Homeಕರ್ನಾಟಕತೆರಿಗೆ ಅನ್ಯಾಯ | ಕೇಂದ್ರದ ಅನ್ಯಾಯ, ಅವಮಾನ ವಿರುದ್ಧ ಧ್ವನಿ ಎತ್ತಲು ಸಿಎಂ ಕರೆ

ತೆರಿಗೆ ಅನ್ಯಾಯ | ಕೇಂದ್ರದ ಅನ್ಯಾಯ, ಅವಮಾನ ವಿರುದ್ಧ ಧ್ವನಿ ಎತ್ತಲು ಸಿಎಂ ಕರೆ

ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮತ್ತೆ ಮತ್ತೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಬೇಕಾದ ಬಿಜೆಪಿ ನಾಯಕರು ದೆಹಲಿ ಗುಲಾಮರಾಗಿದ್ದಾರೆ. ಜನಪ್ರತಿನಿಧಿಗಳು ದಾರಿ ತಪ್ಪಿದಾಗ ಸರಿದಾರಿಗೆ ತರುವ ಹೊಣೆ ಜನರದ್ದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಸಿದ್ದರಾಮಯ್ಯ ಅವರು ಏನು ಹೇಳಿದ್ದಾರೆ ಎಂಬುದ ಪೂರ್ಣ ಮಾತು ಇಲ್ಲಿದೆ.

ಭಾರತೀಯ ಜನತಾ ಪಕ್ಷದ ನಾಯಕರು ಬಾಯಿ ಬಿಟ್ಟರೆ ದೇಶಪ್ರೇಮದ ಬಗ್ಗೆ ಮಾತನಾಡುತ್ತಾರೆ. ರಾಜ್ಯವನ್ನೇ ಪ್ರೀತಿಸದವರು ದೇಶವನ್ನು ಹೇಗೆ ಪ್ರೀತಿಸಲು ಸಾಧ‍್ಯ ಎನ್ನುವುದನ್ನು ಇವರೇ ಹೇಳಬೇಕು. ಕೇಂದ್ರ ಸರ್ಕಾರ ಸೇಡು ತೀರಿಸಿಕೊಳ್ಳುವವರಂತೆ ಕರ್ನಾಟಕಕ್ಕೆ ನಿರಂತರವಾಗಿ ಮಾಡುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಬೇಕಿದ್ದ ರಾಜ್ಯದ ಬಿಜೆಪಿ ನಾಯಕರು ಮತ್ತು ಸಂಸದರು ಅನ್ಯಾಯಕೋರ ಕೇಂದ್ರ ಸರ್ಕಾರವನ್ನು ಸಮರ್ಥಿಸುತ್ತಿರುವುದು ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ ಮತ್ತು ಅವಮಾನವಾಗಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ರಾಜ್ಯಗಳಿಗೆ ತೆರಿಗೆ ಮತ್ತು ಸುಂಕದ ಪಾಲಿನ ರೂಪದಲ್ಲಿ ಒಟ್ಟು 1,73,030 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕ ರಾಜ್ಯಕ್ಕೆ ನೀಡಿರುವ ಪಾಲು ಕೇವಲ 6,310 ಕೋಟಿ ರೂಪಾಯಿ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಐದರಷ್ಟು ಕನ್ನಡಿಗರಿದ್ದರೂ ದೇಶದ ಜಿಡಿಪಿಯಲ್ಲಿ ಕನ್ನಡಿಗರ ಪಾಲಿನ ಪ್ರಮಾಣ ಶೇಕಡಾ 8.4 ಆಗಿದೆ. ಅತೀ ಹೆಚ್ಚು ಜಿಎಸ್‌ಟಿ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ‍್ಥಾನದಲ್ಲಿದೆ. ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ಶೇಕಡಾ 17ರಷ್ಟು ಹೆಚ್ಚಾಗುತ್ತಿದೆ. ಹೀಗಿದ್ದರೂ ತೆರಿಗೆ ಹಂಚಿಕೆಯಲ್ಲಿ ನಮ್ಮ ಪಾಲು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತಾ ಬರಲಾಗುತ್ತಿದೆ. ಈ ಅನ್ಯಾಯ ಯಾಕೆ?

2018-19ರಲ್ಲಿ ರೂ. 24.42 ಲಕ್ಷ ಕೋಟಿಗಳಷ್ಟಿದ್ದ ಕೇಂದ್ರದ ಬಜೆಟ್ ಗಾತ್ರ, 2024-25ರಲ್ಲಿ ರೂ.46.28 ಲಕ್ಷ ಕೋಟಿಯಷ್ಟಾಗಿದೆ. 2018-19ರಲ್ಲಿ ಕರ್ನಾಟಕಕ್ಕೆ ನೀಡಿರುವ ತೆರಿಗೆ ಪಾಲು ರೂ.46,288 ಕೋಟಿಗಳಾಗಿದ್ದರೆ, 2024-25ರಲ್ಲಿ ಇದು ರೂ.44,485 ಕೋಟಿ ಮಾತ್ರ. ಅಂದರೆ ಆರು ವರ್ಷಗಳ ಅವಧಿಯಲ್ಲಿ ಬಜೆಟ್ ಗಾತ್ರ ದುಪ್ಪಟ್ಟಾಗಿದ್ದರೂ ಕರ್ನಾಟಕದ ತೆರಿಗೆ ಪಾಲು 15,299 ರೂಪಾಯಿಗಳಷ್ಟು ಮಾತ್ರ ಹೆಚ್ಚಾಗಿದೆ. ಈ ತೆರಿಗೆ ಪಾಲು ಕನಿಷ್ಠ ಒಂದು ಲಕ್ಷ ಕೋಟಿ ರೂಪಾಯಿಗಳಷ್ಟಾದರೂ ಆಗಬೇಕಿತ್ತಲ್ಲವೇ?

ಕರ್ನಾಟಕದ ಜನತೆ ತೆರಿಗೆ ಮತ್ತು ಸುಂಕದ ಮೂಲಕ ಪ್ರತಿವರ್ಷ ನಾಲ್ಕುವರೆ ಲಕ್ಷ ಕೋಟಿ ರೂಪಾಯಿಗಳನ್ನು ಕೇಂದ್ರದ ಬೊಕ್ಕಸಕ್ಕೆ ನೀಡುತ್ತಿದೆ. ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ತೆರಿಗೆ ಪಾಲಿನ ರೂಪದಲ್ಲಿ ರೂ.45,000 ಕೋಟಿ ಮತ್ತು ಅನುದಾನವಾಗಿ ರೂ.15,000 ಕೋಟಿ ನೀಡುತ್ತಿದೆ. ಅಂದರೆ ನಾವು ನೀಡುತ್ತಿರುವ ಒಂದು ರೂಪಾಯಿಗೆ ಕೇವಲ 13 ಪೈಸೆಯಷ್ಟು ಮಾತ್ರ ವಾಪಸು ನೀಡುತ್ತಿದೆ.

ತೆರಿಗೆ ಹಂಚಿಕೆ ಮಾಡುವಾಗಲೂ ‘’ಬಿಮಾರು’’ ರಾಜ್ಯಗಳೆಂಬ ಅಪಖ್ಯಾತಿಗೀಡಾಗಿರುವ ಬಿಹಾರ (ರೂ.17,403 ಕೋಟಿ), ಮಧ್ಯಪ್ರದೇಶ (ರೂ.13,582 ಕೋಟಿ), ರಾಜಸ್ತಾನ (ರೂ.10,426 ಕೋಟಿ) ಮತ್ತು ಉತ್ತರಪ್ರದೇಶಕ್ಕೆ (ರೂ.31,099 ಕೋಟಿ) ತೆರಿಗೆ ಪಾಲನ್ನು ನೀಡಿರುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೇವಲ ರೂ.6,310 ಕೋಟಿ ನೀಡಿದೆ. ಇದು ಉತ್ತಮ ಆಡಳಿತ, ಸುಸ್ಥಿರ ಅಭಿವೃದ್ದಿ ಮತ್ತು ಜಿಎಸ್‌ಟಿ ಸಂಗ್ರಹದಲ್ಲಿ ಮಾಡಿರುವ ಸಾಧನೆಗಾಗಿ ಕರ್ನಾಟಕಕ್ಕೆ ನೀಡಿರುವ ಶಿಕ್ಷೆಯೇ? ಕನ್ನಡಿಗರ ಬೆವರ ಗಳಿಕೆಯ ತೆರಿಗೆ ಹಣ ಭ್ರಷ್ಟ ರಾಜ್ಯಗಳ ಬೊಕ್ಕಸ ತುಂಬಲು ಯಾಕೆ ಬಳಕೆಯಾಗಬೇಕು?

ಹದಿನೈದನೇ ಹಣಕಾಸು ಆಯೋಗ ಕರ್ನಾಟಕದ ತೆರಿಗೆ ಪಾಲನ್ನು ಶೇ.4.73ರಿಂದ ಶೇಕಡಾ 3.64ಕ್ಕೆ ಇಳಿಸಿದೆ. ಇದರಿಂದ ಕಳೆದ ಐದು ವರ್ಷಗಳಲ್ಲಿ 79,770 ಕೋಟಿ ರೂಪಾಯಿಯನ್ನು ಕರ್ನಾಟಕ ಕಳೆದುಕೊಂಡಿದೆ. ಈ ಅನ್ಯಾಯಕ್ಕೆ ಪರಿಹಾರವಾಗಿ ರೂ.5,495 ಕೋಟಿ ವಿಶೇಷ ಅನುದಾನ ನೀಡಬೇಕೆಂಬ ಹಣಕಾಸು ಆಯೋಗದ ಶಿಫಾರಸನ್ನು ಕೂಡಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರಸ್ಕರಿಸಿ ಕರ್ನಾಟಕಕ್ಕೆ ಅನ್ಯಾಯ ಎಸಗಿದ್ದಾರೆ.

ಇದು ಕರ್ನಾಟಕದ ಪ್ರಾಮಾಣಿಕ ತೆರಿಗೆದಾರರಿಗೆ ಮಾಡಿರುವ ಘೋರ ಅನ್ಯಾಯವಲ್ಲವೇ? ಈ ಅನ್ಯಾಯವನ್ನು ಖಂಡಿಸಬೇಕಾಗಿರುವ ರಾಜ್ಯದ ಬಿಜೆಪಿ ನಾಯಕರು ನಿರ್ಲಜ್ಜರಾಗಿ ಸಮರ್ಥಿಸುತ್ತಿರುವುದು ಕನ್ನಡಿಗರಿಗೆ ಬಗೆಯುತ್ತಿರುವ ದ್ರೋಹವಾಗಿದೆ. ಇವರ ಆರ್ಭಟವೇನಿದ್ದರೂ ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಲು ಮತ್ತು ಬೀದಿಗಳಲ್ಲಿ ಪರಸ್ಪರ ಕಚ್ಚಾಡಲು ಸೀಮಿತವಾಗಿದೆ.

ರಾಜ್ಯದಿಂದ ಆರಿಸಿಹೋಗಿರುವ ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಿಂತು ನ್ಯಾಯ ಕೇಳುವ ಕನಿಷ್ಠ ಧೈರ್ಯವೂ ಇಲ್ಲದೆ ದೆಹಲಿ ಸರ್ಕಾರದ ಗುಲಾಮರಾಗಿದ್ದಾರೆ. ಜನಪ್ರತಿನಿಧಿಗಳು ಜನದ್ರೋಹಿಗಳಾದಾಗ ಅವರನ್ನು ಜನರೇ ವಿಚಾರಿಸಿಕೊಳ್ಳಬೇಕಾಗುತ್ತದೆ. ಕೇಂದ್ರದ ಕಿವುಡ ಸರ್ಕಾರ ಮತ್ತು ಬಿಜೆಪಿಯ ಮೂಗ ನಾಯಕರ ವಿರುದ್ಧ ಕನ್ನಡಿಗರೆಲ್ಲರೂ ಜಾತಿ, ಧರ್ಮ, ಪಕ್ಷ ಪಂಥಗಳನ್ನು ಮೀರಿ ದನಿ ಎತ್ತಬೇಕಾಗಿದೆ. ಇಂತಹದ್ದೊಂದು ಸಂಕಲ್ಪವನ್ನು ಸಂಕ್ರಮಣದ ಶುಭದಿನದಂದು ಪ್ರತಿಯೊಬ್ಬ ಕನ್ನಡಿಗರು ಕೈಗೊಂಡು ಕರ್ನಾಟಕವನ್ನು ಅನ್ಯಾಯ ಮತ್ತು ಅವಮಾನದಿಂದ ರಕ್ಷಿಸಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments