Homeಕರ್ನಾಟಕಕಲಬುರಗಿಯಲ್ಲಿ ನಿಮ್ಹಾನ್ಸ್, ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿಯಲ್ಲಿ ನಿಮ್ಹಾನ್ಸ್, ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

  • ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ದರಾಮಯ್ಯ

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 371ಜೆ ಜಾರಿಯಾದ ದಶಮಾನೋತ್ಸವದ ಪ್ರಯುಕ್ತ 371 ಹಾಸಿಗೆಗಳ ಅತ್ಯುನ್ನತ ಆರೋಗ್ಯ ಸೌಕರ್ಯಗಳಿರುವ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, “ಬೆಂಗಳೂರು, ಮೈಸೂರಿನಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆ ಶುಚಿತ್ವ ಮತ್ತು ನಿರ್ವಹಣೆಯಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಂಡಿದೆ. ಕಲಬುರಗಿಯ ಜಯದೇವ ಇವೆರಡೂ ಆಸ್ಪತ್ರೆಗಳಿಗಿಂತ ಇನ್ನೂ ಹೆಚ್ಚಿನ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು” ಎಂದು ಸೂಚಿಸಿದರು.

“ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿರುವ ಜನತೆ ಹೃದ್ರೋಗ ಸಮಸ್ಯೆಗಳಿಗೆ ಈಗ ಬೆಂಗಳೂರಿಗೆ ಬರುವ ಅಗತ್ಯವೇ ಇಲ್ಲ. ಕಲಬುರಗಿಯಲ್ಲೇ ಜಯದೇವ ಲೋಕಾರ್ಪಣೆಗೊಳಿಸಿದ್ದೇವೆ. ಕಲಬುರಗಿಯಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಬೇಗ ತೀರ್ಮಾನ ತೆಗೆದುಕೊಳ್ಳುವಂತೆ ವೇದಿಕೆಯಲ್ಲಿದ್ದ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರಿಗೆ ಸೂಚಿಸಿ, ಮೈಸೂರಿಗೂ ನಿಮ್ಹಾನ್ಸ್ ಘಟಕದ ಅಗತ್ಯವಿದ್ದು ಅದನ್ನು ಮರೆಯಬೇಡಿ” ಎಂದರು‌.

“371ಜೆ ಜಾರಿಯಿಂದ ಈ ಭಾಗದ ಸಹಸ್ರಾರು ವಿದ್ಯಾವಂತರು ಉತ್ತಮ ಹುದ್ದೆಗಳನ್ನು ಪಡೆಯಲು ಸಾಧ್ಯವಾಗಿದೆ. ನಮ್ಮ ಸರ್ಕಾರ ಉತ್ತರ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ನೀಲನಕ್ಷೆ ಸಿದ್ದಪಡಿಸಿಕೊಂಡಿದ್ದೇವೆ. ಇದು ನಮ್ಮ ಸರ್ಕಾರದ ಬದ್ಧತೆ. ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಇಲ್ಲಿನ ವಿಶ್ವವಿದ್ಯಾಲಯಗಳಲ್ಲಿ ನೂತನ ಹೊಸ ಕೋರ್ಸ್‌ಗಳನ್ನು ಆರಂಭಿಸುವುದು ಮತ್ತು ಖಾಲಿ ಇರುವ ಹುದ್ದೆಗಳನ್ನು ತುಂಬುವ ಕೆಲಸವನ್ನೂ ಮಾಡಲಾಗುವುದು” ಎಂದು ಹೇಳಿದರು.

“ತೊಗರಿ ಬೆಳೆ ಪ್ಯಾಕೇಜ್ ಬಗ್ಗೆ ಕೆಕೆಆರ್‌ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್ ಮತ್ತು ಇಲ್ಲಿನ ಶಾಸಕರು, ಸಚಿವರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ವರದಿ ಕೇಳಿದ್ದೇನೆ. ವರದಿ ಬಂದ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಈಗಾಗಲೇ ಅನುಭವ ಮಂಟಪ ನಿರ್ಮಾಣ ಅರ್ಧ ಮುಗಿದಿದೆ. ಪೂರ್ಣಗೊಳಿಸಲು ಅಗತ್ಯ ಹಣ ನೀಡಲಾಗಿದೆ. ಇನ್ನೂ ಅಗತ್ಯಬಿದ್ದರೆ ಹಣ ನೀಡಲಾಗುವುದು” ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments