Homeಕರ್ನಾಟಕನುಡಿ ನಮನ | ಮಾನವೀಯ ನೆಲೆಯ ವಿದ್ವಾಂಸ ಮುಜಾಫರ್ ಅಸ್ಸಾದಿ

ನುಡಿ ನಮನ | ಮಾನವೀಯ ನೆಲೆಯ ವಿದ್ವಾಂಸ ಮುಜಾಫರ್ ಅಸ್ಸಾದಿ

ಮುಜಾಫರ್ ಅಸ್ಸಾದಿ ಅವರ ಅಭಿನಂದನಾ ಗ್ರಂಥಕ್ಕೆ ಲೇಖಕ ರಂಜಾನ್ ದರ್ಗಾ ಬರೆದ ಲೇಖನವಿದು. 30.08.2023 ರಂದು ಅವರು ಮೈಸೂರು ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ವಿಭಾಗದಿಂದ ನಿವೃತ್ತರಾದ ಸಂದರ್ಭದಲ್ಲಿ ಬಿಡುಗಡೆಯಾಯಿತು. ಇಂದು (ಜ.4) ಅವರು ಚಿರಸ್ಮರಣೆಗೆ ಸೇರಿದ ಸಂಗತಿ ಬಹಳ ತಲ್ಲಣಗೊಳಿಸಿದೆ. 

ಪ್ರೊ. ಮುಜಾಫರ್ ಅಸ್ಸಾದಿ ಅವರ ಸ್ವ ವಿವರದ ಮೇಲೆ ಕಣ್ಣಾಡಿಸಿದಾಗ, ಒಬ್ಬ ಮನುಷ್ಯ ತನ್ನ ಸೇವಾವಧಿಯಲ್ಲಿ ಇಷ್ಟೆಲ್ಲ ಸಾಧಿಸಲು ಸಾಧ್ಯವೆ? ಎಂಬ ಪ್ರಶ್ನೆ ಮೂಡದೆ ಇರಲು ಸಾಧ್ಯವಿಲ್ಲ.
ನಾನು ವಯಸ್ಸಲ್ಲಿ ಅಸ್ಸಾದಿ ಅವರಿಗಿಂತ ಹತ್ತು ವರ್ಷ ಹಿರಿಯ. ಆದರೆ ನನ್ನ ವಾರಿಗೆ ಗೆಳೆಯರಲ್ಲಿ ಅಸ್ಸಾದಿ ಅವರಷ್ಟು ಸಾಧನೆ ಮಾಡಿದ ಇನ್ನೊಬ್ಬರನ್ನು ಕಾಣೆ.

ನನ್ನ ದೃಷ್ಟಿಯಲ್ಲಿ ಇವರೊಬ್ಬರು ಸೌಮ್ಯ ಸ್ವಭಾವದ ಜ್ಞಾನ ತಪಸ್ವಿ. ಬಹುಶಿಸ್ತೀಯ ಅಧ್ಯಯನಗಳ ಪ್ರತಿಭಾವಂತ. ಜಾತ್ಯತೀತ ಚಿಂತನೆಯ ಜೊತೆಗೇ ಅಲ್ಪಸಂಖ್ಯಾತರ ಅಸಹಾಯಕ ಸ್ಥಿತಿಗೆ ಕಾರಣಗಳನ್ನು ನಿಖರವಾಗಿ ದಾಖಲಿಸಿದ ಚಿಂತಕ.

“ಜಗತ್ತಿನ ಮುಸ್ಲಿಮರೆಲ್ಲ ಒಂದೇ” ಎಂಬ ಮಿಥ್ ಅನ್ನು ಅಲ್ಲಗಳೆದು ಸೋದಾಹರಣವಾಗಿ ಎತ್ತಿ ತೋರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ‌. ಈ ಸತ್ಯವನ್ನು ಮುಸ್ಲಿಮರು ಸ್ವಾತಂತ್ರ್ಯ ಬಂದಕೂಡಲೆ ಆರ್ಥ ಮಾಡಿಕೊಂಡಿದ್ದರೆ, ಮುಸ್ಲಿಮರ ಸ್ಥಿತಿಗತಿಯಲ್ಲಿ ಭಾರಿ ಗುಣಾತ್ಮಕ ಬದಲಾವಣೆ ಕಂಡುಬರುತ್ತಿತ್ತು.

ಭಾರತದ ಬಹುಪಾಲು ಮುಸ್ಲಿಮರ ಪೂರ್ವಜರು ದೇಶದ ಮೂಲನಿವಾಸಿಗಳಾಗಿದ್ದಾರೆ. ಈ ಮೂಲನಿವಾಸಿಗಳ ರೀತಿನೀತಿಗಳು ಒಂದೇ ಆಗಿರಲು ಸಾಧ್ಯವಿಲ್ಲ. ಅವರೆಲ್ಲ ತಂತಮ್ಮ ಪ್ರದೇಶ, ಭಾಷೆ, ವಿವಿಧ ಆಹಾರ ಉತ್ಪಾದನಾ ಕ್ಷೇತ್ರಗಳು, ವಿವಿಧ ಕಾಯಕಗಳು, ಆಹಾರ ಪದ್ಧತಿ, ಉಡುಗೆ ತೊಡಿಗೆ, ಭಾಷೆ, ಬಣ್ಣ, ನಡಾವಳಿ, ಪೂರ್ವಜರ ಸಂಪ್ರದಾಯ, ಪರಂಪರೆ, ಇತಿಹಾಸ ಮುಂತಾದವುಗಳಿಂದ ಪ್ರಭಾವಿತರಾಗಿರುತ್ತಾರೆ. ಜೊತೆಯಲ್ಲಿ ಬಡವ ಶ್ರೀಮಂತ ವರ್ಗಗಳು ಬೇರೆ.

ಇಷ್ಟೆಲ್ಲ ವೈವಿಧ್ಯಮಯವಾದ ಮೂಲನಿವಾಸಿಗಳು ಇಸ್ಲಾಂ ಧರ್ಮ ಸ್ವೀಕಾರ ಮಾಡಿದ ಮೇಲೆ ಒಂದಾಗಿ ಬಿಡುತ್ತಾರೆಯೆ? ಅವರು ತಮ್ಮ ಪೂರ್ವಿಕರ ಅನೇಕ ನಡಾವಳಿ ಜೊತೆಗೇ ಇಸ್ಲಾಂ ಅಥವಾ ಯಾವುದೇ ಧರ್ಮವನ್ನು ಸ್ವೀಕರಿಸಿರುತ್ತಾರೆ. ಈ ಮಿಥ್ ಅನ್ನು ಸೈದ್ಧಾಂತಿಕವಾಗಿ ದಾಖಲಿಸಿದವರೇ ಮುಜಾಫರ್ ಅಸ್ಸಾದಿ
ಕರ್ನಾಟಕದಲ್ಲೇ ಅನೇಕ ವಿಧವಾದ ಮುಸ್ಲಿಮರಿದ್ದಾರೆ. ಪ್ರಾದೇಶಿಕವಾಗಿ ಹೇಳುವುದಾದರೆ, ಭಟ್ಕಳ ನವಾಯತ ಮುಸ್ಲಿಮರ ಜೀವನ ವಿಧಾನವೇ ಬೇರೆಯಾಗಿದೆ.

ಬಿಳಿಬಣ್ಣದ ಅವರು ಕಪ್ಪು ಮುಸ್ಲಿಮರನ್ನು “ಕಾಲೇಪಾಂವ್” ಎಂದು ಕರೆಯುತ್ತಾರೆ. ಅವರು ನವಾಯತರ ಮಧ್ಯೆಯೆ ರಕ್ತಸಂಬಂಧ ಬೆಳೆಸುತ್ತಾರೆ. ಮಂಗಳೂರು ಮುಸ್ಲಿಮರು ಮೂಲ ಇಸ್ಲಾಂಮಿನ ನಡಾವಳಿಯ ಕಡೆಗೇ ಹೆಚ್ಚು ಗಮನ ಹರಿಸುತ್ತಾರೆ. ನಾವು ಉತ್ತರ ಕರ್ನಾಟಕದ ಹಳ್ಳಿಗಾಡಿನ ಮುಸ್ಲಿಮರು “ಖಾದರಲಿಂಗನಿಗೆ ಸಾವಿರ ಸಲಾಂ” ಎನ್ನುವವರು. ನಮಗೆ ರಂಜಾನ್, ದೀಪಾವಳಿ, ದಸರಾ ಎಲ್ಲ ಅಷ್ಟೇ. ಮೋಹರಂ ನಮಗೆ ಬರಿ ದುಃಖದ ದಿನವಲ್ಲ, ಎಲ್ಲ ಧರ್ಮಗಳವರು ಒಂದಾಗಿ ಮಾನವ ಏಕತೆಯನ್ನು ಆನಂದಿಸುವ ಸಂದರ್ಭವಾಗಿದೆ.

ನಮ್ಮ ಜೀವನವಿಧಾನ ಇಸ್ಲಾಂ ಗ್ರಂಥಜ್ಞಾನಿಗಳಿಗೆ ವಿಚಿತ್ರವೆನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅಂಥ ಜ್ಞಾನಿಗಳ ಪ್ರಭಾವ ನಮ್ಮ ಹಳ್ಳಿಗಾಡಿನ ಮುಸ್ಲಿಮರ ಮೇಲೂ ಆಗುತ್ತಿದೆ. ಬಿಹಾರ, ಉತ್ತರ ಪ್ರದೇಶ ಮುಂತಾದ ಕಡೆಗಳ ಇಸ್ಲಾಂ ಧಾರ್ಮಿಕ ಶಿಕ್ಷಣ ಪಡೆದವರು, ನಮ್ಮ ಕಡೆಯ ಹಳ್ಳಿ ಪಟ್ಟಣಗಳಲ್ಲಿನ ಮಸೀದಿಗಳಲ್ಲೂ ನಮಾಜ್ ಮಾಡಿಸಲು ಬರುತ್ತಾರೆ. ಧರ್ಮಗುರುಗಳು ಧಾರ್ಮಿಕ ಪ್ರವಚನ ಮಾಡುವುದಕ್ಕೂ ಸ್ಥಳೀಯ ಜನರ ಜೀವನವಿಧಾನಕ್ಕೂ ಅಜಗಜಾಂತರವಿದೆ. ಹೀಗಾಗಿ ಸ್ದಳೀಯ ಬದುಕಿನಲ್ಲಿ ಸಾಂಸ್ಕೃತಿಕ ಗೊಂದಲಗಳು ಶುರುವಾಗುತ್ತವೆ.

ಸಯ್ಯದ, ಶೇಖ, ಮೊಘಲ್, ಪಠಾಣ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರಿದ್ದಾರೆ. ಷಿಯಾ ಸುನ್ನಿಗಳಿದ್ದು ಅವರಲ್ಲೂ ಅನೇಕ ಪ್ರಕಾರಗಳಿವೆ. ಪಿಂಜಾರರು, ದರ್ವೆಶಿಗಳು, ಜಾತಕಾರರು, ನಾಲಬಂದರು, ಚಪ್ಪರಬಂದರು, ಬಾಗವಾನರು, ಬ್ಯಾರಿಗಳು, ತಬ್ಲೀಕ್ ಜಮಾತನವರು ಸೂಫಿ ಮುಸ್ಲಿಮರು ಹೀಗೆ ಅನೇಕ ಪ್ರಕಾರದವರು ಇದ್ದಾರೆ. ಅವರ ಜೀವನವಿಧಾನದಲ್ಲೂ ಬಹಳ ವ್ಯತ್ಯಾಸಗಳಿವೆ.

ಈ ನಿಜದ ನಿಲವನ್ನು ಭಾರತದ ಯಾವೊಬ್ಬ ಮುಸ್ಲಿಂ ಚಿಂತಕರೂ ಸೂಕ್ಷ್ಮವಾಗಿ ಗಮನಿಸದ ಕಾರಣ ಕೆಳವರ್ಗದ ಮುಸ್ಲಿಮರ ಬದುಕು ಅಯೋಮಯವಾಗಿದೆ. ಈ ಹಿನ್ನಲೆಯಲ್ಲಿ ಅಸ್ಸಾದಿಯವರು ದೇಶದ ಮುಖ್ಯ ಚಿಂತಕರಲ್ಲಿ ಒಬ್ಬರಾಗಿ ಕಾಣುತ್ತಾರೆ. ದೇಶದ ಮುಸ್ಲಿಂ ಸಮಾಜದ ಅಭಿವೃದ್ಧಿಯಲ್ಲಿ ಆವರ ಪಾತ್ರ ಮಹತ್ವದ್ದಾಗಿದೆ‌.
ಅವರ ಚಿಂತನೆ ಬರಿ ರಾಜಕೀಯ ವಿಜ್ಞಾನ ವಿಷಯಕ್ಕೆ ಸೀಮಿತವಾಗಿಲ್ಲ. ಸಮಾಜೋ ಧಾರ್ಮಿಕ ಆರ್ಥಿಕ ಚಿಂತನೆಗಳು ಅವರ ರಾಜಕೀಯ ಪ್ರಜ್ಞೆಯ ಪರಿಧಿಯಲ್ಲಿ ಬರುತ್ತವೆ. ಜನಮುಖಿ ಅಕ್ಯಾಡೆಮಿಕ್ ಆಗಿ ಅವರು ಬಹಳಷ್ಟು ಸಾಧಿಸಿದ್ದಾರೆ. ಬಡ ಅಲ್ಪಸಂಖ್ಯಾತರಷ್ಟೇ ಅಲ್ಲದೆ ದಲಿತರು ಮತ್ತು ಹಿಂದುಳಿದವರ ಬಗ್ಗೆಯೂ ಆಳವಾದ ಚಿಂತನೆಗಳನ್ನು ದಾಖಲಿಸಿದ್ದಾರೆ.

ಸಮರ್ಪಣಾಭಾವದ ಪ್ರಾಧ್ಯಾಪಕರಾಗಿ ಶಿಷ್ಯಗಣದ ಪ್ರೀತಿಗೆ ಪಾತ್ರರಾಗಿದ್ದಾರೆ. ಏತನ್ಮಧ್ಯೆ ಕರ್ನಾಟಕದ ಎಲ್ಲ ಚಳವಳಿಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಮೂರು ದಶಕಗಳ ಹಿಂದೆ ಅವರ ತಾರುಣ್ಯದಲ್ಲೇ ಕರ್ನಾಟಕದ ಚಳವಳಿಗಳ ಬಗ್ಗೆ ಪ್ರಖ್ಯಾತ ಇಪಿಡಬ್ಲೂನಲ್ಲಿ ಬರೆದಿದ್ದರು. ಅದನ್ನು ಆಕಸ್ಮಿಕವಾಗಿ ಓದಿ ಆಶ್ಚರ್ಯವೆನಿಸಿತ್ತು. ಅದರಲ್ಲಿ ನನ್ನ ಹೆಸರೂ ಇತ್ತು! ಹೀಗೆ ಅವರನ್ನು ನೋಡುವ ಮೊದಲೇ ಅವರ ಪ್ರತಿಭೆ ಮತ್ತು ಸಾಮಾಜಿಕ ಪ್ರಜ್ಞೆಯ ಪರಿಚಯವಾಯಿತು.

ಪ್ರಗತಿಪರ ಮುಸ್ಲಿಂ ಬರಹಗಾರರು ಸೇರಿ “ಚಿಂತಕರ ಚಾವಡಿ” ಪ್ರಾರಂಭಿಸಿದಾಗ, ಸಭೆಗಳಲ್ಲಿ ಅವರ ಚಿಂತನಾಕ್ರಮದಿಂದ ನಾವೆಲ್ಲ ಸಂತುಷ್ಟರಾಗುತ್ತಿದ್ದೆವು. ಆಳವಾದ ಚಿಂತನೆಗಳಿಂದ ಕೂಡಿದ ಅವರ ಗಂಭೀರ ಮಾತುಗಳು ನಮಗೆಲ್ಲ ದಾರಿದೀಪದಂತೆ ಖುಷಿಕೊಟ್ಟಿದ್ದುಂಟು.

ಮುಜಾಫರ್ ಅಸ್ಸಾದಿ ಅವರು ನಿವೃತ್ತರಾದಮೇಲೆ ಇನ್ನೂ ಹೆಚ್ಚು ಬೀಜಿ ಆಗುವುದರಲ್ಲಿ ಸಂಶಯವಿಲ್ಲ. ಅವರು ದೇಶ ವಿದೇಶಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಹೋಗಬಹುದು. ಸರ್ಕಾರದ ಯೋಜನೆಗಳಲ್ಲಿ ಸಲಹೆಗಾರರಾಗಬಹುದು. ಇವೆಲ್ಲ ಅವರ ವಿದ್ವತ್ತಿಗೆ ಸಹಜವಾಗಿ ಬರುವಂಥವು. ಆದರೆ ಇವೆಲ್ಲವುಗಳಿಗಿಂತ ಮಿಗಿಲಾಗಿ ಅವರು ದೇಶದಲ್ಲಿ ಸಂಕಷ್ಟಕ್ಕೊಳಗಾದ ಅಮಾಯಕ ಮುಸ್ಲಿಮರ ಭವಿಷ್ಯಕ್ಕಾಗಿ ತಾವು ಕಂಡುಕೊಂಡ ಸತ್ಯವನ್ನು ಪ್ರತಿಪಾದಿಸುತ್ತ, ಮುಸ್ಲಿಂ ವಿದ್ವಾಂಸರ ಮತ್ತು ಧರ್ಮಪಂಡಿತರ ಕಣ್ಣು ತೆರೆಸುವ ಮಹಾಕಾರ್ಯದಲ್ಲಿ ತೊಡಗುವುದು ಒಳ್ಳೆಯದು.

ಮೈನಾರಿಟಿ ಕುರಿತ ಅವರ ಚಿಂತನೆಗಳು ಹಿಂದಿ, ಉರ್ದು, ಇಂಗ್ಲಿಷ್ ಮುಂತಾದ ಭಾಷೆಗಳಲ್ಲಿ ಪ್ರಕಟವಾಗಬೇಕು ಎಂಬುದು ಕಾಲದ ಕರೆ ಆಗಿದೆ.

ಬರೆಹ : ರಂಜಾನ್ ದರ್ಗಾ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments