Homeಕರ್ನಾಟಕಕೋವಿಡ್‌ ಅಕ್ರಮ | ಜನಪ್ರತಿಬಿಧಿಗಳು, ಅಧಿಕಾರಿಗಳ ವಿರುದ್ಧ ಮೊದಲ ಎಫ್‌ಐಆರ್‌

ಕೋವಿಡ್‌ ಅಕ್ರಮ | ಜನಪ್ರತಿಬಿಧಿಗಳು, ಅಧಿಕಾರಿಗಳ ವಿರುದ್ಧ ಮೊದಲ ಎಫ್‌ಐಆರ್‌

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ನಿರ್ವಹಣೆ ವೇಳೆ ಮಾಸ್ಕ್, ಪಿಪಿಇ ಕಿಟ್ ಹಾಗೂ ಇತರೆ ಸಲಕರಣೆಗಳ ಖರೀದಿಯಲ್ಲಿ ಸುಮಾರು 167 ಕೋಟಿ ರು. ಅವ್ಯವಹಾರ ನಡೆದಿರುವ ಆರೋಪ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದು ಈ ಅಕ್ರಮ ಸಂಬಂಧ ದಾಖಲಾದ ಮೊದಲ ಎಫ್‌ಐಆರ್ ಆಗಿದೆ.

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮುಖ್ಯ ಲೆಕ್ಕ ಪತ್ರಾಧಿಕಾರಿ ಡಾ.ಎಂ. ವಿಷ್ಣುಪ್ರಸಾದ್ ನೀಡಿದ ದೂರಿನ ಮೇರೆಗೆ ಎನ್.ಡಾ.ಪಿ.ಜಿ.ಗಿರೀಶ್, ಜಿ.ಪಿ.ರಘು, ಕುಟುಂಬ ಮತ್ತು ಕಲ್ಯಾಣ ಇಲಾಖೆಯ ಮುನಿರಾಜು, ಯಶವಂತಪುರ ಕೈಗಾರಿಕಾ ಪ್ರದೇಶದ ಲಾಕ್ ಎಕ್ಸ್‌ಪೋರ್ಟ್ ಕಂಪನಿ, ಮುಂಬೈ ಮೂಲದ ಪುಡೆಂಟ್ ಮ್ಯಾನೇಜ್ ಮೆಂಟ್ ಸಲ್ಯೂಷನ್ಸ್, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಇತರರ ವಿರುದ್ದ ಎಫ್‌ಐ‌ಆರ್‌ ದಾಖಲಾಗಿದೆ.

ದೂರಿನಲ್ಲಿ ಏನು ಉಲ್ಲೇಖಿಸಲಾಗಿದೆ

ಕೋವಿಡ್-19 ಸಂದ ರ್ಭದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮುಖಾಂತರ ಕೋವಿಡ್ ನಿವಾರಣೆಗಾಗಿ ಅತ್ಯವಶ್ಯವಿದ್ದ ಎನ್ 95 ಮಾಸ್ಕ್, ಪಿಪಿಇ ಕಿಟ್ ಹಾಗೂ ಇತರೆ ಸಾಮಗ್ರಿಗಳ ಖರೀದಿ ವೇಳೆ ಸರ್ಕಾರ ನೇಮಿಸಿದ್ದ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು ಹಾಗೂ ಇತರರು ಸೇರಿ ಕೊಂಡು ಕೆಟಿಟಿಪಿ ಕಾನೂನು ಮತ್ತು ಇತರೆ ಕಾನೂನುಗಳನ್ನು ಉಲ್ಲಂಘಿಸಿ ನೂರಾರು ಕೋಟಿ ರು. ಹಣ ದುರ್ಬಳಕೆ ಮಾಡಿದ್ದಾರೆ. ವೈದ್ಯಕೀಯ ಶಿಕ್ಷಣ ಇಲಾಖೆ ಮುಖಾಂತರ ಪಿಪಿಇ ಕಿಟ್, ಎನ್ 95 ಮಾಸ್ಕ್ ಖರೀದಿ ಮಾಡಿರುವ ದಾಖಲೆಗಳ ಪರಿಶೀಲನೆ ವೇಳೆ ಷಡ್ಯಂತ್ರ ಮಾಡಿ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಹಣ ನಷ್ಟವುಂಟು ಮಾಡಿ ಸ್ವಂತ ಲಾಭ ಪಡೆದಿರುವುದು ಕಂಡು ಬಂದಿದೆ.

ಅಂದರೆ, 203.66 ಕೋಟಿ ರು. ಮೌಲ್ಯದ 15 ಲಕ್ಷ ಪಿಪಿಇ ಕಿಟ್ ಹಾಗೂ 9.75 ಕೋಟಿ ರು. ಮೌಲ್ಯದ 42.15 ಲಕ್ಷ ಎನ್ 95 ಮಾಸ್ಕ್ ಖರೀದಿಸಲಾಗಿದೆ. ರಾಜ್ಯದ 17 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಬಳಸಲು ರಾಜ್ಯ ಸರ್ಕಾರ 2020ರ ಆಗಸ್ 18ರಂದು 2.59 ಲಕ್ಷಎನ್ 95 ಮಾಸ್ಕ್‌ ಮತ್ತು 2.59 ಲಕ್ಷಪಿಪಿಇ ಕಿಟ್‌ಗಳನ್ನು ಒಟ್ಟು 41.35 ಕೋಟಿ ರು. ಮೌಲ್ಯದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಇವುಗಳ ಖರೀದಿ ವೇಳೆ ಕೆಟಿಟಿಪಿ ಕಾಯ್ದೆ ಪಾಲಿಸುವಂತೆ ಷರತ್ತು ವಿಧಿಸಿತ್ತು.

ಬಳಿಕ ಇಲಾಖೆ ಕರೆದ ಟೆಂಡರ್‌ನಲ್ಲಿ ಮೂರು ಕಂಪನಿಗಳು ಭಾಗವಹಿಸಿದ್ದವು. ಈ ಪೈಕಿ ಲಾಜ್ ಎಕ್ಸ್‌ಪೋರ್ಟ್ಸ್ ಎಂಬ ಕಂಪನಿ ಒಂದು ಪಿಪಿಇ ಕೆಟ್‌ಗೆ 1,312 ರು. ಬಿಡ್ ಮಾಡಿದ್ದು, ಇದೇ ಕನಿಷ್ಠ ಬಿಡ್ ಆಗಿದ್ದರಿಂದ ಈ ಕಂಪನಿಯಿಂದ ಖರೀದಿಸಲು ಆದೇಶಿಸಲಾಗಿತ್ತು. 15 ದಿನಗಳೊಳಗೆ 2.59 ಲಕ್ಷಪಿಪಿಇ ಕಿಟ್ ಪೂರೈಸಲುಸೂಚಿಸಲಾಗಿತ್ತು. ಆದರೆ, ಈ ಪಿಪಿಇ ಕಿಟ್‌ಗಳನ್ನು 17 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡಿರುವ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಆದರೆ, ಮುಂಬೈ ಮೂಲದ ಕ್ರೂಡೆಂಟ್ ಮ್ಯಾನೇಜೆಂಟ್ ಸಲ್ಯೂಷನ್ಸ್ ಕಂಪನಿಗೆ 2020ರ ಸೆ.19ರಿಂದ ನ.24ರ ನಡುವೆ 41.34 ಕೋಟಿ ರು. ನೀಡಿರುವುದು ದಾಖಲೆಗಳಲ್ಲಿ ಕಂಡು ಬಂದಿದೆ.

ಅಂತೆಯೆ 2.59 ಲಕ್ಷ ಪಿಪಿಇ ಕಿಟ್‌ಗಳ ಜತೆಗೆ ಹೆಚ್ಚುವರಿಯಾಗಿ 55,784 ಪಿಪಿಇ ಕಿಟ್ ಗಳಿಗೆ ಈ ಹಣ ನೀಡಿದ್ದಾರೆ. ಈ ಮೂಲಕ ಈ ಹೆಚ್ಚುವರಿ ಪಿಪಿಇ ಕಿಟ್‌ಗಳಿಗೆ ಯಾವುದೇ ಟೆಂಡರ್‌ ಇಲ್ಲದೆ ಕಾನೂನುಬಾಹಿರವಾಗಿ 7.32 ಕೋಟಿ ರು. ನೀಡಿ ಖರೀದಿಸಿದ್ದಾರೆ. ಅಂತೆಯೆ 1.80 ಕೋಟಿ ರು. ವೆಚ್ಚದಲ್ಲಿ 13,784 ಪಿಪಿಇ ಕಿಟ್‌ಗಳನ್ನು ಯಾವುದೇ ಸರಬರಾಜು ಆದೇಶ ಇಲ್ಲದೆ ಖರೀದಿಸಿ ರುವುದು ದಾಖಲೆಗಳಲ್ಲಿ ಕಂಡು ಬಂದಿದೆ. ಒಟ್ಟಾರೆ ಕೋವಿಡ್ ನಿರ್ವಹಣೆ ವೇಳೆ ಪಿಪಿಇ ಕಿಟ್, ಎನ್ 95 ಮಾಸ್ ಹಾಗೂ ಇತರೆ ಸಲಕರಣೆಗಳ ಖರೀದಿ ವೇಳೆ ಕೆಟಿಟಿಪಿ ಕಾಯ್ದೆ ನಿಯಮ ಉಲ್ಲಂಘಿಸಿ, ಹಲವು ನಿಯಮಗಳನ್ನು ಗಾಳಿಗೆ ತೂರಿ ಸುಮಾರು 167 ಕೋಟಿ ರು. ಅವ್ಯವಹಾರ ನಡೆದಿದೆ. ಈ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

ಹಗರಣದ ತನಿಖೆಗೆ ಎಸ್‌ಐಟಿ ರಚನೆ ಸಾಧ್ಯತೆ

ಭಾರೀ ಪ್ರಮಾಣದ ಕೋವಿಡ್ ಹಗ ರಣದ ತನಿಖೆಗೆ ರಾಜ್ಯ ಸರ್ಕಾರ ಎಸ್ ಐಟಿ ರಚಿಸುವ ಸಾಧ್ಯತೆಯಿದೆ. ಎಫ್ ಐಆರ್ ದಾಖಲಾದ ಬೆನ್ನಲ್ಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಶುಕ್ರವಾರ ಸಂಜೆ ಗೃಹ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ಶನಿವಾರ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸುವ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಕೇಂದ್ರ ವಲಯದ ಐಜಿಪಿ ಲಾಬೂರಾಮ್ ಅವರ ನೇತೃತ್ವದಲ್ಲಿ ಎಸ್‌ಐಟಿ ರಚನೆಯಾಗುವ ಸಾಧ್ಯತೆಯಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments