ಸಿರಿಧಾನ್ಯ ಬೆಳೆಯಲು ರೈತಸಿರಿ ಕಾರ್ಯಕ್ರಮದ ಮೂಲಕ ಹೆಕ್ಟೆರ್‌ಗೆ 1೦ ಸಾವಿರ ರೂ. ನೀಡಿ ಪ್ರೋತ್ಸಾಹ ನೀಡಿದ್ದರಿಂದ ಸಿರಿಧಾನ್ಯದ ಉತ್ಪತ್ತಿ ಮಾಡಲು ರೈತರು ಉತ್ಸುಕರಾಗಿದ್ದಾರೆ. ಇದುವರೆಗೆ 104 ಕೋಟಿ ರೂ. ವಿತರಣೆ ಮಾಡಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ, “ಸಿರಿಧಾನ್ಯ ಮೇಳದ ಮೂಲಕ ರೈತರ ಸಿರಿಧಾನ್ಯಗಳಿಗೆ ಮಾರುಕಟ್ಟೆ ದೊರೆಕಿಸಿಕೊಡುತ್ತಿದ್ದು, ಮೇಳದ ಮೂಲಕ ಆಹಾರ ಉತ್ಪನ್ನ ತಯಾರಿಸಿ ವಿತರಿಸುವ ಕೆಲಸ ಮಾಡಲಾಗುತ್ತಿದೆ. ನನ್ನ ನೇತೃತ್ವದಲ್ಲಿ ಎರಡು ವರ್ಷಗಳ ಕಾಲ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ ಮಾಡಲಾಗುತ್ತಿದೆ” ಎಂದರು.
“ಜ.23ರಿಂದ 3ದಿನ ಸಾವಯವ ಮತ್ತು ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ನಡೆಯಲಿದೆ. ಕಳೆದ ವರ್ಷ ರಾಜ್ಯದಲ್ಲಿ ನಡೆದ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ದೇಶದ ಅನೇಕ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನ ತ್ರಿಪುರವಾಸಿನಿ ಆವರಣದಲ್ಲಿ ಸಾವಯವ ಮತ್ತು ಸಿರಿಧಾನ್ಯಗಳ ಅಂತರಾಷ್ಟ್ರೀಯ ವಾಣಿಜ್ಯ ಮೇಳವನ್ನು ಆಯೋಜಿಸಲಾಗುತ್ತಿದೆ. ಸದರಿ ಕಾರ್ಯಕ್ರಮಕ್ಕೆ ಹೊರ ರಾಜ್ಯಗಳಲ್ಲಿ ನಡೆಯುವ ಮೇಳಗಳಲಿ ವಾಣಿಜ್ಯ ಆಸಕ್ತರನ್ನು ಆಹ್ವಾನಿಸಲಾಗಿದೆ” ಎಂದು ತಿಳಿಸಿದರು.
“ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೃಷಿ ಮೇಳ ಮಾದರಿ ಸಿರಿಧಾನ್ಯ ಮೇಳ ಆಯೋಜಿಸಿ, ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಬಗ್ಗೆ ಅರಿವು ಮೂಡಿಸಲಾಗಿದ್ದು, ಹಲವು ಕೃಷಿ ವಿಜ್ಞಾನಿಗಳು ಭಾಗವಹಿಸಲಿದ್ದಾರೆ. ಸಿರಿಧಾನ್ಯಗಳ ಉತ್ಪನ್ನ ಸೃಷ್ಟಿಸುವ ನಿಟ್ಟಿನಲ್ಲಿ ಅರಿವು ಮೂಡಿಸಲಾಗುವುದು. ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಇದಕ್ಕೆ ಮಳಿಗಗಳನ್ನು ಆಯೋಜಿಸಲಾಗಿದೆ. ರೈತರಿಗೂ ಕಾರ್ಯಾಗಾರ ಆಯೋಜಿಸಿ, ವಿಚಾರ ಸಂಕಿರಣಗಳನ್ನು ನಡೆಸಿ ವಿಚಾರಗಳನ್ನು ತಿಳಿಸಿಕೊಡಲಾಗುವುದು” ಎಂದು ಹೇಳಿದರು.
ವಿದೇಶಿ ಸರ್ಕಾರಗಳ ಕೃಷಿ ಮುಖ್ಯಸ್ಥರ ಭಾಗಿ
“ಮೇಳದಲ್ಲಿ ಸ್ವಿಡ್ಜರ್‌ಲ್ಯಾಂಡ್, ಸ್ಪೇನ್, ಆಸ್ಟ್ರೇಲಿಯಾ, ಕೀನ್ಯಾ, ರೋಮ್ ಸೇರಿದಂತೆ ಅನೇಕ ವಿದೇಶಿ ಸರ್ಕಾರಗಳ ಕೃಷಿ ಮುಖ್ಯಸ್ತರು ಭಾಗವಹಿಸಲಿದ್ದು, ದೇಶದ 2೦ಕ್ಕೂ ಹೆಚ್ಚು ಮಂತ್ರಿಗಳು, ರೈತ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಸಿರಿಧಾನ್ಯ ಮೇಳದ ವಿಚಾರವಾಗಿ ತೈವಾನ್ ರಾಷ್ಟ್ರಕ್ಕೂ ಭೇಟಿ ನೀಡಿ ಮಾಹಿತಿ ನೀಡಲಾಗಿದೆ. ಮಂಡ್ಯದಲ್ಲಿ ನಡೆದ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವೇಳೆ ಜಾಗೃತಿ ಮೆರವಣಿಗೆ ಹಾಗೂ ಮೇಳದಲ್ಲಿ ಮಳಿಗೆಗಳನ್ನು ನೀಡಿ ಸಿರಿಧ್ಯಾನಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ” ಎಂದರು.
ಮೇಳದ ಹಿನ್ನಲೆ ಹಲವು ಪೂರ್ವಭಾವಿ ಕಾರ್ಯಕ್ರಮ
“ಸಿರಿಧಾನ್ಯ ಮತ್ತು ಸಾವಯವ ಮೇಳದ ಅಂಗವಾಗಿ ಹಲವು ಪೂರ್ವಭಾವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜ.೦7, ೦8 ರಂದು ಬೆಂಗಳೂರಿನ ಸ್ಲಿರ್ಫ್‌ಕ್ಯುಲಿನರಿ ಅಕಾಡೆಮಿಯಲ್ಲಿ ರಾಜ್ಯ ಮಟ್ಟದ ಪಾಕಸ್ಪರ್ಧೆ, ಜ.1೦ಕ್ಕೆ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಸಿರಿಧಾನ್ಯಗಳ ಸುಸ್ಥಿರ ಭವಿಷ್ಯಕ್ಕಾಗಿ ಮಹತ್ವದ ಧಾನ್ಯಗಳ ವಿಚಾರವಾಗಿ ಪ್ಯಾನಲ್ ಚರ್ಚೆ ಜ.17 ರಂದು ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಸಿರಿಧಾನ್ಯಗಳ ಪಾಕಶಾಸ್ತ್ರ ವಿಚಾರ ಸಂಕಿರಣ, ಜ.19 ರಂದು ಕಬ್ಬನ್ ಪಾರ್ಕ್‌ನಲ್ಲಿ ಸಿರಿಧಾನ್ಯ ಓಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದು ಮಾಹಿತಿ ಹಂಚಿಕೊಂಡರು.
“ವಾಣಿಜ್ಯ ಮೇಳದಲ್ಲಿ ರಾಜ್ಯದ ಆಯಾ ಪ್ರದೇಶಕ್ಕೆ ಸೂಕ್ತವಾದ ದೇಸಿ ತಳಿಗಳ ಸಂರಕ್ಷಣೆ, ವಿತರಣೆಯ ಮಾಹಿತಿ, ಮಣ್ಣಿನ ಫಲವತ್ತತೆ, ಮಣ್ಣಿನ ಪರೀಕ್ಷೆ, ಯಾವ ರೀತಿಯ ಮಣ್ಣಿಗೆ ಯಾವ ಬೆಳೆ ಬೆಳೆಯಬಹುದಾಗಿದೆ ಎಂಬುದು, ಮಣ್ಣಿನ ಆರೋಗ್ಯದ ಬಗ್ಗೆ ರೈತರಿಗೆ ಮೇಳದಲ್ಲಿ ತಿಳಿಯಲಿದೆ” ಎಂದು ಹೇಳಿದರು.
2೦ ಕೋಟಿ ವೆಚ್ಚದಲ್ಲಿ ಮಾಹಿತಿ ಕೇಂದ್ರ
“ಸಿರಿಧಾನ್ಯಗಳಿಂದ ಆಹಾರೋತ್ಪನ್ನಗಳು ರುಚಿಕರವಾಗಿ ಇರುವುದು ಎಲ್ಲರಿಗೂ ಇಷ್ಟವಾಗುವಂತಹ ರೀತಿಯಲ್ಲಿ ಸವಿಯನ್ನು ನೀಡಲಿದೆ. ಸಿರಿಧಾನ್ಯ ಆಹಾರ ಉತ್ಪನ್ನಗಳ ಸಂರಕ್ಷಣೆ ಹಾಗೂ ಚಿರಪರಿಚಿತವನ್ನಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಸಿರಿಧಾನ್ಯ ವಿಚಾರಗಳನ್ನು ತಿಳಿಯಲು ರೈತರಿಗೆ ಬೆಂಗಳೂರಿನ ಹೆಬ್ಬಾಳದಲ್ಲಿ ಕೇಂದ್ರವೊಂದನ್ನು 2೦ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ” ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
“ಕಡಿಮೆ ವೆಚ್ಚ, ಕಡಿಮೆ ನೀರಿನಲ್ಲಿಯೂ ಬೆಳೆಯಬಹುದಾದ ಸಿರಿಧಾನ್ಯಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಸಿರಿಧಾನ್ಯಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಇದು ರೈತರಿಗೂ ಆರ್ಥಿಕವಾಗಿ ಅನುಕೂಲವಾಗಲಿದೆ. ಸಾವಯವ ಕೃಷಿ ಪದ್ಧತಿ, ಸಿರಿಧಾನ್ಯದ ಬಗ್ಗೆ ಆಸಕ್ತಿ ಕಡಿಯಾಗಿತ್ತು. ಈಗ 4-5 ವರ್ಷಗಳಿಂದ ಸಾರ್ವಜನಿಕರಿಗೆ ಈ ಬಗ್ಗೆ ಆಸಕ್ತಿ ಇದ್ದು, ಸಾರ್ವಜನಿಕರ ಆಸಕ್ತಿಗೆ ಸರ್ಕಾರ ಜವಾಬ್ದಾರಿಯುತವಾಗಿ ಸ್ಪಂಧಿಸುವ ನಿಟ್ಟಿನಲ್ಲಿ ಇದಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ” ಎಂದರು.