ಮಣಿಕಂಠ ರಾಠೋಡ್ ಮೇಲೆ ಸುಮಾರು 20ರಿಂದ 30 ಪ್ರಕರಣಗಳು ದಾಖಲಾಗಿವೆ. ತಮಗೆ ಜೀವ ಬೆದರಿಕೆ ಇರುವ ಬಗ್ಗೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಆಡಿಯೋ ಹರಿದಾಡಿತ್ತು. ಆ ಬಗ್ಗೆ ದೂರು ಕೊಟ್ಟರೂ ಕ್ರಮ ಆಗಿಲ್ಲ. ಈಗ ಮಣಿಕಂಠ ರಾಠೋಡ್ ನೇತೃತ್ವದಲ್ಲೇ ಬಿಜೆಪಿ ‘ಕಲಬುರಗಿ ಚಲೋ’ ಹಮ್ಮಿಕೊಂಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಮ್ಮಿಕೊಂಡಿದ್ದ ‘ಕಲಬುರಗಿ ಚಲೋ’ ಹೋರಾಟದ ಸಂದರ್ಭದಲ್ಲಿ, ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರ ಧ್ವನಿಯುಳ್ಳ ಆಡಿಯೋವೊಂದನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಗುರುವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
“ಬಿಜೆಪಿಗರಿಗೆ ನಾಚಿಕೆ ಆಗಲ್ವಾ? ಸಚಿನ್ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಹಾಗಿದ್ದರೂ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಬಿಜೆಪಿಗರು ಹತಾಶರಾಗಿದ್ದಾರೆ. ಸಿ.ಟಿ ರವಿ, ಛಲವಾದಿ, ಪಿ ರಾಜೀವ್ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಅವರೆಲ್ಲರೂ ಸುಳ್ಳಿನ ಶೂರರು. ರಾಜಕೀಯ ಅಸ್ಥಿತ್ವಕ್ಕಾಗಿ ಕಾಂಗ್ರೆಸ್ ನಾಯಕರ ಜಪ ಮಾಡುತ್ತಿದ್ದಾರೆ” ಎಂದು ಕುಟುಕಿದರು.
“ಗುತ್ತಿಗೆದಾರರ ಸಂತೋಷ್ ಪಾಟೀಲ್ ಅವರು ನನ್ನ ಸಾವಿಗೆ ನೇರ ಕಾರಣ ಕೆ.ಎಸ್ ಈಶ್ವರಪ್ಪ ಎಂದಿದ್ದರು. ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಸಂತೋಷ್ ಪಾಟೀಲ್ ತಮ್ಮ ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದರು. ಅಲ್ಲದೆ, ಹೆಂಡತಿ ಮಕ್ಕಳಿಗೆ ಪರಿಹಾರ ಕೊಡಬೇಕು ಎಂದು ಡೆತ್ ನೋಟ್ ನಲ್ಲಿ ಹೇಳಿದ್ದರು” ಎಂದು ಸಂತೋಷ್ ಪಾಟೀಲ್ ಡೆತ್ ನೋಟ್‌ನ ಅಂಶಗಳನ್ನು ಪ್ರಿಯಾಂಕ್ ಖರ್ಗೆ ವಿವರಿಸಿದರು.
“ಸಂತೋಷ್ ಪಾಟೀಲ್ ಕುಟುಂಬಕ್ಕೆ ಬಿಜೆಪಿಗರು ಏನು ಸಹಾಯ ಮಾಡಿದ್ದಾರೆ? ಸಂತೋಷ್ ಪಾಟೀಲ್ ಕುಟುಂಬವನ್ನು ಬಿಜೆಪಿಯವರು ಇದುವರೆಗೂ ಏಕೆ ಭೇಟಿ ಮಾಡಿಲ್ಲ? ಕೇವಲ ಮೊಸಳೆ ಕಣ್ಣೀರು ಸುರಿಸಿದರೆ ರಾಜ್ಯದ ಜನ ಮೋಸ ಹೋಗುವುದಿಲ್ಲ” ಎಂದು ಕಿಡಿಕಾರಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು, ಕೇಂದ್ರ ಸಚಿವ ಅಮಿತ್ ಶಾ ಭೇಟಿ ಸಂದರ್ಭದಲ್ಲಿ ನನ್ನ ವಿಚಾರವಾಗಿಯೂ ಚರ್ಚೆ ಆಗಿದೆ. ಬಿಜೆಪಿಗರು ಕಲಬುರಗಿ ಬಂದರೆ ಎಳನೀರು, ಮಜ್ಜಿಗೆ ಕೊಡುತ್ತೇವೆ. ಬಿಜೆಪಿಯವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹುಡುಗರಿಗೆ ಸೂಚನೆ ನೀಡಿದ್ದೇನೆ” ಎಂದು ವ್ಯಂಗ್ಯವಾಡಿದರು.
“ಛಲವಾದಿ ಸಕಾರಾತ್ಮಕವಾಗಿ ಟೀಕೆ ಮಾಡಿದರೆ ನಾನು ಪ್ರತಿಕ್ರಿಯೆ ನೀಡಬಹುದು. ವೈಯಕ್ತಿಕವಾಗಿ ಟೀಕೆ ಮಾಡಿದರೆ ನಾನೇನು ಮಾಡಲಿ? ಬಿಜೆಪಿ ನಾಯಕರು ಮೊದಲು ಮಣಿಕಂಠ ರಾಠೋಡ್ ಕೊಲೆ ಬೆದರಿಕೆ ಬಗ್ಗೆ ಉತ್ತರ ಕೊಡಲಿ” ಎಂದು ಸವಾಲು ಹಾಕಿದರು.
“ಮುನಿರತ್ನ ವಿರುದ್ಧ ಚಾರ್ಜ್‌ಶೀಟ್ ಫೈಲ್ ಆಗಿದೆ. ಆದರೆ ಬಿಜೆಪಿಯವರು ಮುನಿರತ್ನ ರಾಜೀನಾಮೆ ಏಕೆ ಕೇಳಲ್ಲ? ನಿಮಗೂ ಎಚ್‌ಐವಿ ಸೋಂಕು ಚುಚ್ಚುತ್ತಾರೆಂಬ ಭಯವೇ? ಹಿಟ್ ಆಂಡ್ ರನ್ ಮಾಡುವಲ್ಲಿ ಬಿಜೆಪಿಗರು ಪಿಎಚ್ ಡಿ ತೆಗೆದುಕೊಂಡಿದ್ದಾರೆ. ಯಾರನ್ನು ಕ್ಯಾಬಿನೆಟ್‌ನಲ್ಲಿ ಇಟ್ಟುಕೊಳ್ಳಬೇಕು ಯಾರನ್ನು ಬಿಡಬೇಕು ಎಂಬುದು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಟ್ಟಿದ್ದು” ಎಂದು ತಿರುಗೇಟು ಕೊಟ್ಟರು.