನೇ ಸಾಲಿನ ಕೆಪಿಎಸ್ಸಿ ಗೆಜೆಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆ ಮತ್ತೊಂದು ಬಾರಿ ಡಿಸೆಂಬರ್ 29 ರಂದು ನಡೆದಿದೆ. ಇದರಲ್ಲಿ ಮತ್ತೊಮ್ಮೆ ಲೋಪದೋಷಗಳು ಕಂಡು ಬಂದಿದ್ದರಿಂದ ವಿಚಲಿತರಾಗಿರುವ ಅಭ್ಯರ್ಥಿಗಳು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಮರುಪರೀಕ್ಷೆಯಲ್ಲಿ ಕಂಡು ಬಂದ ಲೋಪದೋಷಗಳ ಬಗ್ಗೆ ಅಭ್ಯರ್ಥಿಗಳು ಪದೇ ಪದೆ ಅಳಲು ತೋಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೂ ಸಹ ಈ ಕುರಿತು ವರದಿ ಮಾಡಿವೆ. ಆದರೆ ಮರುಪರೀಕ್ಷೆ ನಡೆದು ಹದಿನೈದು ದಿನ ಕಳೆದರೂ ಈವರೆಗೆ ಸರ್ಕಾರವಾಗಲೀ, ಆಯೋಗವಾಗಲೀ, ಅಭ್ಯರ್ಥಿಗಳ ಆಕ್ಷೇಪಣೆಗಳಿಗೆ ಉತ್ತರ ನೀಡಿಲ್ಲ. ಲಕ್ಷಾಂತರ ಯುವ ಅಭ್ಯರ್ಥಿಗಳ ಭವಿಷ್ಯ ಡೋಲಾಯಮಾನವಾಗಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ” ಎಂದು ಅವರು ದೂರಿದ್ದಾರೆ.
“ಕೆಪಿಎಸ್ಸಿ ಪರೀಕ್ಷೆಯಲ್ಲಾಗಿರುವ ಎಡವಟ್ಟುಗಳು, ಅದರಲ್ಲೂ ಮುಖ್ಯವಾಗಿ ಭಾಷಾಂತರದಲ್ಲಿ ಆಗಿರುವ ಲೋಪದೋಷಗಳ ದುಷ್ಪರಿಣಾಮವನ್ನು ಗ್ರಾಮೀಣ ಭಾಗದ ಯುವಕ ಯುವತಿಯರು ಎದುರಿಸಬೇಕಾಗಿದೆ. ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಕನ್ನಡ ಮಾಧ್ಯಮದಲ್ಲಿ ಶಾಲಾ, ಕಾಲೇಜು ವಿದ್ಯಾಭ್ಯಾಸ ಮಾಡಿರುವ ಸಾವಿರಾರು ಗ್ರಾಮೀಣ ಅಭ್ಯರ್ಥಿಗಳ ಕನಸು ನುಚ್ಚು ನೂರಾಗಿದೆ. ಸರ್ಕಾರಿ ಅಧಿಕಾರಿಗಳಾಗಿ ಗ್ರಾಮೀಣ ಭಾಗದ ಜನರ ಸೇವೆ ಮಾಡಬೇಕು ಎಂಬ ಕನಸು ಕಟ್ಟಿಕೊಂಡು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವರ್ಷಗಟ್ಟಲೆ ಹಗಲಿರುಳು ಶ್ರಮಪಟ್ಟು ಪರೀಕ್ಷೆಗೆ ತಯಾರಿ ನಡೆಸಿದ ಅಭ್ಯರ್ಥಿಗಳ ಭವಿಷ್ಯ, ಕಾಂಗ್ರೆಸ್ ಸರ್ಕಾರದ ಎಡವಟ್ಟಿನಿಂದ ಕತ್ತಲೆಯಾಗಿದೆ” ಎಂದು ಕಿಡಿಕಾರಿದ್ದಾರೆ.
ಹೊಣೆಗಾರಿಕೆಯ ಪ್ರಶ್ನೆ
“ಒಂದು ಕಡೆ ಅಭ್ಯರ್ಥಿಗಳ ಭವಿಷ್ಯದ ಪ್ರಶ್ನೆಯಾದರೆ ಮತ್ತೊಂದು ಹೊಣೆಗಾರಿಕೆಯ ಪ್ರಶ್ನೆ. ಎರಡೆರಡು ಬಾರಿ ಪರೀಕ್ಷೆ ನಡೆಸಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ 25 ಕೋಟಿ ರೂಪಾಯಿಗೂ ಹೆಚ್ಚು ಹಣ ವೆಚ್ಚವಾಗಿದೆ. ಆದರೂ ಪರೀಕ್ಷೆ ದೋಷಮುಕ್ತವಾಗಿಲ್ಲವೆಂದರೆ ಇದಕ್ಕೆ ಯಾರು ಹೊಣೆ? ಇದಕ್ಕೆ ಹೊಣೆಯಾದವರ ವಿರುದ್ಧ ಸರ್ಕಾರ ಶಿಸ್ತು ಕ್ರಮ ಜರುಗಿಸಬೇಕಿತ್ತಲ್ಲವೇ? ಇದಕ್ಕೆ ಪ್ರಮುಖ ಕಾರಣರಾದ ಪರೀಕ್ಷಾ ನಿಯಂತ್ರಕರನ್ನು ಮುಂದುವರಿಸಲಾಗಿದೆ. ಮೊದಲ ಬಾರಿ ಎಡವಟ್ಟಾದ ನಂತರ ಅಕ್ಟೋಬರ್ 23 ರಂದು ಅವರಿಗಿಂತ ಹಿರಿಯರಾದ ಅಧಿಕಾರಿಯನ್ನು ಜಂಟಿ ಪರೀಕ್ಷಾ ನಿಯಂತ್ರಕ ಹುದ್ದೆಗೆ ನೇಮಿಸಲಾಗಿತ್ತು. ಅವರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲಿಲ್ಲ. ನಿನ್ನೆ ಮತ್ತೊಬ್ಬ ಅಧಿಕಾರಿಯನ್ನು ನೇಮಿಸಲಾಗಿದೆ. ಇದು ಸರ್ಕಾರಕ್ಕೆ ಕೆಪಿಎಸ್ಸಿ ನೇಮಕಾತಿ ಬಗ್ಗೆ ಇರುವ ಕಾಳಜಿ” ಎಂದು ವಾಗ್ದಾಳಿ ನಡೆಸಿದ್ದಾರೆ.