Homeಕರ್ನಾಟಕಸಶಸ್ತ್ರ ಹೋರಾಟ ತ್ಯಜಿಸಿ ಮುಖ್ಯವಾಹಿನಿಗೆ ಬಂದ ಆರು ಮಂದಿ ನಕ್ಸಲ್‌ ಹೋರಾಟಗಾರರು

ಸಶಸ್ತ್ರ ಹೋರಾಟ ತ್ಯಜಿಸಿ ಮುಖ್ಯವಾಹಿನಿಗೆ ಬಂದ ಆರು ಮಂದಿ ನಕ್ಸಲ್‌ ಹೋರಾಟಗಾರರು

ಸಶಸ್ತ್ರ ಹೋರಾಟವನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರಲು ಮತ್ತು ಪ್ರಜಾತಾಂತ್ರಿಕ ಹೋರಾಟದಲ್ಲಿ ತೊಡಗಿಸಿಕೊಳ್ಳಲು ನಕ್ಸಲ್ ಹೋರಾಟಗಾರರು ನಿರ್ಧರಿಸಿದ್ದು, ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಬುಧವಾರ ಶರಣಾಗಿದ್ದಾರೆ.

ನಕ್ಸಲ್ ಹೋರಾಟದಲ್ಲಿದ್ದ ಆರು ಮಂದಿ ಮಾವೋವಾದಿ ಹೋರಾಟಗಾರರು ಮುಖ್ಯವಾಹಿನಿಗೆ ಬಂದಿದ್ದಾರೆ. ಕಾನೂನಿಗೆ ತಲೆಬಾಗಿರುವ ಹೋರಾಟಗಾರರು, ಜನರೊಂದಿಗೆ ಸೇರಿ ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ.

ಮುಖ್ಯವಾಹಿನಿಗೆ ಬಂದ ಆರು ಮಂದಿ ಮಾವೋವಾದಿ ಹೋರಾಟಗಾರರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಲಾಬಿ ಹೂವು ಮತ್ತು ಸಂವಿಧಾನ ಪುಸ್ತಕ ಕೊಟ್ಟು ಪ್ರಜಾತಾಂತ್ರಿಕ ಹೋರಾಟಕ್ಕೆ ಸ್ವಾಗತಿಸಿದ್ದಾರೆ. ನಕ್ಸಲ್ ಹೋರಾಟಗಾರರು ತಮ್ಮ ನಕ್ಸಲ್ ವಸ್ತ್ರಗಳನ್ನು ಸಿದ್ದರಾಮಯ್ಯ ಅವರಿಗೆ ಒಪ್ಪಿಸಿಕೊಂಡಿದ್ದಾರೆ.

ಶಾಂತಿಗಾಗಿ ನಾಗರಿಕ ವೇದಿಕೆಯ ಮುಖಂಡರು ಮತ್ತು ಸರ್ಕಾರದ ಪ್ರತಿನಿಧಿಗಳೊಂದಿಗೆ ಮಂಗಳವಾರ ಸಭೆ ನಡೆಸಿದ್ದ ಮಾವೋವಾದಿ ಹೋರಾಟಗಾರರು ಮುಖ್ಯವಾಹಿನಿ ಬರಲು ಸಮ್ಮತಿ ಸೂಚಿಸಿದ್ದರು. ‘ಶರಣಾಗತಿ ಮತ್ತು ಪುನರ್‌ವಸತಿ ವಿಶೇಷ ಪ್ಯಾಕೇಜ್‌’ ಅಡಿಯಲ್ಲಿ ಶರಣಾಗುವಂತೆ ಸರ್ಕಾರ ನೀಡಿದ್ದ ಕರೆಯನ್ನು ಒಪ್ಪಿಕೊಂಡಿದ್ದರು. ಅದರಂತೆ, ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಂದಿರುವ ವಾವೋವಾದಿ ಹೋರಾಟಗಾರರಾದ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡದ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ ಮತ್ತು ರಾಯಚೂರಿನ ಮಾರೆಪ್ಪ ಅರೋಲಿ ಅವರು ಸರ್ಕಾರದ ಮುಂದೆ ಶರಣಾಗಿದ್ದಾರೆ.

ತಮಗೆ ಶೀಘ್ರವೇ ಜಾಮೀನು ಕೊಡಿಸಲು ಮತ್ತು ಕಾನೂನು ಹೋರಾಟವನ್ನು ನಿಭಾಯಿಸಲು ಸರ್ಕಾರ ನೆರವು ನೀಡಬೇಕು. ಶೀಘ್ರವೇ ಜಾಮೀನು ಕೊಡಿಸಿ, ಜನರೊಂದಿಗಿನ ಹೋರಾಟದಲ್ಲಿ ತೊಡಗಿಕೊಳ್ಳಲು ತ್ವರಿತವಾಗಿ ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆಯೂ ಸೇರಿದಂತೆ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

“ಸರ್ಕಾರದ ಮುಂದೆ ಶರಣಾಗಿರುವ ಆರು ಮಂದಿ ನಕ್ಸಲ್ ಹೋರಾಟಗಾರರಿಗೆ ಸರ್ಕಾರವು ಶರಣಾಗತಿ ಮತ್ತು ಪುನರ್ವಸತಿಯ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಸೌಲಭ್ಯಗಳನ್ನು ಒದಗಿಸಲಿದೆ. ಕಾನೂನು ಪ್ರಕಾರ ಅವರಿಗೆ ಪರಿಹಾರ ಕೊಡುತ್ತೇವೆ. ಕಾಡಿನಿಂದ ಜೈಲಿಗೆ, ಜೈಲಿನಿಂದ ನಾಡಿಗೆ ತರುವ ಪ್ರಯತ್ನ ಮಾಡಿದ್ದೇವೆ. ಅವರಿಗೆ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ಕೊಡಲಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

“ಅನ್ಯಾಯದ ವಿರುದ್ಧ ಅವರ ಹೋರಾಟ ಮುಂದುವರಿಯಲಿ. ಸಂವಿಧಾನ ಪ್ರಕಾರ ಹೋರಾಟ ನಡೆಸಲಿ. ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯ ಮಾಡಬೇಕು ಎನ್ನುವ ಉದ್ದೇಶ ಈಡೇರಿದೆ. ನಕ್ಸಲ್ ಮುಕ್ತ ಹೋರಾಟಕ್ಕೆ ಅನೇಕ ರಾಜ್ಯಗಳು ಶ್ರಮಿಸಿವೆ. ಶರಣಾಗತಿ ಆಗಲು ಮುಂದೆ ಬಂದಿರುವ ಆರು ನಕ್ಸಲೀಯರ ಬೇಡಿಕೆಗಳನ್ನು ಜಿಲ್ಲಾಡಳಿತ ಈಡೇರಿಸಲಿದೆ. ಅವರ ವಿರುದ್ಧದ ಪ್ರಕರಣಗಳ ತನಿಖೆಗಾಗಿ ತ್ವರಿತ ನ್ಯಾಯಾಲಯ ಸ್ಥಾಪನೆ ಮಾಡುತ್ತೇವೆ” ಎಂದು ಸಿಎಂ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments